ನರೇಗಲ್ಲ: ದೇಶವನ್ನು ಅಭಿವೃದ್ಧಿಗೊಳಿಸಲು ಮೋದಿಯವರನ್ನು ಪ್ರಧಾನಿ ಮಾಡಿ ಅವರ ಋಣ ತೀರಿಸಲು ಬಿಜೆಪಿಗೆ ಮತ ನೀಡಬೇಕು ಎಂದು ಮಾಜಿ ಸಿಎಂ ಹಾಗೂ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ದೇಶದಲ್ಲಿ ಮೋದಿ ದೊಡ್ಡ ಪ್ರಮಾಣದ ಬದಲಾವಣೆ ಮಾಡಿದ್ದಾರೆ. ಬೆಳೆ ಹಾನಿಯಾದಾಗ ಎಂಎಸ್‌ಪಿ ಎರಡು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ರೈತರಿಗೆ ₹10 ಸಾವಿರ ನೀಡಿದ್ದಾರೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟು ವರ್ಷ ಆಗಿದ್ದರೂ ಎಲ್ಲ ಮನೆಗಳಿಗೆ ನೀರು ಕೊಡುವ ಕೆಲಸ ಮಾಡಿರಲಿಲ್ಲ. ನಾನು ಸಿಎಂ ಆಗಿದ್ದಾಗ ಮನೆಗಳಿಗೆ ನಲ್ಲಿ ನೀರು ಕೊಡುವುದರಲ್ಲಿ ಕರ್ನಾಟಕ 20ನೇ ಸ್ಥಾನದಲ್ಲಿತ್ತು. ನಾನು ಸಿಎಂ ಆದ ಮೇಲೆ ನಂಬರ್ ಒನ್ ಸ್ಥಾನಕ್ಕೆ ಬಂದಿದೆ ಎಂದರು.
ಪ್ರಧಾನಿ ಅವರು ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡಿಸಿದರು. ಕಾಂಗ್ರೆಸ್ ನವರೂ ಲಸಿಕೆ ತೆಗೆದುಕೊಂಡಿದ್ದಾರೆ. ಜೀವ ಉಳಿಸಿದ ನರೇಂದ್ರ ಮೋದಿ ಉಪಕಾರ ತೀರಿಸಲು ಅವರಿಗೆ ಮತ ಹಾಕಬೇಕು. ಮನೆ ಮನೆಗೆ ನೀರು ಕೊಟ್ಟಿರುವ ಮೋದಿಯವರ ಋಣ ತೀರಿಸಲು ಮೋದಿಗೆ ಮತ ಹಾಕಬೇಕು. ಪ್ರತಿಯೊಂದ ಮತವೂ ಮೋದಿಯವರನ್ನು ಪ್ರಧಾನಿ ಮಾಡಲು ಹಾಕಬೇಕು ಎಂದು ಮನವಿ ಮಾಡಿದರು.ಬಡತನ ನಿರ್ಮೂಲನೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ.ಅವರ ನಾಯಕತ್ವದಲ್ಲಿ 12 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ ಎಂದರು.
ರಾಜ್ಯ ಸರ್ಕಾರ ಇದುವರೆಗೂ ಬರ ಪರಿಹಾರ ನೀಡಿಲ್ಲ. ರೈತರ ಅಕೌಂಟ್ ಗೆ ₹2000 ಕೊಡುವುದಾಗಿ ಹೇಳಿದ್ದಾರೆ. ಯಾರಿಗೂ ತಲುಪಿಲ್ಲ. ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ಯಶಸ್ವಿನಿ ಯೋಜನೆ ನಿಲ್ಲಿಸಿದ್ದಾರೆ. ಮತ್ತೆ ರೈತರ ಪರ ಸರ್ಕಾರ ಬರಬೇಕೆಂದರೆ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದರು.