ಕನ್ನಡಪ್ರಭ ವಾರ್ತೆ ಉಡುಪಿ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ಮಾಡಿಸಿ, ಇಲ್ಲವೇ ಆರೋಪ ಒಪ್ಪಿಕೊಂಡು ಕುರ್ಚಿ ಬಿಡಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.ಸಿದ್ದರಾಮಯ್ಯ ಮತ್ತು ಡಿಕೆಶಿ ಬಿಜೆಪಿ ಸರ್ಕಾರದ ಮೇಲೆ ಪೇಸಿಎಂ ಎಂದೆಲ್ಲ ಆರೋಪ ಮಾಡಿದ್ದರು. 40 ಪರ್ಸೆಂಟ್ ಸರ್ಕಾರ ಎಂದು ಬೋರ್ಡ್ ಹಾಕಿದ್ದರು. ಯಾವ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಹೇಳಿಕೆಯನ್ನು ಆಧರಿಸಿ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದೀರೋ ಅದೇ ಕೆಂಪಣ್ಣ ಈಗ ನಿಮ್ಮ ಮೇಲೂ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸಾರ್ವತ್ರಿಕವಾಗಿ ರೋಷಾವೇಶದಿಂದ 40 ಪರ್ಸೆಂಟ್‌ಗೂ ಹೆಚ್ಚು ಕಮಿಷನ್ ಕೇಳುತ್ತಾರೆ ಎಂದಿದ್ದಾರೆ, ಈಗ ತನಿಖೆ ಮಾಡ್ತಿರೋ ರಾಜೀನಾಮೆ ಕೊಡ್ತೀರೋ ನಿರ್ಧರಿಸಿ ಎಂದು ಹೇಳಿದ್ದಾರೆ.
ಈಗ ಇನ್ನು ಬೇರೆಬೇರೆ ಟ್ಯಾಕ್ಸ್ ಇದೆ ಎಂದು ಕೆಂಪಣ್ಣ ಹೇಳಿದ್ದಾರೆ. ಬೆಳಗಾವಿ ಟ್ಯಾಕ್ಸ್ ಇದ್ಯಾ? ಕನಕಪುರ ಟ್ಯಾಕ್ಸ್ ಇದೆಯಾ? ಈ ಬಗ್ಗೆ ಸದನದಲ್ಲಿ ಮಾತನಾಡುವ, ಆದರೆ ಮುಖ್ಯಮಂತ್ರಿಗಳೇ ನಿಮಗೆ ಕನಿಷ್ಠ ಆಡಳಿತಾತ್ಮಕ ಜವಾಬ್ದಾರಿ ಇದ್ದರೆ, ಆತ್ಮಾಭಿಮಾನ ಇದ್ದರೆ, ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದೆವು ಎಂಬ ಕಲ್ಪನೆ ಇದ್ದರೇ, ಕೆಂಪಣ್ಣ ಆರೋಪದ ಬಗ್ಗೆ ತಕ್ಷಣ ಹೈಕೋರ್ಟ್ ನ್ಯಾಯಮೂರ್ತಿಯವರಿಂದ ತನಿಖೆಗೆ ಆದೇಶ ಮಾಡಿ ಎಂದು ಕೋಟ ಸವಾಲು ಹಾಕಿದ್ದಾರೆ.* ಭಾರತರತ್ನ - ಹೆಮ್ಮೆಯ ಕೆಲಸ
ಮಾಜಿ ಪ್ರಧಾನಮಂತ್ರಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹ ರಾವ್ ಮತ್ತು ಹಸಿರುಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದ ಪ್ರಧಾನಿ ಮೋಧಿ ಅವರಿಗೆ ಅಭಿನಂದನೆ ಎಂದ ಕೋಟ, ಮೋದಿ ಅವರು ವೈಚಾರಿಕ ವಿಚಾರ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ದೇಶಕ್ಕಾಗಿ ಅಪಾರ ಕೆಲಸ ಮಾಡಿದ ವ್ಯಕ್ತಿಗಳಿಗೆ ಭಾರತ ರತ್ನ ನೀಡಿ, ವ್ಯಕ್ತಿತ್ವಕ್ಕೆ ಗೌರವ ನೀಡಿದ್ದಾರೆ. ಈ ಮೂರು ವ್ಯಕ್ತಿಗಳು ಶಕ್ತಿಗಳು ನಮ್ಮ ಭಾರತದ ಆಸ್ತಿ ಆಗಿದ್ದವರು, ಅವರಿಗೆ ಭಾರತ ರತ್ನ ನೀಡುವ ಮೂಲಕ ಕೇಂದ್ರ ಸರ್ಕಾರ ಹೆಮ್ಮೆಯ ಕೆಲಸ ಮಾಡಿದೆ ಎಂದರು.