ಹರಿಹರ ತಾಲೂಕಿನ ದುಗ್ಗಾವತಿ, ಚಿಕ್ಕಬಿದರೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಭೂ ಕಬಳಿಕೆ, ಕಾಡಜ್ಜಿ ಕೃಷಿ ಕೇಂದ್ರದ ಬಳಿಯಿಂದ ಅಕ್ರಮ ಮಣ್ಣು ಸಾಗಾಟ, ಸುಳ್ಳು ಅಟ್ರಾಸಿಟಿ ಕೇಸ್, ಜಿಲ್ಲಾ ಸಚಿವರ ಅಕ್ರಮ, ಭ್ರಷ್ಟಾಚಾರದ ವಿರುದ್ಧ ಜ.19ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಹರಿಹರ ಶಾಸಕ ಬಿ.ಪಿ. ಹರೀಶ ಹೇಳಿದ್ದಾರೆ.
- ದಾವಣಗೆರೆಯಲ್ಲಿ ನಾಯಕರ ನೇತೃತ್ವ: ಶಾಸಕ ಹರೀಶ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹರಿಹರ ತಾಲೂಕಿನ ದುಗ್ಗಾವತಿ, ಚಿಕ್ಕಬಿದರೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಭೂ ಕಬಳಿಕೆ, ಕಾಡಜ್ಜಿ ಕೃಷಿ ಕೇಂದ್ರದ ಬಳಿಯಿಂದ ಅಕ್ರಮ ಮಣ್ಣು ಸಾಗಾಟ, ಸುಳ್ಳು ಅಟ್ರಾಸಿಟಿ ಕೇಸ್, ಜಿಲ್ಲಾ ಸಚಿವರ ಅಕ್ರಮ, ಭ್ರಷ್ಟಾಚಾರದ ವಿರುದ್ಧ ಜ.19ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಹರಿಹರ ಶಾಸಕ ಬಿ.ಪಿ. ಹರೀಶ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದು, ಜಿಲ್ಲಾ ಸಚಿವರ ಅಕ್ರಮ, ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆಗೆ ಬಿಜೆಪಿ ರಾಜ್ಯ ಸಮಿತಿ ಸೂಚನೆಯಂತೆ ಸೋಮವಾರ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒಳಗೊಂಡಂತೆ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ದಾವಣಗೆರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜ.19ರಂದು ಬೆಳಗ್ಗೆ 11 ಗಂಟೆಗೆ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಹದಡಿ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ತೆರಳಿ, ಸಾಕ್ಷ್ಯಾಧಾರ ಸಮೇತ ಲಿಖಿತ ದೂರು ನೀಡಲಿದ್ದೇವೆ. ಕಾಡಜ್ಜಿ ಗ್ರಾಮದ ಮಣ್ಣು ಸಾಗಾಣಿಕೆ ವೇಳೆ ಸ್ಥಳದಲ್ಲಿದ್ದ ಲಾರಿಗಳು, ಕಾರುಗಳು, ಬಂದಿದ್ದ ವ್ಯಕ್ತಿಗಳು ಸೇರಿದಂತೆ ಎಲ್ಲಾ ಸಾಕ್ಷ್ಯಗಳನ್ನೂ ನೀಡಿ, ಗ್ರಾಮಾಂತರ ಪೊಲೀಸರಿಗೆ ದೂರು ನೀಡುತ್ತೇವೆ. ಕಠಿಣ ಕ್ರಮ ಕೈಗೊಳ್ಳದಿದ್ದೆ ನಮ್ಮ ಹೋರಾಟ ರಾಜ್ಯವ್ಯಾಪಿ ವಿಸ್ತರಿಸುತ್ತೇವೆ ಎಂದು ಅವರು ಎಚ್ಚರಿಸಿದರು.
