ಸಾವಿರಾರು ಜನ ಗುಳೇ ಹೋದರೂ ಕೂಡ್ಲಿಗಿ, ಕೊಟ್ಟೂರು ಬರ ಪೀಡಿತವಲ್ಲ

KannadaprabhaNewsNetwork |  
Published : Aug 28, 2026, 02:30 AM IST
ತೀವ್ರ ಬರದಿಂದ ತತ್ತರಿಸಿದ್ದ ಕೂಡ್ಲಿಗಿ ಜನ ಗುಳೆ ಹೋದ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ವರದಿ | Kannada Prabha

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿಗೆ ಒಳಗಾಗಿರುವ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಿಂದ ಸಾವಿರಾರು ಜನರು ಗುಳೇ ಹೋಗಿ ಬೆಳೆ ಪೂರ್ತಿ ನಾಶವಾದರೂ ಸಹ ಈ ತಾಲೂಕುಗಳು ಬರ ಪೀಡಿತ ತಾಲೂಕುಗಳಲ್ಲಿ ಇಲ್ಲ.

ಸಿ.ಕೆ. ನಾಗರಾಜ

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿಗೆ ಒಳಗಾಗಿರುವ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಿಂದ ಸಾವಿರಾರು ಜನರು ಗುಳೇ ಹೋಗಿ ಬೆಳೆ ಪೂರ್ತಿ ನಾಶವಾದರೂ ಸಹ ಈ ತಾಲೂಕುಗಳು ಬರ ಪೀಡಿತ ತಾಲೂಕುಗಳಲ್ಲಿ ಇಲ್ಲ!

ಹೌದು, ಇದು ಅಚ್ಚರಿಯಾದರೂ ಸತ್ಯ. ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಿಂದ ರೈತರು, ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಲಾರಿ, ಬಸ್‌ ಮತ್ತಿತರ ವಾಹನಗಳ ಮೂಲಕ ಗುಳೆ ಹೋಗಿದ್ದು, ಕನ್ನಡಪ್ರಭ ಎರಡು ಬಾರಿ ಫೋಟೋ ಸಹಿತ ಮುಖ ಪುಟದಲ್ಲಿ ವರದಿ ಮಾಡಿ ಗಮನ ಸೆಳೆದಿದ್ದರೂ, ಇದೀಗ ಆ ಎರಡೂ ತಾಲೂಕುಗಳಿಗೆ ಬರಪೀಡಿತದ ಪಟ್ಟವಿಲ್ಲ, ನೆರವಿನ ಭಾಗ್ಯವಿಲ್ಲ.

ರಾಜ್ಯ ಸರ್ಕಾರ ಗುರುವಾರ ಘೋಷಣೆ ಮಾಡಿದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕುಗಳು ನಾಪತ್ತೆಯಾಗಿವೆ. ಮೊದಲ ಹಂತದಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಹರಪನಹಳ್ಳಿ, ಹೂವಿನಹಡಲಿ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.

ಆದರೆ, ತೀರಾ ಹಿಂದುಳಿದ ತಾಲೂಕುಗಳಾದ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ರಾಜ್ಯ ಸರ್ಕಾರ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡದೇ ಈ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಡವಾಗಿ ಗುಳೆ

ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ರೈತರು ಹಾಗೂ ಕೂಲಿ ಕಾರ್ಮಿಕರು ತಂಡೋಪ ತಂಡವಾಗಿ ಗುಳೆ ಹೊಗಿದ್ದಾರೆ. ಸಾಲ ಮಾಡಿ ಬಿತ್ತಿದ್ದ ಬೆಳೆ ಬಾರದೇ, ಮಳೆ ಕೈಕೊಟ್ಟ ಕಾರಣ ಮಾಡಿದ ಸಾಲ ತೀರಿಸಲು ರಾತ್ರೋ ರಾತ್ರಿ ದಕ್ಷಿಣ ಕರ್ನಾಟಕಕ್ಕೆ ಲಾರಿ ಮಾಡಿಕೊಂಡು ಗುಳೇ ಹೋಗಿದ್ದಾರೆ.

ಸದಾ ಬರವನ್ನೇ ಹಾಸಿ ಹೊದ್ದ ಮಲಗುವ ಕೂಡ್ಲಿಗಿ, ಕೊಟ್ಟೂರು ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಆಗದೇ, ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೇ ಕಮರಿ ಹೋಗಿದ್ದವು. ಮಾಡಿದ ಸಾಲ ತೀರಿಸಲು ಈ ತಾಲೂಕುಗಳ ಜನರು ಗುಳೇ ಹೋಗುವುದು ಅನಿವಾರ್ಯವಾಗಿತ್ತು. ಇದನೆಲ್ಲವನ್ನೂ ಅರಿತ ಸರ್ಕಾರ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ಮೊದಲು ಬರ ತಾಲೂಕುಗಳೆಂದು ಘೋಷಿಸಿಬೇಕಿತ್ತು. ಆದರೆ, ಇವೆರಡು ತಾಲೂಕುಗಳು ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿರದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಜಿಲ್ಲೆಯಲ್ಲಿ ಜೋಳ, ಮೆಕ್ಕೆಜೋಳ, ರಾಗಿ, ಹತ್ತಿ, ಭತ್ತ ಪ್ರಮುಖ ಬೆಳೆಗಳಾಗಿವೆ. ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ನಾಲ್ಕು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದರಿಂದ ಬರಗಾಲ ಅಧ್ಯಯನಕ್ಕಾಗಿ ಬಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವರದಿ ಆಧಾರದ ಮೇಲೆ ವಿಜಯನಗರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ.

