ಭೀಮಾನಾಯ್ಕ ನಿವಾಸದಲ್ಲಿ ಇಫ್ತಾರ್ ಕೂಟ, ಸಾಮೂಹಿಕ ಪ್ರಾರ್ಥನೆ
ಕನ್ನಡಪ್ರಭ ವಾರ್ತೆ ಹೊಸಪೇಟೆಸಕಲ ಜೀವಿಗಳಿಗೂ ಒಳಿತು ಬಯಸುವುದು ಎಲ್ಲ ಧರ್ಮಗಳ ಆಶಯವಾಗಿದೆ ಎಂದು ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಭೀಮಾನಾಯ್ಕ ಹೇಳಿದರು.
ರಂಜಾನ್ ಹಬ್ಬದ ಹಿನ್ನೆಲೆ ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ನಗರದ ನಿವಾಸದಲ್ಲಿ ಇಫ್ತಾರ್ ಕೂಟ ಮತ್ತು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಪವಿತ್ರ ರಂಜಾನ್ ಉಪವಾಸ ಅತ್ಯಂತ ಶ್ರೇಷ್ಠವಾಗಿದ್ದು, ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿ ವೃದ್ಧಿಗೆ ಕಾರಣವಾಗುತ್ತದೆ. ಬಹುಸಂಸ್ಕೃತಿ ಈ ದೇಶದ ವೈಶಿಷ್ಟವಾಗಿದೆ. ಸರ್ವಧರ್ಮ ಸಮಾನತೆ ತತ್ವಗಳು ಭಾವೈಕ್ಯತೆಗೆ ದಾರಿದೀಪಗಳಾಗಿವೆ. ಪವಿತ್ರ ರಂಜಾನ್ ವೇಳೆ ಸಮಸ್ತ ಮುಸ್ಲಿಮರು ವಿಶ್ವದ ಒಳತಿಗಾಗಿ ಪ್ರಾರ್ಥನೆ ಸಲ್ಲಿಸುವುದು ಮಾನವೀಯತೆಯನ್ನು ಸಾರುವಂತಿದೆ. ಎಲ್ಲ ಧರ್ಮಗಳ ಸಾರವೂ ಒಳಿತನ್ನು ಬಯಸುವುದಾಗಿದೆ. ಈ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ನಿಮಿತ್ತ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿದೆ ಎಂದರು.ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾಬಾಯಿ ಭೀಮಾನಾಯ್ಕ ಮಾತನಾಡಿದರು. ಸಮುದಾಯದ ಮುಖಂಡ ಆಫೀಸ್ ಸಾಹೇಬ್, ಜಿಲ್ಲಾ ಉಪಾಧ್ಯಕ್ಷ ಇಂತಿಯಾಜ್, ಯುವ ಕಾಂಗ್ರೆಸ್ ಸಮಿತಿಯ ಹರಪನಹಳ್ಳಿ ಜಿ. ಶಾನು, ಕೂಡ್ಲಿಗಿ ಸೋಹೆಲ್, ಹಡಗಲಿ ಮೋದಿನ್, ಹೊಸಪೇಟೆ ಅಲ್ತಾಫ್, ಜಮೀರ್, ಅಬ್ಬಾಸ್ ಮತ್ತಿತರರಿದ್ದರು.ಇಫ್ತಾರ್ ಕೂಟದಲ್ಲಿ ಸಂಸದ, ಶಾಸಕಿ ಭಾಗಿ:
ಸಂಡೂರು ಪಟ್ಟಣದ ಅಂಜುಮನ್ ಈದ್ಗಾ ಮೈದಾನದಲ್ಲಿ ತಾಲೂಕಿನ ಸಮಸ್ತ ಮುಸ್ಲಿಂ ಸಮುದಾಯದವರಿಗೆ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್, ಸಂಸದ ಈ. ತುಕಾರಾಂ ಹಾಗೂ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರಿಂದ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಂಸದ ಈ. ತುಕಾರಾಂ ಮಾತನಾಡಿ, ಸಂಡೂರು ತಾಲೂಕು ಶಾಂತಿ, ಸೌಹಾರ್ದತೆಗೆ ಹಾಗೂ ಸಾಮರಸ್ಯಕ್ಕೆ ಹೆಸರಾಗಿದೆ. ಇಂದಿನ ಹಾಗೂ ಮುಂದಿನ ಪೀಳಿಗೆಯೂ ಈ ಸಂಪದ್ರಾಯವನ್ನು ಮುಂದುವರೆಸಿಕೊಂಡು ಹೋಗಬೇಕು. ಎಲ್ಲರ ಕಷ್ಟಗಳು ದೂರವಾಗಿ, ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಗೊಳ್ಳಲಿ. ಇಂದಿನ ಮಕ್ಕಳು ದೇಶದ ಹಾಗೂ ಸಮಾಜದ ಆಸ್ತಿಯಾಗಬೇಕು. ಎಲ್ಲರೂ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಶುಭಕೋರಿದರು.ಶಾಸಕಿ ಈ. ಅನ್ನಪೂರ್ಣ ತುಕಾರಾಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.ನೂರಾನಿ ಮಸ್ಜಿದ್ ಅಧ್ಯಕ್ಷ ಬಿ. ರೋಷನ್ ಜಮೀರ್, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಅಂಜುಮನ್ ಕಮಿಟಿ ಅಧ್ಯಕ್ಷ ಹಸೇನ್, ಮುಖಂಡರಾದ ಆಶಾಲತಾ ಸೋಮಪ್ಪ, ಕೆ. ಸತ್ಯಪ್ಪ, ಪುರಸಭೆಯ ಹಲವು ಸದಸ್ಯರು, ಮುಸ್ಲಿಂ ಸಮಾಜದ ಹಲವು ಮುಖಂಡರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.