ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲಾ ಕೇಂದ್ರದಲ್ಲಿ ಸಚಿವ ಸಂಪುಟ ಸಭೆ ನಡೆಸದೇ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸುತ್ತಿರುವುದು ಕಾಟಾಚಾರವಾಗಿದ್ದು ಅಂದು ರೈತ ಸಂಘದಿಂದ ಜಿಲ್ಲಾ ಕೇಂದ್ರದಲ್ಲಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯ ಪೂರ್ವಭಾವಿಯಾಗಿ ಕಾರ್ಯದರ್ಶಿಗಳು ಅಥವಾ ಜಿಲ್ಲಾಡಳಿತ ರೈತರ ಸಮಸ್ಯೆಗಳ ಬಗ್ಗೆ ಸಭೆ ಕರೆದು ಪಟ್ಟಿ ಮಾಡಿ ಸರ್ಕಾರಕ್ಕೆ ನೀಡಿ ವ್ಯವಸ್ಥಿತವಾಗಿ ಮಂತ್ರಿ ಮಂಡಲ ನಡೆಸಬೇಕಿತ್ತು. ಆದರೆ, ಕಾಟಾಚಾರಕ್ಕೆ ಈ ಸಂಪುಟ ಸಭೆ ನಡೆಸುತ್ತಿದ್ದಾರೆ ಎಂದರು.ಜಿಲ್ಲಾ ಕೇಂದ್ರವಾದ ಚಾಮರಾಜನಗರ ಪಟ್ಟಣದಲ್ಲಿ ಮಂತ್ರಿಮಂಡಲ ಮಾಡುವುದನ್ನು ಬಿಟ್ಟು ಮಲೆಮಹದೇಶ್ವರ ಬೆಟ್ಟದ ಜಿಲ್ಲೆಯ ತುದಿಯಲ್ಲಿ ಮಂತ್ರಿ ಮಂಡಲ ನಡೆಸುತ್ತಿರುವುದು ಖಂಡನೀಯ. ಇಲ್ಲಿ ಮಂತ್ರಿಮಂಡಲ ನಡೆಸುವುದರಿಂದ ಜಿಲ್ಲೆಗೆ ಯಾವ ಕೊಡುಗೆ ನೀಡುತ್ತಾರೆ ಎಂಬುದನ್ನು ಸಿಎಂ ಮೊದಲು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಗೆ ಯುಎನ್‌ಐಪಿ ಸ್ಟೀಮ್ ಅನ್ನು ಮರುಸ್ಥಾಪಿಸಿ ಜಿಲ್ಲೆಯ ರೈತರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳನ್ನು ನೀಡುವ ನಿರ್ಣಯವನ್ನಾದರೂ ಮಂತ್ರಿಮಂಡಲ ತೆಗೆದುಕೊಳ್ಳಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರಿಗೆ ಸೂಕ್ತ ನಷ್ಟ ಭರಿಸಿಕೊಡಲು ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಬಹುದಿನದ ಬೇಡಿಕೆಯಾದ ಕಬಿನಿ ಎರಡನೇ ಹಂತವನ್ನು ಪೂರೈಸಬೇಕು. ಜಿಲ್ಲೆಯ ರೈತರು ತಾವು ಬೆಳೆದ ತೇಗದ ಮರಗಳನ್ನು ಯಾರದೇ ಅನುಮತಿ ಇಲ್ಲದೇ ಕಟಾವು ಮಾಡಿಸಿಕೊಳ್ಳಲು ಹಾಗೂ ಮಾರಾಟ ಮಾಡಲು ಇರುವ ನಿರ್ಬಂಧ ತೆಗೆಯಬೇಕು. ತಾಲೂಕಿಗೊಂದು ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳಲ್ಲಿ ಜಿಲ್ಲೆಯ ಯುವಕರಿಗೆ ಇಂತಿಷ್ಟು ಉದ್ಯೋಗ ಎಂದು ಕಾಯ್ದಿರಿಸಬೇಕು. ವಶಪಡಿಸಿಕೊಂಡಿರುವ ಭೂಮಿಗೆ ರೈತರಿಗೆ ಶೀಘ್ರ ಪರಿಹಾರ ನೀಡಬೇಕು. ರೈತರು ಬೆಳೆದ ಬೆಳೆಗಳನ್ನು ಶೀಘ್ರವಾಗಿ ಖರೀದಿಸಲು ವ್ಯವಸ್ಥೆ ಆಗುವಂತೆ ಶಾಶ್ವತ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಹಸಿರುಸೇನೆ ಜಿಲ್ಲಾಧ್ಯಕ್ಷ ಚಿಕ್ಕಣ್ಣ ಹಿರಿಕಾಟಿ, ಚಾಮರಾಜನಗರ ತಾಲೂಕು ಖಜಾಂಚಿ ಲಿಂಗಸ್ವಾಮಿ, ಗುಂಡ್ಲುಪೇಟೆ ಮಹೇಶ್ ಇದ್ದರು.