ದೀರ್ಘಕಾಲೀನ ಸರಾಸರಿಗಿಂತ ಶೇ. 25 ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಕೊರತೆಯನ್ನು ಸೂಚಿಸುವ ಹವಾಮಾನ ವರದಿ ಆಧಾರ ಮತ್ತು ಉಪಗ್ರಹ ದತ್ತಾಂಶದ ಮೂಲಕ ಬೆಳೆಯ ಸ್ಥಿತಿಗತಿಯ ಮೌಲ್ಯಮಾಪನ, ಮಣ್ಣಿನ ತೇವಾಂಶದಲ್ಲಿ ಕೃಷಿ ಭೂಮಿಯಲ್ಲಿ ಕಂಡುಬರುವ ತೇವಾಂಶದ ಕೊರತೆ ಆಧರಿಸಿ ಮತ್ತು ಅಂತರ್ಜಲ ಮಟ್ಟ ಕುಸಿತ, ಬಿತ್ತನೆ ಮಾಡಿದ ಪ್ರದೇಶದಲ್ಲಿ ಬಾಧಿತವಾದ ಅಥವಾ ಹಾನಿಗೊಳಗಾದ ಪ್ರದೇಶದ ಶೇಕಡವಾರು ಪ್ರಮಾಣವನ್ನು ಪರಿಗಣಿಸಿ ಸರ್ಕಾರ ಬರ ಘೋಷಣೆ ಮಾಡಿರಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ವರದಿಯ ಮೇಲೆಯೇ ಶಂಕೆ

ಬರ ಘೋಷಣೆಯಲ್ಲಿ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ, ವರದಿಯ ಮೇಲೆಯೇ ಶಂಕೆ ವ್ಯಕ್ತವಾಗಿದ್ದು, ಈ ತಾಲೂಕಿನ ರೈತರಿಗೆ ಅನ್ಯಾಯವಾಗಲಿದೆ. ತಕ್ಷಣವೇ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಬರ ಅಧ್ಯಯನ ನಡೆಸಿದ ಪ್ರಕಾರ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳಲ್ಲಿ ಮೂರು ವಾರಗಳ ಕಾಲ ಯಾವುದೇ ಮಳೆ ಸುರಿಯದೇ ಇದ್ದಿದ್ದರೆ ಆಗ ಆ ತಾಲೂಕುಗಳೂ ಬರ ಪೀಡಿತ ಎಂದು ಘೋಷಣೆ ಆಗುತ್ತಿದ್ದವು. ಆದರೆ, ಆಗೊಮ್ಮೆ ಈಗೊಮ್ಮೆ ಮಳೆ ಸುರಿದ್ದರಿಂದ ಬರ ಘೋಷಣೆ ಮಾನದಂಡದಲ್ಲಿ ಸೇರದೇ ಇರಬಹುದು. ಆದರೂ ಮತ್ತೊಮ್ಮೆ ಸಮಗ್ರವಾದ ವರದಿಯನ್ನು ಸ್ಥಳೀಯ ಅಧಿಕಾರಿಗಳಿಂದ ತರಿಸಿಕೊಂಡು ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ಎರಡನೇ ಪಟ್ಟಿಯಲ್ಲಿಯಾದರೂ ಬರ ತಾಲೂಕುಗಳೆಂದು ಘೋಷಣೆ ಮಾಡಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಜಿಲ್ಲೆಯ ಆರು ತಾಲೂಕುಗಳನ್ನು ಬರ ಪೀಡಿತ ಘೋಷಣೆ ಮಾಡುವಂತೆ ಈಗಾಗಲೇ ರೈತ ಸಂಘದಿಂದ ಒತ್ತಾಯಸಲಾಗಿತ್ತು. ಆದರೆ, ನಾಲ್ಕು ತಾಲೂಕುಗಳನ್ನು ಘೋಷಣೆ ಮಾಡಿ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಎರಡನೇ ಪಟ್ಟಿಯಲ್ಲಿ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ಘೋಷಣೆ ಮಾಡದೆ ಇದ್ದರೆ ರೈತ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ. ನಾಗರಾಜ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡ ಅಂತಾಪುರದಲ್ಲಿ ಮತ್ತೆರಡು ಜಿನ ಶಾಸನಗಳ ಅನ್ವೇಷಣೆ
ಓದುಗರನ್ನು ಗೆಲ್ಲುವಂತಹ ಸಾಹಿತ್ಯ ಸೃಷ್ಟಿಯಾಗಲಿ: ಸತೀಶ ಕುಲಕರ್ಣಿ