ದೃಢ ಸಂಕಲ್ಪದಿಂದ ದುರ್ಲಭವನ್ನೂ ಸಾಧಿಸಬಹುದು: ರಾಘವೇಶ್ವರ ಶ್ರೀ

KannadaprabhaNewsNetwork |  
Published : Aug 28, 2026, 02:30 AM IST
ಸ್ವರ್ಣಪಾದುಕಾ ಪೂಜೆ ನೇರವೇರಿಸಿದ  ಮುಕ್ರಿ ಸಮಾಜದವರಿಗೆ ಶ್ರೀಗಳು ಅನುಗ್ರಹಿಸುತ್ತಿರುವುದು  | Kannada Prabha

ಸಾರಾಂಶ

ನಮ್ಮ ದೇಹಕ್ಕೆ ನಾವು ಪ್ರಭುಗಳಾಗಿದ್ದು, ಗಟ್ಟಿಯಾದ ಸಂಕಲ್ಪ ಮಾಡಿದಾಗ ದೇಹ ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ.

ಅಗ್ನಿಯ ಅರಿವಿಲ್ಲದೇ ಆಹಾರ ತಿಳಿದುಕೊಳ್ಳಲಾಗದು । ಒಂದೇ ವಿಷಯದಲ್ಲಿ ಸ್ಥಿರ ಗಮನವಿದ್ದರೆ ಸಾಕ್ಷಾತ್ಕಾರ ಸಾಧ್ಯ

ಕನ್ನಡಪ್ರಭ ವಾರ್ತೆ ಗೋಕರ್ಣ

ನಮ್ಮ ದೇಹಕ್ಕೆ ನಾವು ಪ್ರಭುಗಳಾಗಿದ್ದು, ಗಟ್ಟಿಯಾದ ಸಂಕಲ್ಪ ಮಾಡಿದಾಗ ದೇಹ ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ. ಆಗ ನಾವು ದುರ್ಲಭವನ್ನೂ ಕೂಡ ಸಾಧಿಸಿಕೊಳ್ಳಬಹುದು. ಆದರೆ ಸಂಕಲ್ಪ ಧೃಢವಾಗಿರಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಗುರುವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಅಗ್ನಿ ಹಾಗೂ ಪ್ರಾಣಾಯಾಮಗಳು ಆಹಾರಕ್ಕೆ ಪೂರಕ ವಿಚಾರಗಳಾಗಿದ್ದು, ಪೀಠಿಕೆಯಿಲ್ಲದೇ ಪಾಠವಿಲ್ಲ ಎಂಬಂತೆ ಅಗ್ನಿಯ ಅರಿವಿಲ್ಲದೇ ಆಹಾರವನ್ನು ತಿಳಿದುಕೊಳ್ಳಲಾಗದು. ಹಸಿವು ಗೊತ್ತಾಗದವನಿಗೆ ಊಟದ ಸ್ವಾಧ ಗೊತ್ತಾಗದು. ಹಾಗೆಯೇ ಅಗ್ನಿಯನ್ನು ಸಮರ್ಪಕವಾಗಿ ತಿಳಿದುಕೊಳ್ಳದೇ ಇದ್ದರೆ ಆಹಾರದ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಂಡಂತಾಗುವುದಿಲ್ಲ. ಈ ಹಿನ್ನೆಲೆ ಆಹಾರದ ಪ್ರವಚನ ಸರಣಿಯಲ್ಲಿ ಅಗ್ನಿಯ ಕುರಿತಾದ ವಿಚಾರಗಳನ್ನು ಪ್ರಸ್ತಾಪಿಸಲಾಯಿತು ಎಂದು ಹೇಳಿದರು.

ಬಾವಿಯನ್ನು ತೋಡುವಾಗ ಎಲ್ಲಾ ಕಡೆ ೫-೧೦ ಅಡಿಗಳ ಗುಂಡಿ ತೋಡಿದರೆ ನೀರು ಸಿಗುವುದಿಲ್ಲ. ಸರಿಯಾದ ಒಂದೇ ಜಾಗದಲ್ಲಿ ಆಳವಾದ ಗುಂಡಿಯನ್ನು ತೆಗೆದಾಗ ಬಾವಿಯಲ್ಲಿ ನೀರು ಸಿಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಯಾವುದೇ ವಿಷಯದಲ್ಲಿ ಆಳಕ್ಕೆ ಇಳಿಯುತ್ತಿಲ್ಲ. ಹಲವಾರು ವಿಷಯಗಳನ್ನು ಕೇವಲ ಸ್ಪರ್ಶಿಸುತ್ತಿದ್ದೇವೆ. ಆದರೆ ಯಾವುದರಲ್ಲಿಯೂ ತಳಸ್ಪರ್ಶಿಯಾಗುತ್ತಿಲ್ಲ. ಯಾವುದಾದರೂ ಒಂದು ವಿಷಯದಲ್ಲಿ ಸ್ಥಿರವಾದ ಗಮನವನ್ನು ನೆಲೆನಿಲ್ಲಿಸಿದಾಗ ಸಾಕ್ಷಾತ್ಕಾರವನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.

