ವಾಮಾಚಾರ ಪ್ರಕರಣ: ಪ್ರಸಾದ್‌ ಅತ್ತಾವರ ವಿರುದ್ಧ ಕೇಸ್‌ ದಾಖಲು

KannadaprabhaNewsNetwork |  
Published : Feb 01, 2025, 12:02 AM IST
ಶಕ್ತಿ ದೇವತೆ ವಿಗ್ರಹಕ್ಕೆ ಸ್ನೇಹಮಯಿ ಕೃಷ್ಣ, ಗಂಗರಾಜು ಫೋಟೋ ಹಾರ ಹಾಕಿ ರಕ್ತತರ್ಪಣ ನೀಡಿರುವುದು | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಕೇಸಿನಲ್ಲಿ ದೂರು ನೀಡಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾಮಾಚಾರ ಮೂಲಕ ಶಕ್ತಿ ತುಂಬುವ ಕೆಲಸವನ್ನು ಪ್ರಸಾದ್‌ ಅತ್ತಾವರ ಮಾಡಿದ್ದಾರೆ ಎಂದು ಶಂಕೆ ಮೂಡುವಂತಹ ಸಾಕ್ಷ್ಯ ಪೊಲೀಸರಿಗೆ ಲಭ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಸಾಜ್‌ ಪಾರ್ಲರ್‌ ದಾಳಿಯಲ್ಲಿ ಬಂಧಿತ ರಾಮಸೇನೆ ಸಂಸ್ಥಾಪಕ ಪ್ರಸಾದ್‌ ಅತ್ತಾವರ ವಿರುದ್ಧ ಶುಕ್ರವಾರ ವಾಮಾಚಾರದ ಕೇಸು ದಾಖಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೂಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟ್‌ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಇನ್ನಷ್ಟು ಶಕ್ತಿ ತುಂಬಲು ಪ್ರಾಣಿ ರಕ್ತ ಬಲಿ ನೀಡಿ ವಾಮಾಚಾರ ಮಾಡಿದ್ದಾರೆ ಎಂದು ಪ್ರಸಾದ್‌ ಅತ್ತಾವರ ವಿರುದ್ಧ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ಜ.23ರಂದು ನಡೆದ ಮಸಾಜ್ ಪಾರ್ಲರ್‌ ದಾಳಿಯಲ್ಲಿ ಪ್ರಸಾದ್‌ ಅತ್ತಾವರ ಮತ್ತು ಇತರೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪ್ರಸಾದ್‌ ಅತ್ತಾವರ ಬಳಿ ಇದ್ದ ಎರಡು ಮೊಬೈಲ್‌ ಫೋನ್‌ಗಳ ಮೆಸೇಜ್‌ಗಳನ್ನು ಪರಿಶೀಲಿಸಿದಾಗ ವಾಮಾಚಾರ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿದೆ.

ವಾಮಾಚಾರ ಮೂಲಕ ಶಕ್ತಿ ತುಂಬಿದರೇ?: ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಕೇಸಿನಲ್ಲಿ ದೂರು ನೀಡಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾಮಾಚಾರ ಮೂಲಕ ಶಕ್ತಿ ತುಂಬುವ ಕೆಲಸವನ್ನು ಪ್ರಸಾದ್‌ ಅತ್ತಾವರ ಮಾಡಿದ್ದಾರೆ ಎಂದು ಶಂಕೆ ಮೂಡುವಂತಹ ಸಾಕ್ಷ್ಯ ಪೊಲೀಸರಿಗೆ ಲಭ್ಯವಾಗಿದೆ.

ಪಾರ್ಲರ್‌ ದಾಳಿ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಸಾದ್‌ ಅತ್ತಾವರನ ಮೊಬೈಲ್‌ನಲ್ಲಿ ಸೆನ್‌ ಠಾಣೆಯಲ್ಲಿ ರಿಟ್ರೀಟ್‌ಗೆ ಒಳಪಡಿಸಿದ್ದರು. ಆಗ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಪರವಾಗಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸಿ ಅವರಿಗೆ ಮತ್ತಷ್ಟು ಶಕ್ತಿ ನೀಡಲು ಪ್ರಯತ್ನಿಸಿರುವ ಅಂಶ ಪತ್ತೆಯಾಗಿದೆ.

ಪ್ರಸಾದ್‌ ಅತ್ತಾವರ ಮತ್ತು ಅನಂತ ಭಟ್‌ ಎಂಬವರ ನಡುವೆ ಹಲವು ವಿಚಾರಗಳ ಸಂವಹನ ನಡೆದಿದೆ. ಅಲ್ಲದೆ ವಾಮಾಚಾರದ ವಿಡಿಯೋಗಳು ಕೂಡ ಪರಸ್ಪರ ರವಾನೆಯಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳನ್ನು ಮುಂದಿರಿಸಿ ಐದು ಕುರಿಗಳನ್ನು ಬಲಿ ಕೊಡಲಾಗಿದೆ. ಇವರ ಫೋಟೋಗಳಿಗೆ ರಕ್ತತರ್ಪಣ ಮಾಡಿ ಮತ್ತಷ್ಟು ಶಕ್ತಿ ತುಂಬುವ ಪ್ರಯತ್ನ ಮಾಡಿರುವ ರೀತಿಯ ವಿಡಿಯೋಗಳು ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್‌ವಾಲ್‌ ಸೂಚನೆ ಮೇರೆಗೆ ಬರ್ಕೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ.

