ಮೂಲ್ಕಿ: ಮೂಲ್ಕಿ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಗೆ ಮಳವೂರು ಡ್ಯಾಮ್‌ ನಿಂದ ಅಮೃತ್‌ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಪೈಪ್‌ ಲೈನ್‌ ಕಾಮಗಾರಿ ನಡೆಯುತ್ತಿದ್ದು ಮೂರು ಕಾವೇರಿಯಿಂದ ಕಿನ್ನಿಗೋಳಿ ಮೂಲಕ ಮೂಲ್ಕಿಯವರೆಗೆ ಮೂಲ್ಕಿ -ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಹೆದ್ದಾರಿಯ ಬದಿಯಲ್ಲಿ ಪೈಪ್‌ ಲೈನ್‌ ಹಾಕಲಾಗುತ್ತಿದೆ. ರಾಜ್ಯ ಹೆದ್ದಾರಿ ಬದಿಯಲ್ಲಿ ಅಳವಡಿಸುತ್ತಿರುವ ಅಮೃತ್ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ಮೂರುಕಾವೇರಿಯಿಂದ ಮೂಲ್ಕಿಯ ಸಮೀಪದ ಕುಬೆವೂರು ವರೆಗೆ ಕಿನ್ನಿಗೋಳಿಯ ಮುಖ್ಯ ರಸ್ತೆಯನ್ನು ಅಗೆದು ಹಲವು ದಿನಗಳಾಗಿದ್ದು ಮೂರು ಕಾವೇರಿ, ಕಿನ್ನಿಗೋಳಿ, ಪುನರೂರು, ಕೆರೆಕಾಡು, ಅಂಗರಗುಡ್ಡೆ, ಕೆಂಚನಕೆರೆ ಸೇರಿದಂತೆ ರಾಜ್ಯ ಹೆದ್ದಾರಿಯಲ್ಲಿ ಅನೇಕ ಕಡೆ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ ನಡೆಸಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಸ್ತೆ ಅಗೆದ ಜಾಗಕ್ಕೆ ಕಾಂಕ್ರೀಟ್‌ ಹಾಕದೇ ಹಾಗೇಯೇ ಬಿಟ್ಟಿದ್ದು ಇದೀಗ ಮಣ್ಣು ಹಾಕಿದ್ದು ಕಳೆದ ಎರಡು ದಿನಗಳಿಂದ ನಿರಂತರ ಮಳೆ ಬರುತ್ತಿದ್ದು ಮಳೆಯಿಂದ ರಸ್ತೆಯಲ್ಲಿ ನೀರು ಕೆಸರುಮಯ ವಾತಾವರಣ ಉಂಟಾಗಿದೆ.

ಕೆಲವು ದಿನದ ಹಿಂದೆ ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಗೇರುಕಟ್ಟೆಯಲ್ಲಿ ಮೂಲ್ಕಿ ತಾಲೂಕಿನ ಆಡಳಿತದ ಪ್ರಜಾ ಸೌಧದ ಬಳಿ ಮುಂಜಾಗರೂಕತೆ ವಹಿಸದೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯದ ಬಿಎಸ್‌ಎನ್‌ಎಲ್ ಕೇಬಲ್ ಗೆ ಹಾನಿ ಮಾಡಲಾಗಿದೆ. ಇದರಿಂದ ಅನೇಕ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ನೀರು ಹರಿಯುವ ಚರಂಡಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಪೈಪ್ ಲೈನ್ ಹಾಕಿ ಮಣ್ಣು ಮುಚ್ಚಿದ್ದು ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕುಬೆವೂರು ಶಿಮಂತೂರು ದೇವಸ್ಥಾನ ಸಂಪರ್ಕ ರಸ್ತೆ, ಕೆಂಚನಕೆರೆ ತಿರುವು ಬಳಿ ಹೆದ್ದಾರಿ ಅಗೆದು ಹಾಕಿದ್ದು , ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಇದೀಗ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.

ಅಮೃತ್‌ ಕುಡಿಯುವ ನೀರಿನ ಪ್ಯೆಪ್‌ ಲೈನ್‌ ನ ಅವ್ಯೆಜ್ಞಾನಕ ಕಾಮಗಾರಿಯಿಂದ ಸಮಸ್ಯೆಯಾಗುತ್ತಿದ್ದು ಕೂಡಲೇ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸರಿಯಾದ ಕಾಮಗಾರಿ ನಡೆಸುವಂತೆ ಪೈಪ್ ಲೈನ್ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಇಲ್ಲದಿದ್ದರೆ ಮೂಲ್ಕಿ ತಾಲೂಕು ಆಡಳಿತ ಪ್ರಜಾ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು.

ಶರತ್‌ ಕಾರ್ನಾಡ್‌ ಸಾಮಾಜಿಕ ಕಾರ್ಯಕರ್ತ


ಅಮೃತ್‌ ಯೋಜನೆಯಡಿ ಕಿನ್ನಿಗೋಳಿಯಿಂದ ಮೂಲ್ಕಿಯವರೆಗೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಪೈಪ್‌ ಲ್ಯೆನ್‌ ಅಳವಡಿಕೆ ಕಾಮ-ಗಾರಿ ನಡೆಯುತ್ತಿದ್ದು ಪೈಪ್‌ ಲೈನ್‌ ಗೆ ಅಗೆದ ಜಾಗದಲ್ಲಿ ಕಾಂಕ್ರೀಟ್‌ ಅಳವಡಿಸಲಾಗುವುದು. ಮುಂದಿನ ಎರಡು, ಮೂರು ದಿನಗಳ ಒಳಗೆ ದುರಸ್ತಿ ಪಡಿಸಲಾಗುವುದು.

। ಮೋಹಿತ್‌ ಅಧಿಕಾರಿ ಅಮೃತ್‌ ಯೋಜನೆ