ಕಾಡಜ್ಜಿ, ಬಾತಿ ಗುಡ್ಡ ಸೇರಿದಂತೆ ಅನೇಕ ಕಡೆಗಳಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೆ, ತಾವು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇನೆ ಎನ್ನುತ್ತಾರೆ. ಅಧಿಕಾರಿಗಳು ಸಚಿವರ ದೌರ್ಜನ್ಯಕ್ಕೆ ಬೇಸತ್ತು ಹೋಗಿದ್ದಾರೆ. ಅಕ್ರಮ ಮಣ್ಣು ಸಾಗಾಟ ತಡೆಯಲು ಪೊಲೀಸ್, ಕೃಷಿ ಅಧಿಕಾರಿಗಳ ಸಮೇತವೇ ಕಾಡಜ್ಜಿಗೆ ಹೋಗಿದ್ದೆ. ಆದರೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಿಂಬಾಲಕರು ಬಂದು, ದಬ್ಬಾಳಿಕೆ ಮಾಡಿದರು ಎಂದು ಆರೋಪಿಸಿದರು.ತಮ್ಮ ಆಪ್ತ ಸಹಾಯಕನಿಗೆ ಸಚಿವರ ಬೆಂಬಲಿಗರು ಮನಬಂದಂತೆ ಥಳಿಸಿದ್ದಾರೆ. ಫೋನ್‌ನಲ್ಲಿ ಮಾತನಾಡುತ್ತಾ, ಹೊಡೆಯಿರಿ ಹೊಡೆಯಿರಿ ಎಂಬುದಾಗಿ ಹೇಳಿ, ದೌರ್ಜನ್ಯ ಮಾಡಿದ್ದಾರೆ. ಕಾಡಜ್ಜಿ ಗ್ರಾಮಸ್ಥರಾಗಲೀ, ಆ ಗ್ರಾಮದ ರೈತರಾಗಲೀ ಸ್ಥಳದಲ್ಲಿ ಇರಲಿಲ್ಲ. ನಾನು ಯಾರಿಗೂ ಅವಾಚ್ಯವಾಗಿ ನಿಂದಿಸಿಲ್ಲ. ಆದರೂ, ನನ್ನ ವಿರುದ್ಧ ಕಾಂತರಾಜು ಎಂಬಾತನಿಂದ ಜಾತಿ ನಿಂದನೆ ಕೇಸ್ ಮಾಡಿಸಿದ್ದಾರೆ. ಆತ ಸ್ಥಳದಲ್ಲೇ ಇರಲಿಲ್ಲವೆಂದ ಮೇಲೆ ಆತನಿಗೆ ನಾನು ಹೇಗೆ ಜಾತಿ ನಿಂದನೆ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಘಟನೆ ದಿನವೇ ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಸಚಿವರ ಅಧ್ಯಕ್ಷತೆಯ ಕೆಡಿಪಿ ತ್ರೈಮಾಸಿಕ ಸಭೆಯಲ್ಲೇ ಪ್ರಸ್ತಾಪಿಸಿದ್ದೆ. ಎಸ್.ಎಸ್. ಮಲ್ಲಿಕಾರ್ಜುನ ಸಭೆಯ ಅರ್ಧಕ್ಕೆ ಸಂಸದರನ್ನು ಕರೆದೊಯ್ದರು. ಘಟನೆ ಕುರಿತಂತೆ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದೆ. ಕಾಂಗ್ರೆಸ್‌ನ ನಾಲ್ವರೂ ಶಾಸಕರೂ ನನಗೆ ಬೆಂಬಲಿಸಿದರು. ಅಧಿಕಾರಿಗಳು ಎಫ್ಐಆರ್ ದಾಖಲಿಸಿ, ನನ್ನನ್ನು ಮನೆಗೆ ಕಳಿಸುತ್ತೇನೆಂದರು. ಆಗ ಕಾಂಗ್ರೆಸ್ಸಿನ ಶಾಸಕರಾದ ಡಿ.ಜಿ. ಶಾಂತನಗೌಡ, ಬಸವರಾಜ ಶಿವಗಂಗಾ, ಕೆ.ಎಸ್. ಬಸವಂತಪ್ಪ ಈ ಬಗ್ಗೆ ಕ್ರಮ ಕೈಗೊಂಡು, ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು ಎಂದು ವಿವರಿಸಿದರು.ರಾತ್ರಿಯಾದರೂ ಅಲ್ಲೇ ಇರುತ್ತೇನೆಂದರೂ ಅಧಿಕಾರಿಗಳೂ ಮಾತ್ರ ಏನೂ ಇಲ್ಲದ ಎಫ್ಐಆರ್ ದಾಖಲು ಮಾಡಿದ್ದಾರೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಕಾಡಜ್ಜಿ ಕೃಷಿ ಫಾರಂಗೆ ಭೇಟಿ ನೀಡುವುದಾಗಿ ಸಭೆಯಲ್ಲೇ ಹೇಳಿದ್ದರೂ ಈವರೆಗೂ ಅಲ್ಲಿಗೆ ಭೇಟಿ ನೀಡಿಲ್ಲ. ಸಾಕ್ಷ್ಯಗಳಿದ್ದರೂ ಇದುವರೆಗೆ ಯಾವುದೇ ಕ್ರಮವನ್ನೇ ಕೈಗೊಂಡಿಲ್ಲ ಎಂದು ಹರೀಶ ದೂರಿದರು.
