‘ನಾನು ಏಳೆಂಟು ಕೇಸ್ ಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಬಿಜೆಪಿಯವರು ಒಂದೇ ಒಂದು ಕೇಸನ್ನಾದರೂ ಸಿಬಿಐ ತನಿಖೆಗೆ ಕೊಟ್ಟಿದ್ದಾರೆಯೇ ಹೇಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.
ಮೈಸೂರು : ‘ನಾನು ಏಳೆಂಟು ಕೇಸ್ ಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಬಿಜೆಪಿಯವರು ಒಂದೇ ಒಂದು ಕೇಸನ್ನಾದರೂ ಸಿಬಿಐ ತನಿಖೆಗೆ ಕೊಟ್ಟಿದ್ದಾರೆಯೇ ಹೇಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಒಂದೇ ಒಂದು ಪ್ರಕರಣವನ್ನೂ ಸಿಬಿಐಗೆ ನೀಡದ ಬಿಜೆಪಿಯವರು ನಮಗೆ ಏನು ಪಾಠ ಮಾಡುವುದು?. ಸಿಬಿಐಗೆ ವಹಿಸಿ ಎಂದು ಕೇಳುವ ನೈತಿಕತೆ ಬಿಜೆಪಿಗೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಜನಾರ್ದನ ರೆಡ್ಡಿ ಅವರದ್ದು ಗೂಂಡಾ ಸಂಸ್ಕೃತಿ
ಜನಾರ್ದನ ರೆಡ್ಡಿ ಅವರದ್ದು ಗೂಂಡಾ ಸಂಸ್ಕೃತಿ. ಅವರಿಗೆ ಯಾವ ಸಂಸ್ಕಾರವೂ ಇಲ್ಲ. ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಜನಾರ್ದನ ರೆಡ್ಡಿ. ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನು ಮತ್ತು ಇಬ್ರಾಹಿಂ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆವು. ಆಗ ನಮಗೆ ಪ್ರಚಾರಕ್ಕೆ ಜಾಗವನ್ನು ಕೂಡ ಕೊಡಲಿಲ್ಲ. ಕೊನೆಗೆ ನಾವು ಕುರುಬರ ದೇವಸ್ಥಾನದಲ್ಲಿ ನಿಂತು ಪ್ರಚಾರ ಮಾಡಿ ಬಂದೆವು. ಇಂತಹ ರೆಡ್ಡಿ ನಮಗೇನು ಪಾಠ ಮಾಡುತ್ತಾರೆ? ಎಂದರು.
ಅಬಕಾರಿ ಡಿಸಿ ಮೇಲಿನ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯಿಸಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಾವು ಯಾರ ರಕ್ಷಣೆಯನ್ನೂ ಮಾಡುವುದಿಲ್ಲ. ಆಡಿಯೋದಲ್ಲಿ ಸಚಿವರ ಹೆಸರು ಬಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಶೇ.40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದು ನಾನಲ್ಲ, ಗುತ್ತಿಗೆದಾರರು ಎಂದರು.
ಸುತ್ತೂರು: 3 ಕಿ.ಮೀ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಸಿಎಂ:
ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಜನವೋ ಜನ. ಇದರ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಬೇಕಾಯಿತು. ಈ ಸಂದರ್ಭದಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಾಳ್ಮೆ ಕಳೆದುಕೊಂಡು ಬೈಕ್ ಸವಾರನಿಗೆ ಕಾಲಿನಿಂದ ಒದೆಯಲು ಹೋದ ಪ್ರಸಂಗ ಜರುಗಿದೆ.
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ನಂತರ ರಸ್ತೆ ಮಾರ್ಗವಾಗಿ ಸುತ್ತೂರಿಗೆ ತೆರಳಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲಿ ಊಟದ ವಿರಾಮದವರೆಗೂ ಸಿಎಂ ಇರಬಹುದು ಎಂದು ಎಲ್ಲರೂ ಎಣಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಿ.ನರಸೇಗೌಡ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ತರಾತುರಿಯಲ್ಲಿ ಹೊರಟರು. ಇದು ಗೊಂದಲಕ್ಕೆ ಕಾರಣವಾಯಿತು.
ಸಿಎಂ ಇಷ್ಟು ಬೇಗ ಹೊರಡುತ್ತಾರೆ ಎಂದು ನಿರೀಕ್ಷೆ ಮಾಡದ ಪೊಲೀಸರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಗಮನ ಹರಿಸಲಿಲ್ಲ. ಸಿಎಂ ದಿಢೀರ್ ಹೊರಟಿದ್ದರಿಂದ ಸುಮಾರು ಮೂರು ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು. ಈ ಹಂತದಲ್ಲಿ ಮೈಸೂರಿಗೆ ಇತ್ತೀಚೆಗೆ ಎಸ್ಪಿ ಆಗಿ ಬಂದಿರುವ ಮಲ್ಲಿಕಾರ್ಜುನ ಬಾಲದಂಡಿ ಅವರು, ತಾಳ್ಮೆ ಕಳೆದುಕೊಂಡು ಬೈಕ್ ಸವಾರನಿಗೆ ಕಾಲಿನಿಂದ ಒದೆಯಲು ಹೋದ ಘಟನೆ ಜರುಗಿದೆ. ನಂತರ, ಸಾಕಷ್ಟು ಹರಸಾಹಸ ಮಾಡಿ, ಸಿಎಂ ವಾಹನ ತೆರಳಲು ಸ್ಥಳ ಮಾಡಿಕೊಡಲಾಯಿತು.
