- ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ । ಹೈಟೆಕ್ ಶೌಚಾಲಯ ಕಳಪೆ ವಿರುದ್ಧ ಕ್ರಮಕ್ಕೆ ಸೂಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆ, ಗಾಳಿಯಿಂದ ಬೆಳೆ ಹಾನಿಯಾದ ತೋಟಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ, ಗಾಳಿಗೆ ಅಡಕೆ ಮರಗಳು ನೆಲಕ್ಕುರುಳಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಸರ್ಕಾರದಿಂದ ಪರಿಹಾರ ಕೊಡಿಸುವಂತೆ ರೈತರು ಶಾಸಕರಿಗೆ ಮನವಿ ಮಾಡಿದರು. ಸ್ಪಂದಿಸಿದ ಶಾಸಕರು, ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ ಬೆಳೆನಷ್ಟ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಸಂಪರ್ಕಿಸಿ ಸೂಚನೆ ನೀಡಿದರು.
ಕ್ಷೇತ್ರದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಆದರೆ ಈ ಬಾರಿ ಬರಗಾಲ ಎದುರಾಗಿ ರೈತರು ಕಂಗಾಲಾಗಿದ್ದಾರೆ. ಆದರೂ, ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ವಿಮೆ ಪಾವತಿಸಿದರೆ, ಇನ್ನು ಕೆಲವು ಗ್ರಾಪಂಗಳಲ್ಲಿ ವಿಮೆ ಪಾವತಿಸಿಲ್ಲ. ಈಗ ಗಾಳಿ, ಮಳೆಗೆ ಬೆಳೆ ಹಾನಿಗೀಡಾದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು ಬೆಳೆ ವಿಮೆ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಬಳಿಕ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕರು, ಪರಿಶೀಲನೆ ನಡೆಸಿದರು. ಶಾಲೆ ಕೊಠಡಿಗಳಲ್ಲಿ ಶಿಥಿಲಗೊಂಡು ಆರ್‌ಸಿಸಿ ಕಟ್ಟಡದಲ್ಲಿ ಚಕ್ಕಳ ಕಿತ್ತುಬಂದಿವೆ. ಇದರಿಂದ ಮಳೆ ಬಂದಾಗ ಕಟ್ಟಡ ಸೋರುತ್ತಿವೆ ಎಂದು ಗ್ರಾಮಸ್ಥರು ಶಾಸಕರಿಗೆ ಶಾಲೆ ಸಮಸ್ಯೆ ಬಿಚ್ಚಿಟ್ಟರು.
ಇದೇ ಸಂದರ್ಭ ಶಾಲೆ ಆವರಣದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಾಲಯ ಕಾಮಗಾರಿಯನ್ನೂ ಶಾಸಕ ಬಸವಂತಪ್ಪ ಪರಿಶೀಲಿಸಿದರು. ಈ ವೇಳೆ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಕಳಪೆ ಆಗಿರುವುದನ್ನು ಕಂಡು ಗುತ್ತಿಗೆದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮಗಾರಿ ಕುರಿತು ಮಾಹಿತಿ ನೀಡಿ, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಸೂಚನೆ ನೀಡಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.
- - -
- - - -14ಕೆಡಿವಿಜಿ34ಃ:
ಮಾಯಕೊಂಡ ವ್ಯಾಪ್ತಿಯ ಹೊನ್ನಾಯಕನಹಳ್ಳಿಯಲ್ಲಿ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.