ಕುರಿ ಬಲಿ ಕೊಟ್ಟಿರುವುದು ಪತ್ತೆ: ಒಂದು ವಾರದ ಹಿಂದೆ ಪ್ರಸಾದ್ ಅತ್ತಾವರನನ್ನು ಬಂಧಿಸಿ ಮೊಬೈಲ್‌ ಪರಿಶೀಲನೆ ನಡೆಸಿದಾಗ, ಆತ ದೇವಸ್ಥಾನವೊಂದರಲ್ಲಿ ಕುರಿಗಳನ್ನು ಬಲಿಕೊಡುವ ದೃಶ್ಯ ಪತ್ತೆಯಾಗಿದೆ. ಐದು ಕುರಿಗಳನ್ನು ಬಲಿ ಕೊಡುತ್ತಿರುವ ವಿಡಿಯೋ ಇದ್ದು, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಬಲ ತುಂಬಲು ಈ ರೀತಿ ಮಾಡಿದ್ದರು. ಈ ಕುರಿತು ವಾಟ್ಸ್‌ಆ್ಯಪ್‌ ಚಾಟ್‌ನಲ್ಲೂ ಉಲ್ಲೇಖಿಸಿರುವುದು ಗೊತ್ತಾಗಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ ಅಗರ್‌ವಾಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚಾಟ್‌ನಲ್ಲಿ ಉಲ್ಲೇಖಿಸಿದಂತೆ ಅನಂತ ಭಟ್‌ ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ. ಪ್ರಾಣಿ ಬಲಿ ನೀಡುವುದು, ವಾಮಾಚಾರ ನಡೆಸಲು ನಿಷೇಧ ಇರುವುದರಿಂದ ಕೇಸು ದಾಖಲಿಸಲಾಗಿದೆ. 2024ರ ಡಿಸೆಂಬರ್‌ 7ರಂದು ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಹಣದ ಕಂತೆ ರವಾನೆ?: ವಾಮಾಚಾರ ನಡೆಸಿದ್ದಕ್ಕೆ ಪ್ರತಿಯಾಗಿ ಅನಂತ ಭಟ್‌ ಅವರಿಗೆ ಹಣದ ಕಂತೆಯನ್ನು ರವಾನೆ ಮಾಡಿರುವ ರೀತಿ ಕವರ್‌ವೊಂದರ ವಿಡಿಯೋ ಹಾಕಲಾಗಿದೆ. ಹಣದ ಚೀಲವನ್ನು ಸುಮ ಆಚಾರ್ಯ, ಪ್ರಶಾಂತ ಬಂಗೇರ ಹಾಗೂ ಹರ್ಷ ಮೈಸೂರು ಅವರು ಅನಂತ ಭಟ್‌ಗೆ ತಲುಪಿಸಿರುವುದಕ್ಕೆ ಸಾಕ್ಷಿ ಎನ್ನುವಂತೆ ವಾಟ್ಸ್‌ಆ್ಯಪ್‌ ನಂಬರಿಗೆ ಫೋಟೋ ರವಾನೆ ಮಾಡಲಾಗಿದೆ.

ಹರ್ಷ, ಶ್ರೀನಿಧಿ ಮತ್ತು ಸ್ನೇಹಮಯಿ ಕೃಷ್ಣ ಅವರನ್ನು ಭೇಟಿಯಾಗಿರುವ ಫೋಟೋಗಳು ಕೂಡ ಪತ್ತೆಯಾಗಿವೆ. ಇವರುಗಳ ಫೋಟೋ ಮತ್ತು ಹೆಸರನ್ನು ನಮೂದಿಸಿ, ಶಕ್ತಿ ದೇವತೆಯ ಕೊರಳಿಗೆ ಹಾಕಿ ಯಾವುದೋ ದುರುದ್ದೇಶದಿಂದ ದುಷ್ಟ ಶಕ್ತಿಯನ್ನು ಆಹ್ವಾನಿಸಿ ರಕ್ತವನ್ನು ಇವರ ಫೋಟೋಗಳಿಗೆ ಚಿಮುಕಿಸಿರುವುದು ಕಂಡುಬಂದಿದೆ ಎಂದು ಬರ್ಕೆ ಠಾಣಾ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಪ್ರಸಾದ್‌ ಅತ್ತಾವರ ವಿರುದ್ಧ ಕಲಂ 3(2) ಕರ್ನಾಟಕ ಅಮಾನವೀಯ ದೃಷ್ಟಿ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನಾ ವಿಧೇಯಕ 2017ರಂತೆ ಪ್ರಕರಣ ದಾಖಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