ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅನುದಾನ ವಾಪಸ್‌ಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ಶಾಸಕ ಎ,ಆರ್. ಕೃಷ್ಣಮೂರ್ತಿ ಸೂಚಿಸಿದರು.ಪಟ್ಟಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ 2204ರ ಲೆಕ್ಕ ಶಿರ್ಷಿಕೆಯಡಿ ₹27 ಲಕ್ಷ ಅನುದಾನ ಹಾಗೂ ಯಳಂದೂರಿಗೆ ₹14 ಲಕ್ಷ ಬಿಡುಗೆಯಾಗಿತ್ತು. ಇದನ್ನು ಪೀಠೋಪಕರಣ ಸೇರಿದಂತೆ ಇತರೆ ಸಾಮಗ್ರಿ ಖರೀದಿಸಲು ಬಳಸಬೇಕಿತ್ತು. ಅನುದಾನವನ್ನು ಬಳಸದೆ ಇರುವುದರಿಂದ ₹42 ಲಕ್ಷ ಅನುದಾನ ವಾಪಸ್ ಹೋಗಿದ್ದು, ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮ ಶಿಸ್ತು ಕ್ರಮ ಕೈಗೊಳ್ಳಿ. ಓರ್ವ ಬೃಹಸ್ಪತಿ ಎಂಜಿನಿಯರ್ ಸರಿಯಾಗಿ ಕೆಲಸ ಮಾಡಲ್ಲ ಎಂದು ಎಂಜಿನಿಯರ್ ಮಂಜು ವಿರುದ್ಧ ಅಸಮಾದಾನ ಹೊರಹಾಕಿದರು. ಇಂತಹವರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಎಂದು ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿಗೆ ತಾಕೀತು ಮಾಡಿದರು.ಕೊಳ್ಳೇಗಾಲದಲ್ಲಿ 12 ಎಕರೆ ಜಾಗದ ಪೈಕಿ 5 ಎಕರೆ ಜಾಗವನ್ನು ಜಿಲ್ಲಾಸ್ಪತ್ರೆ ನಿರ್ಮಿಸುವ ಉದ್ದೇಶದಿಂದ ನೀಡಲು ಸಚಿವ ವೆಂಕಟೇಶ್ ಒಪ್ಪಿಗೆ ಸೂಚಿಸಿದ್ದಾರೆ. ಕೊಳ್ಳೇಗಾಲ ಹೖದಯಭಾಗದಲ್ಲೆ ಆಸ್ಪತ್ರೆ ನಿರ್ಮಾಣವಾದರೆ ಸಾವಿರಾರು ಮಂದಿಗೆ ಉಪಯೋಗವಾಗಲಿದ್ದು, ಈ ನಿಟ್ಟಿನಲ್ಲಿ ಇಲಾಖೆಗೆ ಸೇರಿದ 5 ಎಕರೆ ಭೂಮಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಈ ಆಸ್ಪತ್ರೆ ನಿರ್ಮಾಣದಿಂದ ಬಡವರು, ರೈತೈಪಿ ವರ್ಗಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.
ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಶಾಸಕರ ಗಮನಕ್ಕೆ ತಾರದೆ ಕ್ರಿಯಾ ಯೋಜನೆ ಮಾಡಿ ಕಳುಹಿಸಿದ್ದಾರೆ. ಅದನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಖಂಡಿಸಿದ್ದ ಪರಿಣಾಮ ಮಾರ್ಪಡಿಗೆ ಮುಂದಾಗಿದ್ದಾರೆ. ಮಾರ್ಪಾಡು ಮಾಡಲು ಒಪ್ಪುವುದಿಲ್ಲ ಬದಲಿ ಕ್ರಿಯಾ ಯೋಜನೆ ಮಾಡಿ ಅನುಮೋದನೆ ಪಡೆಯಬೇಕು ಎಂದು ಶಾಸಕರಾದ ಎಂ ಆರ್ ಮಂಜುನಾಥ್, ಕೖಷ್ಣಮೂರ್ತಿ ಜಿಪಂ ಎಇಇ ಕುಮಾರ್‌ಗೆ ಸೂಚಿಸಿದರು.ಈಗಾಗಲೇ ಕ್ರಿಯಾ ಯೋಜನೆಗೆ ಅನುಮತಿ ದೊರೆತ್ತಿದ್ದು ಬದಲಾವಣೆ ಮಾಡಲು ಅವಕಾಶ ಇದೆ. ಹಾಗಾಗಿ ಬದಲಾವಣೆ ಮಾಡಿಕೊಡಿ ಎಂದು ಮನವಿ ಮಾಡಿದರು, ಇದಕ್ಕೆ ಶಾಸಕರಿಬ್ಬರು ಸಮ್ಮತಿಸಲಿಲ್ಲ. ಜಿಪಂ ತಾಂತ್ರಿಕ ವಿಭಾಗಕ್ಕೆ ವಿವಿಧ ಕಾಮಗಾರಿಗಾಗಿ ಬಿಡುಗಡೆಯಾದ ಹಣದಲ್ಲಿ ಜಿಲ್ಲಾ ಹಾಗೂ ರಾಜ್ಯ ಹಂತದ ಅಧಿಕಾರಿಗಳು ಸ್ಥಳೀಯ ಶಾಸಕರುಗಳನ್ನು ಕಡೆಗಣಿಸಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಿರುವುದು ಸರಿಯಾದ ಬೆಳವಣಿಗೆಯಲ್ಲ.
ಹಾಗಾಗಿ ಜಿಪಂ ಅಧಿಕಾರಿಗಳು ತಯಾರಿಸಿರುವ ಕ್ರಿಯಾಯೋಜನೆ ಹಿಂಪಡೆಯಬೇಕು, ಜಿಲ್ಲೆಯ ನಾಲ್ಕು ಮಂದಿ ಶಾಸಕರಿಗೂ ಬಿಡುಗಡೆಯಾದ ಹಣ, ಕೈಗೊಳ್ಳಬೇಕಾದ ಕಾಮಗಾರಿ ಬಗ್ಗೆ ಮಾಹಿತಿ ನೀಡದೆ ತಾವೇ ಕ್ರಿಯಾಯೋಜನೆ ತಯಾರಿಸಿರುವುದು ಸರಿಯಾದ ಬೆಳವಣಿಗೆಯಲ್ಲ. ಪುನ ಹೊಸ ಕ್ರಿಯಾಯೋಜನೆ ತಯಾರಿಸಿದರೆ ಮಾತ್ರ ನಾವು ಒಪ್ಪುತ್ತೇವೆ. ಈಬೆಳವಣಿಗೆ ಖಂಡಿಸುತ್ತೇವೆ ಎಂದು ಅಸಮಾದಾನ ಹೊರಹಾಕಿದರು.ಪಟ್ಟಣದಲ್ಲಿ ಕಳೆದ ಎರಡು ದಶಕಗಳಿಂದ ಬಾಕಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಭವನ, ಗಡಿ ನಾಡ ಭವನ, ಸ್ತ್ರೀ ಶಕ್ತಿ ಭವನ ಸೇರಿದಂತೆ ಇತರೆ ಭವನಗಳನ್ನು ಪೂರ್ಣಗೊಳಿಸಲು ವಿಶೇಷ ಅನುದಾನದಲ್ಲಿ ಹಣ ನೀಡಿದ್ದರು. ಆದರೆ ಕಾಮಗಾರಿ ಪೂರ್ಣಗೊಳಿಸದೆ ಇರುವ ಕ್ರಮಕ್ಕೆ ಶಾಸಕರು ಬೇಸರ ವ್ಯಕ್ತಪಡಿಸಿ, ಕೆಆರ್‌ಡಿಎಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕೆಲಸ ಕೊಡಿ ಎಂದು ದುಂಬಾಲು ಬೀಳುತ್ತೀರಿ. ಕೆಲಸ ಕೊಟ್ಟರೆ ವರ್ಷಗಳೆ ಕಳೆದರೂ ಕೆಲಸ ಮಾಡುವುದಿಲ್ಲ. ಆದಷ್ಟು ಬೇಗ ಕಟ್ಟಡಗಳ ಬಾಕಿ ಕೆಲಸವನ್ನು ಪೂರ್ಣಗೊಳಿಸಿ. ಕೆಲಸ ತೆಗೆದುಕೊಳ್ಳುವಾಗ ಇರುವ ಉತ್ಸಾಹ ಮುಗಿಸುವಲ್ಲಿಯೂ ಇರಬೇಕು. ಟ್ಯಾಂಕ್‌ಗೆ ಬೋರ್ ವೆಲ್ ನೀರೆ ಇರಲಿ, ಕಾವೇರಿ ನೀರಿಗೆ ಬೇರೆ ಟ್ಯಾಂಕ್ ನಿರ್ಮಾಣ ಮಾಡಿ ಎಂದು ತಾಲೂಕಿನ ಸೂರಾಪುರದ ಗ್ರಾಮಸ್ಥರು ಪಟ್ಟು ಹಿಡಿದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು.ಅಧಿಕಾರಿಗಳು ಟ್ಯಾಂಕ್ ತುಂಬಿಸಿ ನೀರು ಬಿಡಲಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿದ ವಿಚಾರ ಸಭೆಯನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಕಾಮಗಾರಿಯೇ ನಡೆಯದಿದ್ದರೂ ನೀರು ಬಿಟ್ಟಿದ್ದೇವೆ ಎಂದು ಹೇಳುವುದು ಎಷ್ಟು ಸರಿ ಎಂದು ಶಾಸಕ ಮಂಜುನಾಥ್ ಪ್ರಶ್ನಿಸಿದರು.
ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದೇವು ಎಂದಾಗ ಕೃಷ್ಣಮೂರ್ತಿಯವರು ಎರಡು ಮೂರು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಈ ವಿಷಯ ಪ್ರಸ್ತಾಪವಾಗಲಿಲ್ಲ. ಮತ್ತೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತನಾಡುವುದಾಗಿ ತಿಳಿಸಿದರು.ಶಾಸಕ ಮಂಜುನಾಥ್ ಮಾತನಾಡಿ, ಅಂಗನವಾಡಿಗಳು ಮಕ್ಕಳ ಮೊದಲ ಪಾಠ ಶಾಲೆ ಅವುಗಳ ಅಭಿವೃದ್ಧಿ, ಉತ್ತಮ ರೀತಿ ಸುಧಾರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು
ತಹಸೀಲ್ದಾರ್ ಬಸವರಾಜು, ಇ.ಓ ಗುರುಶಾಂತಪ್ಪ ಬೆಳ್ಳುಂಡಗಿ. ಗ್ಯಾರಂಟಿ ಯೋಜನೆಗಳ ತಾಲೂಕು ಅದ್ಯಕ್ಷ ರಾಜೇಂದ್ರ ಇದ್ದರು.