ಮಲ್ಪೆಯಲ್ಲಿ ಮಧ್ವಚಾರ್ಯರ ಮೂರ್ತಿ ಸ್ಥಾಪನೆ ಆಶಯ: ಅದಮಾರು ಶ್ರೀ

KannadaprabhaNewsNetwork |  
Published : May 16, 2026, 01:45 AM IST
  ಮಠಾಧೀಶರು ಕಾರ್ಯಕ್ರಮದಂಗವಾಗಿ ಆಯೋಜಿಸಲಾದ ಕೃಷಿ ಮೇಳವನ್ನು ವೀಕ್ಷಿಸಿದರು | Kannada Prabha

ಸಾರಾಂಶ

ಆಚಾರ್ಯ ಮಧ್ವರ ಭಕ್ತಿಗೆ ಒಲಿದುಬಂದ ಕೃಷ್ಣನಿಂದ ಉಡುಪಿ ಪ್ರಸಿದ್ಧವಾಯಿತು. ಆದರೆ ಕೃಷ್ಣ ದ್ವಾರಕೆಯಿಂದ ಹಡಗಿನ ಮೂಲಕ ಉಡುಪಿಗೆ ಬರುವ ಮುನ್ನ ನೆಲೆಯಾದ ಸ್ಥಳ ಮಲ್ಪೆ ಕೂಡ ಅತ್ಯಂತ ಪವಿತ್ರವಾದುದು. ಆದ್ದರಿಂದ ಈ ಕ್ಷೇತ್ರ ಕೂಡ ಪ್ರಸಿದ್ಧವಾಗಬೇಕು. ಆ ಮೂಲಕ ಮಲ್ಪೆ ನಮ್ಮೆಲ್ಲರ ಬದುಕಿಗೆ ದೀಪಸ್ತಂಭವಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಿಸಿದರು.

ಉಡುಪಿ: ಆಚಾರ್ಯ ಮಧ್ವರ ಭಕ್ತಿಗೆ ಒಲಿದುಬಂದ ಕೃಷ್ಣನಿಂದ ಉಡುಪಿ ಪ್ರಸಿದ್ಧವಾಯಿತು. ಆದರೆ ಕೃಷ್ಣ ದ್ವಾರಕೆಯಿಂದ ಹಡಗಿನ ಮೂಲಕ ಉಡುಪಿಗೆ ಬರುವ ಮುನ್ನ ನೆಲೆಯಾದ ಸ್ಥಳ ಮಲ್ಪೆ ಕೂಡ ಅತ್ಯಂತ ಪವಿತ್ರವಾದುದು. ಆದ್ದರಿಂದ ಈ ಕ್ಷೇತ್ರ ಕೂಡ ಪ್ರಸಿದ್ಧವಾಗಬೇಕು. ಆ ಮೂಲಕ ಮಲ್ಪೆ ನಮ್ಮೆಲ್ಲರ ಬದುಕಿಗೆ ದೀಪಸ್ತಂಭವಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಿಸಿದರು. ಶುಕ್ರವಾರ ಮಲ್ಪೆ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಸಮುದ್ರ ತೀರದ ಆನಂದ ಶರಧಿ ನಿವೇಶನದಲ್ಲಿ ಮೇ 31ರವರೆಗೆ ನಡೆಯುವ ಕೃಷಿ ಮೇಳ, ಅಂತರ ಜಿಲ್ಲಾ ಭಜನಾ ಸ್ಪರ್ಧೆ, ಗ್ರಾಮೀಣ ಕ್ರೀಡಾ ಸ್ಪರ್ಧೆ, ಮಾತೃವಂದನ ಕಾರ್ಯಕ್ರಮ ಇತ್ಯಾದಿಗಳನ್ನೊಳಗೊಂಡ ಶ್ರೀ ಆನಂದ ಶರಧಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಮಾವು, ಹಲಸು ಬೆಳೆಸಿ: ಸಾನ್ನಿಧ್ಯ ವಹಿಸಿದ್ದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಕೃಷಿ ಪ್ರಧಾನವಾದ ನಾಡು ನಮ್ಮದು. ಆದರೆ ಇಂದು ಆಹಾರ ಪದ್ಧತಿ ಬದಲಾಗಿದೆ. ಅಹಾರಕ್ಕಿಂತ ಔಷಧ ಸೇವನೆ ಅತಿಯಾಗಿದೆ. ನಮ್ಮ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾವು ಮತ್ತು ಹಲಸು ಪ್ರಾಮುಖ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹಲಸು, ಮಾವು ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದರು.

ಮಲ್ಪೆಯಲ್ಲಿ ಮಧ್ವ ಮೂರ್ತಿ: ಅಧ್ಯಕ್ಷತೆ ವಹಿಸಿದ್ದ ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಉಡುಪಿ ಕೃಷ್ಣ ಮೊದಲು ಕಾಲಿಟ್ಟ ಈ ತಾಣವನ್ನು ಜನರಲ್ಲಿ ಕೃಷ್ಣಪ್ರಜ್ಞೆ ಮೂಡಿಸುವ, ಜ್ಞಾನ ಕೇಂದ್ರವಾಗಿಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಅಲ್ಲಿ ಆಚಾರ್ಯ ಮಧ್ವರ ಮೂರ್ತಿ ಸ್ಥಾಪಿಸಬೇಕು ಎಂಬ ಆಶಯವಿದೆ ಎಂದರು. ಅಭ್ಯಾಗತರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಳೇರಿ, ಉದ್ಯಮಿ ಸಾಧು ಸಾಲ್ಯಾನ್, ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ ಡಿ. ಸುವರ್ಣ, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಶ್ರೀಕೃಷ್ಣ ಮಠ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನ ಕುಮಾರ್ ಉಪಸ್ಥಿತರಿದ್ದರು. ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಮಲ್ಪೆ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ವಾನ್ ಷಣ್ಮುಖ ಹೆಬ್ಬಾರ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಗೋವಿಂದರಾಜ್ ವಂದಿಸಿದರು.ಹಲಸು- ಮಾವು ಮೇಳ, ಕರಕುಶಲ- ಕೈಮಗ್ಗ ಮೇಳ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛ ಪುತ್ತೂರು ಪರಿಕಲ್ಪನೆಯಲ್ಲಿ ಮೂಡಿ ಬಂದ ಬಯೋ ಸಿಎನ್‌ಜಿ ಘಟಕ ''''''''ಕಸದಿಂದ ರಸ''''''''
ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜ್‌: ಎನ್‌ಬಿಎ ಮಾನ್ಯತೆ ಮೂರು ವರ್ಷ ವಿಸ್ತರಣೆ