ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿ ಪರಿಣಾಮ ರಸ್ತೆ ಬದಿಗಳಲ್ಲಿ ಎದ್ದು ನಿಂತಿದ್ದ ಬೃಹತ್ ಕಟೌಟ್‌ಗಳು, ಪ್ಲೆಕ್ಸ್ ಬ್ಯಾನರ್‌ಗಳು ಒಂದೊಂದಾಗಿ ಧರೆಗುರುಳುತ್ತಿವೆ. ಜನರ ಗಮನ ಸೆಳೆಯಲು ಹಾಕಲಾಗಿದ್ದ ಈ ಬೃಹತ್ ಜಾಹೀರಾತು ಫಲಕಗಳು ಇದೀಗ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.
ಕಾರ್ಕಳ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿ ಪರಿಣಾಮ ರಸ್ತೆ ಬದಿಗಳಲ್ಲಿ ಎದ್ದು ನಿಂತಿದ್ದ ಬೃಹತ್ ಕಟೌಟ್‌ಗಳು, ಪ್ಲೆಕ್ಸ್ ಬ್ಯಾನರ್‌ಗಳು ಒಂದೊಂದಾಗಿ ಧರೆಗುರುಳುತ್ತಿವೆ. ಜನರ ಗಮನ ಸೆಳೆಯಲು ಹಾಕಲಾಗಿದ್ದ ಈ ಬೃಹತ್ ಜಾಹೀರಾತು ಫಲಕಗಳು ಇದೀಗ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.
ನಗರಗಳ ಪ್ರಮುಖ ವೃತ್ತಗಳು, ಹೆದ್ದಾರಿ ಬದಿ, ಫುಟ್‌ಪಾತ್, ವಿದ್ಯುತ್ ಕಂಬಗಳ ಸುತ್ತಮುತ್ತ, ಗ್ರಾಮೀಣ ರಸ್ತೆಗಳ ಪಕ್ಕ ಹಾಗೂ ಕಟ್ಟಡಗಳ ಮೇಲ್ಭಾಗಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳು ಗಾಳಿ-ಮಳೆ ಹೊಡೆತಕ್ಕೆ ತುತ್ತಾಗಿ ನೆಲಕ್ಕುರುಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಕೆಲವೆಡೆ ಕಟೌಟ್‌ಗಳನ್ನು ಹಿಡಿದಿಟ್ಟಿದ್ದ ಕಬ್ಬಿಣದ ರಚನೆಗಳೇ ಸಡಿಲಗೊಂಡು ಬೀಳುತ್ತಿದ್ದು, ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿರುಗಾಳಿ ಬೀಸುವ ವೇಳೆ ಹರಿದು ಬರುವ ಪ್ಲೆಕ್ಸ್‌ಗಳು ವಾಹನಗಳ ಮೇಲೆ ಬೀಳುವ ಭೀತಿ ಕಾಡುತ್ತಿದೆ. ರಸ್ತೆ ಮಧ್ಯೆ ಅಥವಾ ಬದಿಯಲ್ಲಿ ಬಿದ್ದಿರುವ ಕಟೌಟ್‌ಗಳು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತಿವೆ.ಧರೆಗೆ ಉರುಳಿದ ಅನೇಕ ಬ್ಯಾನರ್‌ಗಳು ದಿನಗಟ್ಟಲೆ ಅಲ್ಲೇ ಬಿದ್ದಿರುತ್ತವೆ. ಅವುಗಳನ್ನು ತೆರವುಗೊಳಿಸುವ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಪರಿಣಾಮ ವಾಹನ ಸವಾರರು ಪ್ರತಿ ದಿನವೂ ಅಪಾಯದ ನಡುವೆ ಸಂಚರಿಸುವಂತಾಗಿದೆ.ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು ಅಳವಡಿಸಲಾದ ಫಲಕಗಳ ಜೊತೆಗೆ ಯಾವುದೇ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಅಳವಡಿಸಿರುವ ಅಕ್ರಮ ಬ್ಯಾನರ್‌ಗಳ ಸಂಖ್ಯೆಯೂ ಕಡಿಮೆ ಇಲ್ಲ ಎಂಬುದು ಸಾರ್ವಜನಿಕರ ಆರೋಪ. ಮಳೆಯಿಂದ ಮಣ್ಣು ಸಡಿಲಗೊಳ್ಳುವ ಕಾರಣ ಇಂತಹ ರಚನೆಗಳು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿವೆ.ಮಳೆಗಾಲದಲ್ಲಿ ಮರ ಬೀಳುವ ಭಯ ಒಂದು ಕಡೆಯಾದರೆ, ಕಟೌಟ್‌ಗಳು ಮತ್ತು ಹೋರ್ಡಿಂಗ್‌ಗಳು ಯಾವಾಗ ತಲೆ ಮೇಲೆ ಬೀಳುತ್ತವೆಯೋ ಎಂಬ ಆತಂಕ ಮತ್ತೊಂದೆಡೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.ಇತ್ತೀಚಿನ ಮಳೆಯಲ್ಲಿ ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಕಟೌಟ್ ಗಳು ಧರೆಗುರುಳಿವೆ. ಉದ್ಯೋಗಕ್ಕಾಗಿ ರಸ್ತೆಯಲ್ಲಿ ಸಾಗುವ ಕಾರಣ ಅಪಾಯ ಕಟ್ಟಿಟ್ಟ ಬುತ್ತಿ. -ನಾಗೇಶ್ ಶಿವಪುರ, ಸ್ಥಳೀಯರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.