ಸಂಶುದ್ಧೀನ್ ಸಂಪ್ಯ
ಪುತ್ತೂರು: ಕೊಲ್ಲಿ ಯುದ್ಧದ ಕಾರಣದಿಂದಾಗಿ ನಮ್ಮಲ್ಲಿ ಇಂಧನ ಸಮಸ್ಯೆಗಳು ಸಾಕಷ್ಟು ಕಾಡುತ್ತಿದೆ. ಇಂಧನ ಸಮಸ್ಯೆ ಬಹುತೇಕ ಅಟೋ ಇನ್ನಿತರ ವಾಹನ ಚಾಲಕರ ಬದುಕಿಗೆ ಹೊಡೆತ ನೀಡುತ್ತಿದೆ. ಅಂತಹ ಸನ್ನಿವೇಶದಲ್ಲಿ ಪುತ್ತೂರಿನಲ್ಲಿ ಆರಂಭಗೊಂಡಿರುವ ಬಯೋ ಸಿಎನ್‌ಜಿ ಇಂಧನವು ಜನರ ಸಮಸ್ಯೆಗೆ ಪರಿಹಾರವನ್ನು ನೀಡಲಿದೆ. ಇಂತಹ ದೂರಾಲೋಚನೆಯ ಚಿಂತನೆ ಪ್ರಥಮವಾಗಿ ಉದ್ಯಮಿಯಾದ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ ಸಂಸ್ಥೆಯ ರೂವಾರಿ ಕೃಷ್ಣನಾರಾಯಣ ಮುಳಿಯ ಹಾಗೂ ಈ ಯೋಜನೆಯ ಪ್ರಾಜೆಕ್ಟ್ ಡೈರೆಕ್ಟರ್ ಡಾ. ರಾಜೇಶ್ ಬೆಜ್ಜಂಗಳ ಅವರ ತಂಡಕ್ಕೆ ಮೂಡಿದ್ದು, ಅದಕ್ಕೆ ಮೂರ್ತ ರೂಪ ಕೊಡುವ ಕೆಲಸ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಬನ್ನೂರು ನೆಕ್ಕಿಲದಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ನಗರ ಮತ್ತು ಗ್ರಾಮೀಣ ಆಡಳಿತದಲ್ಲಿ ಪ್ರಥಮ ಯೋಜನೆ ಇದಾಗಿದ್ದು, ಈ ಮಾದರಿಯನ್ನು ಅಧ್ಯಯನ ಮಾಡಿದ ಇತರ ನಗರ ಆಡಳಿತಗಳು, ತಮ್ಮಲ್ಲಿ ಅನುಷ್ಠಾನ ಮಾಡಲು ಮುಂದಡಿಯಿಟ್ಟಿದೆ.ಸಿ ಎನ್ ಜಿ ಘಟಕದಿಂದ ಹಸಿ ತ್ಯಾಜ್ಯದ ಸಮಸ್ಯೆಗೆ ಪರಿಹಾರವಲ್ಲದೆ, ಪರಿಸರ ಸ್ವಚ್ಛತೆ, ಅಂತರ್ಜಲ ಮಲಿನತೆ ತಡೆಗಟ್ಟುವಿಕೆ, ಪಳೆಯುಳಿಕೆ ಇಂಧನದ ಅವಲಂಬನೆ ಕಡಿತ, ವಿದೇಶಿ ವಿನಿಮಯದ ಕಡಿತ, ಓಝೋನ್ ಪದರದ ಚದುರುವಿಕೆ ನಿಯಂತ್ರಣ, ಸಾವಯವ ಗೊಬ್ಬರದ ಉತ್ಪಾದನೆ, ಇತ್ಯಾದಿ ಹಲವಾರು ಲಾಭದಾಯಕ ಅಂಶಗಳಿವೆ. ಪ್ರಸ್ತುತ ಸಿ ಎನ್ ಜಿ ದಿಂದ ಚಲಿಸುವ ಎರಡು ಕಸ ಸಂಗ್ರಹದ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಸ ಸಂಗ್ರಹದ ಎಲ್ಲಾ ವಾಹನಗಳು ಸಿ ಎನ್ ಜಿ ಆಗಲಿದೆ.ಈ ಬಗ್ಗೆ ಕೃಷ್ಣನಾರಾಯಣ ಮುಳಿಯ ಅವರೊಂದಿಗೆ ಕನ್ನಡಪ್ರಭ ನಡೆಸಿದ ಚಿಟ್‌ಚಾಟ್ ಹೀಗಿದೆ. 1. ಈ ಯೋಜನೆ ರೂಪಿಸಲು ಪ್ರೇರಣೆಯೇನು? ಎಷ್ಟು ವರ್ಷಗಳ ಕನಸಿದು?