ಬಿಜೆಪಿ ಮುಖಂಡರಾದ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಯಶವಂತರಾವ್ ಜಾಧವ್, ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿ.ಟಿ.ಸಿದ್ದಪ್ಪ, ಎಂ.ಹಾಲೇಶ, ರಮೇಶ ನಾಯ್ಕ ಇತರರು ಇದ್ದರು. - - -(ಬಾಕ್ಸ್)
* ಕೇಸ್ ಆಗಿದ್ದಕ್ಕೆ ನಾನೆಲ್ಲಿಗೂ ಓಡಿ ಹೋಗಿಲ್ಲ: ಕಾಂಗ್ರೆಸ್‌ಗೆ ತಿರುಗೇಟು- ಅಟ್ರಾಸಿಟಿ ಕೇಸ್ ಹಿನ್ನೆಲೆ ಮನೆಯಲ್ಲಿದ್ದೆ: ಬಿ.ಪಿ.ಹರೀಶ ಸ್ಪಷ್ಟನೆ ದಾವಣಗೆರೆ: ಜಾತಿ ನಿಂದನೆ ಕೇಸ್ ಆಗಿದೆಯೆಂದು ನಾನು ಎಲ್ಲಿಗೂ ಓಡಿಹೋಗಿಲ್ಲ. ಕಾನೂನಿಗೆ ಬೆಲೆ ಕೊಟ್ಟು ನನ್ನ ಮನೆಯಲ್ಲೇ ಇದ್ದೇ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸ್ಪಷ್ಟಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಭ್ರಷ್ಟಾಚಾರ, ಅವ್ಯವಹಾರ, ಕಾನೂನುಬಾಹಿರ ಕೆಲಸಗಳನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಜಾತಿ ನಿಂದನೆ ಕೇಸ್ ಮಾಡಿಸಿದ್ದಾರೆ. ಅಟ್ರಾಸಿಟಿ ಕೇಸ್ ದಾಖಲಾಗಿದ್ದರಿಂದ ಸಾರ್ವಜನಿಕವಾಗಿ ಓಡಾಡಬಾರದು. ಕಾನೂನಿಗೆ ಗೌರವ ಕೊಟ್ಟು ಹೊರಗೆ ಬಂದಿಲ್ಲ. ಹರಿಹರ ಕಾಂಗ್ರೆಸ್ ಮುಖಂಡರು ನಾನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಓಡಿ ಹೋಗಿದ್ದೇನೆಂದಿದ್ದಾರೆ. ಇದು ಶುದ್ಧ ಸುಳ್ಳು ಎಂದರು.- - -
-18ಕೆಡಿವಿಜಿ1, 2:ದಾವಣಗೆರೆಯಲ್ಲಿ ಭಾನುವಾರ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಹೋರಾಟ ಕುರಿತು ಮಾಹಿತಿ ನೀಡಿದರು.