ಫೆಬ್ರವರಿ 13ರಂದು ಉಪಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

KannadaprabhaNewsNetwork | Published : Feb 1, 2025 12:02 AM

ಸಾರಾಂಶ

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಫೆ.12ರಿಂದ 14ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.13ರಂದು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಫೆ.12ರಿಂದ 14ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.13ರಂದು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳೊಂದಿಗೆ, ಲೋಕಾಯುಕ್ತ ಹೆಚ್ಚುವರಿ ವಿಚಾರಣಾ ನಿಬಂಧಕರಾದ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ ಹಾಗೂ ವಿಚಾರಣಾ ಉಪ ನಿಬಂಧಕರಾದ ಅರವಿಂದ ಎನ್.ವಿ. ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು. ಅನಿರೀಕ್ಷಿತ ಭೇಟಿ: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಫೆ.12ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿವಿಧ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 1-45 ರಿಂದ 2-45ರವರೆಗೆ ಹಾವೇರಿ ನಗರದ ನ್ಯಾಯಾಲಯದ ಆವರಣದಲ್ಲಿರುವ ಹಾವೇರಿ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರೊಂದಿಗೆ ಸಂವಹನ ನಡೆಸಲಿದ್ದಾರೆ. ಮಧ್ಯಾಹ್ನ 2-45 ರಿಂದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.ಸಾರ್ವಜನಿಕರ ಅಹವಾಲು ಸ್ವೀಕಾರ: ಫೆ.13ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1-30ರ ವರೆಗೆ ಹಾಗೂ ಮಧ್ಯಾಹ್ನ 2-30ರಿಂದ ಸಂಜೆ 5 ಗಂಟೆಗೆವರೆಗೆ ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಂದ ತಮಗೆ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿ ಮತ್ತು ನೌಕರರು ನ್ಯಾಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಹಾಗೂ ಯಾವುದೇ ವ್ಯಕ್ತಿ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದು ಉಪ ಲೋಕಾಯುಕ್ತರ ಆಶಯವಾಗಿದೆ. ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಹಾಗೂ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಕ್ಕೆ ಅನಗತ್ಯ ವಿಳಂಬ ಮಾಡುತ್ತಿದ್ದರೆ ಈ ವಿಷಯವಾಗಿ ಸಾರ್ವಜನಿಕರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು. ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 124 ಪ್ರಕರಣಗಳು:ಜಿಲ್ಲೆಗೆ ಸಂಬಂಧಿಸಿದ 124 ಲೋಕಾಯುಕ್ತ ಪ್ರಕರಣಗಳಿದ್ದು, ಫೆ. 14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1-30ರ ವರೆಗೆ ಹಾಗೂ ಮಧ್ಯಾಹ್ನ 2-30ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಲೋಕಾಯುಕ್ತ ಸಂಸ್ಥೆಗಳಲ್ಲಿ ದಾಖಲಾಗಿರುವ (ಗೌರವಾನ್ವಿತ ಉಪ ಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಮತ್ತು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ದೂರುದಾರರು ಹಾಗೂ ಎದುರುಗಾರರ ಸಮ್ಮುಖದಲ್ಲಿ ಕಾನೂನು ರೀತ್ಯ ವಿಚಾರಣೆ ನಡೆಸಲಿದ್ದಾರೆ. ಇದರಿಂದ ದೂರುದಾರರು ಹಾಗೂ ಎದುರುದಾರರು ವಿಚಾರಣೆಗೆ ಬೆಂಗಳೂರು ತೆರಳುವುದು ತಪ್ಪುತ್ತದೆ ಹಾಗೂ ಸಮಯದ ಉಳಿತಾಯವಾಗಲಿದೆ ಎಂದರು.

ನಾಲ್ಕು ಕೌಂಟರ್: ಲೋಕಾಯುಕ್ತ ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಮಾತನಾಡಿ, ಫೆ. 13ರಂದು ಗುರುಭವನದಲ್ಲಿ ಅಹವಾಲು ಹಾಗೂ ದೂರು ಸ್ವೀಕಾರ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಪ್ರತ್ಯೇಕ ನಾಲ್ಕು ಕೌಂಟರ್ ಸ್ಥಾಪಿಸಲಾಗುವುದು, ಅಲ್ಲಿ ಸಲ್ಲಿಸಲಾಗುವ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಸಾರ್ವಜನಿಕರು ಅಹವಾಲು ಹಾಗೂ ದೂರು ಸಲ್ಲಿಸಲು ನಮೂನೆ 1 ಮತ್ತು 2 ಭರ್ತಿ ಮಾಡುವ ಕುರಿತು ಲೋಕಾಯುಕ್ತ ಸಿಬ್ಬಂದಿಗಳು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಕರ್ನಾಟಕ ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪುರೆ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಉಪಸ್ಥಿತರಿದ್ದರು.

Share this article