ನಾವು ಮಾಡುವ ಯಾವುದೇ ಕೆಲಸಗಳು ನಮಗೆ ತೃಪ್ತಿ ಕೊಡಬೇಕು. ನನ್ನ ಹುಟ್ಟೂರಾದ ಪುತ್ತೂರಿಗೆ ಏನಾದರೂ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಈ ಕನಸು 12 ವರ್ಷಗಳ ಬಳಿಕ ಇದೀಗ ನನಸಾಗಿದೆ. ವೇಸ್ಟ್‌ಗಳನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಯಾವುದೂ ವೇಸ್ಟಲ್ಲ ಅದರಲ್ಲಿ ನಾವು ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಬಹುದು ಎಂಬುದಕ್ಕೆ ನಾವು ನಿರ್ಮಿಸಿದ ಸಿಎನ್‌ಜಿ ಘಟಕ ಸಾಕ್ಷಿಯಾಗಿದೆ. ಕಸದಿಂದ ರಸ ಎಂಬ ಮಾತು ನಿಜವಾಗಿದೆ. 2014ರಲ್ಲಿ ಸ್ವಚ್ಛ ಪುತ್ತೂರು ಎಂಬ ಪರಿಕಲ್ಪನೆ ಮುಂದಿಟ್ಟುಕೊಂಡು ಹಸಿಕಸದಿಂದ ಸಿಎನ್‌ಜಿ ಅನಿಲ ಉತ್ಪಾದನೆ ಯೋಜನೆ ಆರಂಭಿಸಲಾಯಿತು. ಹಿಡಿದ ಗುರಿಯನ್ನು ತುದಿ ಮುಟ್ಟಿಸಲು ಅಂದಿನಿಂದ ನಿರಂತರ ಶ್ರಮ ಹಾಗೂ ಯೋಜಿತ ಕಾರ್ಯಗಳ ಮೂಲಕ ಆ ಕನಸು ನನಸಾಗಿ ಲೋಕಾರ್ಪಣೆಗೊಂಡಿದೆ.2. ಸಿಎನ್‌ಜಿ ಘಟಕಕ್ಕೆ ಆಗಿರುವ ವೆಚ್ಚವೆಷ್ಟು: ಹೇಗೆ ಭರಿಸಿಕೊಂಡಿರಿ?
ಈ ಘಟಕದಿಂದ ಮಿಥೇನ್ ಗ್ಯಾಸ್ ಮತ್ತು ಸ್ಲರಿ ಎರಡೂ ಲಭ್ಯವಾಗುತ್ತದೆ. ಗ್ಯಾಸ್‌ಗಳು ವಾಹನಗಳಿಗೆ ಬಳಕೆಯಾದರೆ. ಸ್ಲರಿಗಳು ಉತ್ತಮ ಗೊಬ್ಬರವಾಗಿ ಕೃಷಿಗಳಿಗೆ ಬಳಸಬಹುದಾಗಿದೆ. ಈ ಯೋಜನೆಗೆ ನಮಗೆ ಹಲವಾರು ಮಂದಿಗೆ ಸಲಹೆ ಮತ್ತು ಸಹಕಾರವಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಲಭ್ಯವಾಗುವ ಹಸಿ ತ್ಯಾಜ್ಯವನ್ನು ಬಳಸಿ ಈ ಸಿಎನ್‌ಜಿ ಘಟಕ ಕಾರ್ಯನಿರ್ವಹಿಸುತ್ತಿದೆ. ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್ ಎಲ್ ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸ್ವಚ್ಚ ಭಾರತ್ ಟ್ರಸ್ಟ್, ಮತ್ತು ತಾಂತ್ರಿಕವಾಗಿ ರಿ ಟಾಪ್ ಸೊಲ್ಯೂಷನ್ ಸಂಸ್ಥೆ ಸೇರಿಕೊಂಡು ಈ ಯೋಜನೆ ಅನುಷ್ಟಾನ ಗೊಳಿಸಲಾಗಿದೆ. ಇದಕ್ಕೆ ಒಟ್ಟು 3 ಕೋಟಿ ರುಪಾಯಿ ಖರ್ಚಾಗಿದೆ. ಈ ಪೈಕಿ ರು. 2 ಕೋಟಿ ಬ್ಯಾಂಕ್ ಸಾಲದ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಉಳಿದಂತೆ ರು. 1 ಕೋಟಿ ರಿ ಟಾಪ್ ಸೊಲ್ಯೂಷನ್ ಸಂಸ್ಥೆ ಒದಗಿಸಿಕೊಟ್ಟಿದೆ. ಸರಕಾರದಿಂದ ಯಾವುದೇ ಅನುದಾನ ಅಥವಾ ಯೋಜನಾ ವೆಚ್ಚ ಇರುವುದಿಲ್ಲ. ನಗರ ಸಭೆಯವರು ಹಸಿ ತ್ಯಾಜ್ಯವನ್ನು ನೀಡುತ್ತಿದ್ದಾರೆ. ಉತ್ಪಾದಿಸಲ್ಪಟ್ಟ ಸಿಎನ್‌ಜಿಗೆ ಕಿಲೋ ಒಂದಕ್ಕೆ ರು. 1ರಂತೆ ನಗರ ಸಭೆಗೆ ನೀಡಲಾಗುತ್ತಿದೆ. 3. ಘಟಕದಲ್ಲಿ ನಿರ್ವಹಣೆಗೆ ಬೇಕಾದಷ್ಟು ಹಸಿ ಕಸ ಲಭ್ಯವಿದೆಯೇ?