ದೇಹದಲ್ಲಿ ಚಟುವಟಿಕೆಗಳು ಕಡಿಮೆ ಇದ್ದಾಗ ಕಡಿಮೆ ಆಹಾರ ಸಾಕು. ಕಾರ್ಯಚಟುವಟಿಕೆ ಹೆಚ್ಚಿದ್ದಾಗ ಆಹಾರದ ಅವಶ್ಯಕತೆಯೂ ಸಹಜವಾಗಿ ಹೆಚ್ಚಾಗುತ್ತದೆ. ಧ್ಯಾನಮಾರ್ಗದಲ್ಲಿ ಸಾಗುವಾಗಲೂ ಕಡಿಮೆ ಆಹಾರ ಸಾಕಾಗುತ್ತದೆ. ಬಾಹ್ಯ ಚಟುವಟಿಕೆಗಳು ಇಲ್ಲದೇ ಇರುವುದರಿಂದ ಸಮಾಧಿ ಸ್ಥಿತಿಯ ಪೂರ್ವದಲ್ಲಿ ಗಾಳಿ ಮಾತ್ರವೂ ಸಾಕಾಗಬಹುದು. ಸಮಾಧಿ ಸ್ಥಿತಿಯಲ್ಲಿ ಉಸಿರಾಟವಾಗಲಿ, ಹೃದಯ ಬಡಿತವಾಗಲಿ ಯಾವುದೂ ಇರುವುದಿಲ್ಲ. ಹಾಗಾಗಿ ಯಾವುದೇ ಆಹಾರವಿಲ್ಲದೇ ಜೀವಿ ಬದುಕಿರುತ್ತಾನೆ. ತಪಸ್ಸು ಎನ್ನುವಾಗ ದೇಹದ ಬಾಹ್ಯ ಚಟುವಟಿಕೆಗಳು ಕಡಿಮೆಯಾಗುತ್ತದೆ, ಮನಸ್ಸು ಮಾತ್ರ ದೇವರ ಕಡೆಗೆ ಏಕಾಗ್ರವಾಗುತ್ತದೆ. ಏಕಾಗ್ರತೆ ಹೆಚ್ಚಾಗುತ್ತಾ ಹೊದಂತೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಉದ್ಯಮಿ ಗೋಪಾಲಕೃಷ್ಣ ಭಟ್ ದ್ವಾರಕಾ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಡಾ. ವೈ.ವಿ. ಕೃಷ್ಣಮೂರ್ತಿ, ಉದ್ಯಮಿ ವಿನಾಯಕ ಹೆಗಡೆ ಕಟ್ಟೆ, ಗಣೇಶ ಆರ್ಕೊಡ್ಲು, ವೇ.ಮೂ. ಮಂಜುನಾಥ ಭಟ್ ಅಗ್ನಿಹೋತ್ರಿ, ಲೋಹಿತ ಹೆಬ್ಬಾರ್, ಹರೀಶ್ ಹೆಗಡೆ, ದಿನಪ್ರಧಾನರಾಗಿ ಕೊಲ್ಲಂಪಾರೆ ನಾರಾಯಣ ಭಟ್ ದಂಪತಿ ಉಪಸ್ಥಿತರಿದ್ದರು.

ಹಿಂದೂ ಮುಕ್ರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಕಳೆದ ದಶಕದಲ್ಲಿ ಮುಕ್ರಿ ಸಮಾಜದವರು ಶ್ರೀಮಠದ ಮಾರ್ಗದರ್ಶನವನ್ನು ಬಯಸಿಬಂದಾಗ, ಹರಿಜನರು ಗುರುಜನರೂ ಹೌದು ಎಂದು ಅವರನ್ನು ಶ್ರೀಗಳು ಶಿಷ್ಯಭಾವದಲ್ಲಿ ಆಶೀರ್ವದಿಸಿದ್ದರು. ಅಂದಿನಿಂದಲೂ ಹಿಂದೂ ಮುಕ್ರಿ ಸಮಾಜದವರು ಶ್ರೀಮಠಕ್ಕೆ ನಡೆದುಕೊಳ್ಳುತ್ತಿದ್ದು, ಸಮಾಜದವರೆಲ್ಲರೂ ಒಟ್ಟಾಗಿ ಬಂದು ಚಾತುರ್ಮಾಸ್ಯದಲ್ಲಿ ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಸಮಾಜವನ್ನು ಅನುಗ್ರಹಿಸಿ ಮಾತನಾಡಿದ ಶ್ರೀಗಳು, ಆರ್ಥಿಕವಾಗಿ ಹಿಂದುಳಿದ ಸಮಾಜವಾದ ಮುಕ್ರಿಗಳು ಪ್ರಗತಿಯನ್ನು ಸಾಧಿಸುವಂತಾಗಬೇಕು. ಗುರುಪರಂಪರೆಯ ಅನುಗ್ರಹದಿಂದ ಮುಕ್ರಿಗಳ ಜೀವನ ಸುಖ ಸಮೃದ್ಧಿಯನ್ನು ಕಾಣುವಂತಾಗಲಿ. ಕುಮಟಾದಲ್ಲಿ ಮುಕ್ರಿ ಸಮಾಜ ಭವನ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿರುವುದ್ದು, ಇದು ಆದಷ್ಟು ಶೀಘ್ರವಾಗಿ ಪೂರ್ಣಗೊಂಡು ಸಮಾಜದ ಬಳಕೆಗೆ ಲಭಿಸುವಂತಾಗಲಿ. ಇದಕ್ಕೆ ಶ್ರೀಮಠದ ಆಶೀರ್ವಾದ ಇರಲಿದೆ ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ಎನ್.ಆರ್. ಮುಕ್ರಿ, ಶಿವು ಮುಕ್ರಿ, ಅಣ್ಣಪ್ಪ ಮುಕ್ರಿ, ಎಂ.ಡಿ. ಮುಕ್ರಿ ಸೇರಿ ನೂರಾರು ಮುಕ್ರಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡ ಅಂತಾಪುರದಲ್ಲಿ ಮತ್ತೆರಡು ಜಿನ ಶಾಸನಗಳ ಅನ್ವೇಷಣೆ
ಓದುಗರನ್ನು ಗೆಲ್ಲುವಂತಹ ಸಾಹಿತ್ಯ ಸೃಷ್ಟಿಯಾಗಲಿ: ಸತೀಶ ಕುಲಕರ್ಣಿ