ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಭಾನುವಾರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಸಿಂಧುವಾಳ, ಎಂ.ಗೋನಾಳ್, ಜಾಲಿಹಾಳ, ಬೊಮ್ಮನಹಾಳ ಮತ್ತು ಡಿ.ನಾಗೇನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ಮತ ಪ್ರಚಾರ ನಡೆಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದ ಜನರು ಉತ್ಸಾಹದಿಂದ ಮತದಾನ ಮಾಡಿ, ನನ್ನನ್ನು ಚುನಾಯಿಸಿದಂತೆಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಕಾರಾಂ ಅವರಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿ, ಸಂಸತ್‌ಗೆ ಕಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಬಡ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಬಡ ಕುಟುಂಬಗಳಿಗೆ ನೀಡುವ ಅಕ್ಕಿ ವಿತರಣೆ, ಇನ್ನೂರು ಯೂನಿಟ್ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಎರಡು ಸಾವಿರ ರುಪಾಯಿ ಜಮೆ ಮಾಡುವ ಮೂಲಕ ಬಡ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡುವ ಕಾಳಜಿಯ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಆದರೆ, ಬಿಜೆಪಿಯವರು ಯಾವುದೇ ಕೆಲಸ ಮಾಡದೆ ಜನರ ಬಳಿ ಓಟು ಕೇಳಲು ಬರುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಪ್ರಗತಿಯ ಕಾರ್ಯಗಳನ್ನು ಮಾಡದೆ, ಬರೀ ಧರ್ಮದ ಹೆಸರಿನಲ್ಲಿ ದೇಶ ಆಳಿದೆ ಎಂದು ಟೀಕಿಸಿದರು.ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾಯಿಸಬೇಕು ಎಂದು ಸಚಿವ ಬಿ.ನಾಗೇಂದ್ರ ಕೋರಿದರು.
ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್, ಅಣ್ಣಾ ನಾಗರಾಜ್, ಗೋವರ್ಧನ್ ರೆಡ್ಡಿ, ಬಗರ್ ಹುಕುಂ ಕಮೀಟಿ ಅಧ್ಯಕ್ಷ ಎಚ್.ತಿಮ್ಮನಗೌಡ, ಗೋನಾಳ ವಿರುಪಾಕ್ಷಗೌಡ, ಬೆಣಕಲ್ಲು ಬಸವರಾಜ ಗೌಡ, ಯರ್ರಗುಡಿ ಮುದಿಮಲ್ಲಯ್ಯ, ಶ್ರೀನಾಥ್ ಸೇರಿದಂತೆ ಗ್ರಾಮಗಳ ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.