ಪ್ರಸ್ತುತ ಘಟಕದಲ್ಲಿ ಪ್ರತಿದಿನ 8 ಟನ್ ಹಸಿತ್ಯಾಜ್ವವನ್ನು ಬಳಸಿ 350 ಕಿಲೋ ಗ್ರಾಂ ನಷ್ಟು ಸಿ ಎನ್ ಜಿ ಉತ್ಪಾದಿಸಲು ಅವಕಾಶವಿದೆ. ಆದರೆ ನಗರಸಭೆಯಿಂದ ಪ್ರತಿದಿನ 3 ಟನ್ ಹಸಿಕಸ ಬರುತ್ತಿದೆ. ಉಳಿದಂತೆ ಗ್ರಾಮೀಣ ಪ್ರದೇಶಗಳಿಂದ ಬರಬೇಕಾಗಿದೆ. ಈ ಬಗ್ಗೆ ಈಗಾಗಲೇ ವಿಟ್ಲ, ಉಪ್ಪಿನಂಗಡಿ, ಬೆಳ್ಳಾರೆ ಅಂತಹ ದೊಡ್ಡ ಗ್ರಾಮ ಪಂಚಾಯತ್‌ಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅದನ್ನು ವ್ಯವಸ್ಥೆಗೊಳಿಸಲು ನಗರಸಭೆಯು ಮುಂದಾಗಿದೆ. ಈಗ ಘಟಕಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ. ಮುಂದೆ ಎಲ್ಲವೂ ಸರಿಯಾದಲ್ಲಿ ಹಾಗೂ ಬೇಕಾದಷ್ಟು ಹಸಿಕಸಗಳು ಲಭ್ಯವಾದಲ್ಲಿ ಆದಾಯವನ್ನು ನಿರೀಕ್ಷಿಸಬಹುದು. ಈಗ ಮುಳಿಯದ ಕಡೆಯಿಂದ ಸಾರ್ವಜನಿಕ ಸೇವೆಯ ನೆಲೆಯಲ್ಲಿ ಯೋಜನೆಯನ್ನು ಮುನ್ನಡೆಸಲಾಗುತ್ತಿದೆ. 4. ಕಸ ವಿಂಗಡಣೆ ಬಹಳ ಅಗತ್ಯ
ಸಿಎನ್‌ಜಿಗೆ ಹಸಿ ಕಸಗಳು ಮಾತ್ರ ಬಳಕೆಯಾಗುತ್ತದೆ. ಎಲ್ಲಿಯಾದರೂ ಇದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಬೆರೆತುಕೊಂಡಲ್ಲಿ ಅದರಿಂದ ಸಮಸ್ಯೆಗಳು ಬಹಳ. ಕೃಷ್ಣನಾರಾಯಣ ಮುಳಿಯರು ಹೇಳುವಂತೆ ಸಿಎನ್‌ಜಿಗೆ ಬಳಸುವ ಹಸಿಕಸದಲ್ಲಿ ಸಣ್ಣ ಪ್ಲಾಸ್ಟಿಕ್ ತುಂಡುಗಳು ಸೇರಿಕೊಂಡರೂ ಅದರಿಂದ ತೊಂದರೆಯಾಗುತ್ತದೆ. ಮನೆಗೆ ತರುವ ಹಾಲಿನ, ಎಣ್ಣೆಯ ಪ್ಯಾಕೇಟ್‌ಗಳ ತುದಿಯನ್ನು ತುಂಡು ಮಾಡಿ ಉಪಯೋಗಿಸುತ್ತಾರೆ. ತುಂಡಾದ ತುದಿಯನ್ನು ಹಸಿಕಸದಲ್ಲಿ ಬೆರೆತು ಹೋದಲ್ಲಿ ಅದು ಯಂತ್ರದಲ್ಲಿ ಸಿಕ್ಕಿಹಾಕಿ ಕೊಳ್ಳುತ್ತದೆ. ಅದನ್ನು ಮತ್ತೆ ಅಲ್ಲಿಂದ ಹೆಕ್ಕಿ ತೆಗೆಯಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಜನರು