ಯಲ್ಲಾಪುರ: ಯಾವುದೇ ಫಲಾಪೇಕ್ಷೆ ಹೊಂದದೇ ಬಡವರ, ದೀನ- ದಲಿತರ ಬದುಕಿಗೆ ದಾರಿ ತೋರಿ ಮಾರ್ಗದರ್ಶನ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಧಾಯಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಶ್ಲಾಘಿಸಿದರು.ತಾಲೂಕಿನ ಮಂಚೀಕೇರಿಯ ರಾ.ರಾ. ರಂಗಮಂದಿರದಲ್ಲಿ ನ. ೧೩ರಂದು ಹಮ್ಮಿಕೊಳ್ಳಲಾಗಿದ್ದ ೮ ದಿನಗಳ ೧೮೮೦ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.ಜೀವನದಲ್ಲಿ ತಿಳಿದೋ, ತಿಳಿಯದೆಯೋ ಪರರ ಒತ್ತಾಸೆಯಿಂದಾಗಿ ತಪ್ಪುದಾರಿ ಹಿಡಿದವರಿಗೆ ಯೋಜನೆ ನೆರವಾಗುತ್ತಿರುವುದು ಶ್ಲಾಘನೀಯ. ಈ ಹಿಂದೆ ವಿವಿಧೆಡೆಗಳಲ್ಲಿ ಆಯೋಜಿಸಲಾಗಿದ್ದ ಮದ್ಯವರ್ಜನ ಶಿಬಿರಗಳ ಪ್ರೇರಣೆಯಿಂದಾಗಿ ಅದೆಷ್ಟೋ ಕುಟುಂಬಗಳು ಸುಖ ಕಂಡಿವೆ. ಈ ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಇಚ್ಛಾಶಕ್ತಿ ಮತ್ತು ಮನೋಬಲ ಗಟ್ಟಿಯಾಗಿರಬೇಕು ಎಂದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸಂಸ್ಥಾಪನೆಯ ಕಾರ್ಯ ಮಾಡುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಸಮಾಜ ಸುಧಾರಣೆಯ ಅಂಗವಾದ ಈ ಶಿಬಿರವನ್ನು ಯೋಜನೆ ಆಯೋಜಿಸಿದ್ದು, ಇಲ್ಲಿ ಪಾಲ್ಗೊಂಡವರು ತಮ್ಮ ಸಾಂಸಾರಿಕ ಜವಾಬ್ದಾರಿಯನ್ನು ಗಂಭೀರವಾಗಿ ಪರಿಪಾಲಿಸುವಂತಾಗಬೇಕು ಎಂದರು.ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಸರ್ವತೋಮುಖ ಏಳ್ಗೆಗಾಗಿ ಧ.ಗ್ರಾ.ಯೋ. ಉತ್ತಮ ಕಾರ್ಯ ಮಾಡುತ್ತಿದೆ. ಈ ಶಿಬಿರದ ಮೂಲಕ ದುರ್ಬಲ ಮನಸ್ಸುಗಳನ್ನು ನಿಗ್ರಹಗೊಳಿಸಿ ಜೀವನವನ್ನು ಸುಂದರಗೊಳಿಸುವತ್ತ ಪ್ರೇರಣೆ ನೀಡುತ್ತಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ ಮಾತನಾಡಿ, ಸಭಾಂಗಣದ ತುಂಬ ಶಿಬಿರಾರ್ಥಿಗಳು ಅಚ್ಚುಕಟ್ಟಾಗಿ ಕುಳಿತು ವಿನಯ ತೋರುತ್ತಿರುವುದು ಬೆರಗುಗೊಳಿಸಿದೆ. ಇದಕ್ಕೆ ಧರ್ಮಸ್ಥಳದ ಅದ್ಭುತ ಶಕ್ತಿಯೇ ಕಾರಣವಾಗಿದೆ. ಈ ಸಭಾಂಗಣದಲ್ಲಿ ನಡೆದ ಸಾವಿರಾರು ಕಾರ್ಯಕ್ರಮಗಳಿಗಿಂತ ಇದು ಭಿನ್ನವಾಗಿ ಕಾಣುತ್ತಿದೆ. ಇದು ಮದ್ಯವರ್ಜನ ಶಿಬಿರವಲ್ಲ, ಜೀವನ ಶಿಕ್ಷಣ ಶಿಬಿರವಾಗಿದೆ. ಇಂತಹ ಸಂಘಟನೆ ಅಪೂರ್ವವಾಗಿದ್ದು, ಇಲ್ಲಿ ಪಡೆದ ಸಂಸ್ಕಾರವನ್ನು ಶಿಬಿರಾರ್ಥಿಗಳು ನಿರಂತರ ಉಳಿಸಿ, ಬೆಳೆಸಿಕೊಂಡು, ತಮ್ಮ ಬದುಕನ್ನು ಹಸನಾಗಿಸಿಕೊಳ್ಳಿ ಎಂದರು.ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ರಾಘವೇಂದ್ರ ಭಟ್ಟ ಮಾತನಾಡಿ, ಪ್ರತಿ ಕುಟುಂಬದ ಶ್ರೇಯೋಭಿವೃದ್ಧಿ ಕಾರ್ಯದಲ್ಲಿ ನೆರವಾಗುತ್ತಿರುವ ಧ.ಗ್ರಾ.ಯೋ. ಕ್ರಿಯಾಶೀಲವಾಗಿ ಹಾಸುಹೊಕ್ಕಾಗಿದೆ. ಇಂತಹ ಸಮಾಜಮುಖಿ ಶಿಬಿರಗಳು ಅತ್ಯಂತ ಉಪಯುಕ್ತ ಎಂದರು.ಅಧ್ಯಕ್ಷತೆ ವಹಿಸಿದ್ದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಾ ಹೆಗಡೆ ಕಬ್ಬಿನಗದ್ದೆ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಪ್ರದೇಶದ ವಿವಿಧ ವರ್ಗದ ಜನರಿಗೆ ಹಲವಾರು ಉಪಯುಕ್ತ ನೆರವು ನೀಡಿದೆ ಎಂದರು.ಕುಂದರಗಿ ಗ್ರಾಪಂ ಸದಸ್ಯರಾದ ಗಣೇಶ ಹೆಗಡೆ, ಪ್ರಕಾಶ ನಾಯ್ಕ, ಹಾಸಣಗಿ ಗ್ರಾಪಂ ಉಪಾಧ್ಯಕ್ಷ ಪುರಂದರ ನಾಯ್ಕ, ಕಂಪ್ಲಿ ಗ್ರಾಪಂ ಸದಸ್ಯ ಪವನಕುಮಾರ ಕೇಸರಕರ, ಮಂಚೀಕೇರಿ ಎಎಸ್‌ಐ ದೀಪಕ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರವಿ ಭಟ್ಟ ಬರಗದ್ದೆ, ಯೋಗಶಿಕ್ಷಕ ನಾರಾಯಣ ಶೇರುಗಾರ ಉಪಸ್ಥಿತರಿದ್ದರು. ಶಿಬಿರದ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತಲ್ಲದೇ, ಕಾರ್ಯಕ್ರಮ ಸಂಘಟನೆಗಾಗಿ ಶ್ರಮಿಸಿದ ಕಾರ್ಯಕರ್ತರನ್ನು ಗೌರವಿಸಲಾಯಿತು. ಯೋಜನಾಧಿಕಾರಿ ಹನುಮಂತ ನಾಯ್ಕ ಸ್ವಾಗತಿಸಿದರು. ಉಡುಪಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ ಆಚಾರ್ಯ ನಿರ್ವಹಿಸಿದರು. ಯೋಜನೆಯ ಮೇಲ್ವಿಚಾರಕ ಯಲ್ಲಪ್ಪ ಹೊಸಮನಿ ವಂದಿಸಿದರು.