ಕಸ ವಿಂಗಡಣೆ ಮಾಡುವ ಸಂದರ್ಭದಲ್ಲಿ ಇಂತಹ ತುಂಡುಗಳು ಹಸಿಕಸದಲ್ಲಿ ಸೇರಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಾವು ಪೇಟೆಗಳಿಂದ ಸಾಮಾಗ್ರಿ ತರುವಾಗ ಬೇಳೆ, ಅಕ್ಕಿ, ಎಣ್ಣೆ, ಸಕ್ಕರೆ, ಚಾಹುಡಿ, ಸಾಸಿವೆಗಳನ್ನು ಬೇರೆ ಬೇರೆಯಾಗಿ ತರುತ್ತೇವೆ. ಅದನ್ನು ಬಳಸಿ ಮತ್ತೆ ವಿಲೇವಾರಿ ಮಾಡುವಾಗಲೂ ಬೇರೆ ಬೇರೆಯಾಗಿ ಮಾಡುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಾಗಿದೆ. 5- ಪುತ್ತೂರಿನ ಈ ಘಟಕವನ್ನು ಅಧ್ಯಯನ ಮಾಡಲು ಬರುತ್ತಿದ್ದಾರೆಯೇ?ನಾವು ಕಳೆದ 12 ವರ್ಷಗಳಿಂದ ಈ ಬಗ್ಗೆ ಸಾಕಷ್ಟು ಯೋಜನೆ, ಯೋಚನೆಗಳನ್ನು ನಡೆಸಿಕೊಂಡು ಮುನ್ನಡೆದಿದ್ದೇವೆ. ಆದರೆ ಆಗ ಸಮರ್ಪಕ ಅಧ್ಯಯನ ನಡೆಸಲು ನಮಗೆ ಸಾಧ್ಯವಾಗಿಲ್ಲ. ಆದರೆ ಈಗ ಯಾರಾದರೂ ಅಧ್ಯಯನ ನಡೆಸಲು ಆಸಕ್ತಿ ವಹಿಸಿದಲ್ಲಿ ನಮ್ಮಲ್ಲಿಗೆ ಬಂದು ನೋಡಲು ಅವಕಾಶವಿದೆ. ಮೈಸೂರಿನ ತರಬೇತಿ ಸಂಸ್ಥೆಯೊಂದರ ಪರಿಸರ ಇಂಜಿನಿಯರ್‌ಗಳು ಎರಡು ಮೂರು ಸಲ ಇಲ್ಲಿಗೆ ಆಗಮಿಸಿ ಅಧ್ಯಯನ ನಡೆಸಿದ್ದಾರೆ. ಕೃಷ್ಣನಾರಾಯಣ ಮುಳಿಯ ಪರಿಚಯ
ವೃತ್ತಿಯಲ್ಲಿ ಸ್ವರ್ಣೋಧ್ಯಮಿ ಆಗಿರುವ 48 ವರ್ಷಗಳ ವಯಸ್ಸಿನ ಕೃಷ್ಣನಾರಾಯಣ ಮುಳಿಯ ಅವರು ಪ್ರವೃತ್ತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಜೆಸಿಐ, ರೋಟರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆ ಸೇರಿದಂತೆ ಹಲವು ಹುದ್ದೆಗಳಲ್ಲಿ ಸಕ್ರಿಯರಾಗಿದ್ದಾರೆ. ಪತ್ನಿ ಅಶ್ವಿನಿ ಕೃಷ್ಣ, ಪುತ್ರ ಮುಕುಂದ ಶ್ಯಾಮ ಮತ್ತು ಪುತ್ರಿ ಇಶಾ ಸುಲೋಚನಾ. ಬೈಕ್ ರೈಡಿಂಗ್ ಮತ್ತು ಕಾರು ಡ್ರೈವಿಂಗ್ ಇವರ ಪ್ಯಾಷನ್.