ಕಬ್ಬು ಬೆಳೆಗಾರರಿಗೆ ನ್ಯಾಯಯುತವಾಗಿ ಬೆಲೆ ಸಿಕ್ಕಿದ್ದರೆ ಈ ವೇಳೆಗಾಗಲೇ ಕಬ್ಬು ಕಟಾವು ಆಗಿ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡಿ ರೈತರ ಕೈಗೆ ಹಣವೂ ಬಂದಿರುತ್ತಿತ್ತು.
ನಾರಾಯಣ ಹೆಗಡೆ ಹಾವೇರಿ
ಒಂದು ಕಡೆ ರೈತರ ಬೇಡಿಕೆಗಳು ಈಡೇರದ್ದರಿಂದ ಕಬ್ಬು ಬೆಳೆಗಾರರು ಹೋರಾಟದಲ್ಲೇ ದಿನ ಕಳೆಯುವಂತಾಗಿದ್ದರೆ, ಇನ್ನೊಂದು ಕಡೆ ಅಗ್ನಿ ಆಕಸ್ಮಿಕದಿಂದ ಕಬ್ಬಿನ ಬೆಳೆಯೇ ಸುಟ್ಟು ಭಸ್ಮವಾಗುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ನಿತ್ಯವೂ ನಡೆಯುತ್ತಿರುವುದು ರೈತರನ್ನು ಆತಂಕಕ್ಕೆ ನೂಕಿದಂತಾಗಿದೆ.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ರೈತರಿಗೆ ಈಗ ಬೆಳೆಯೇ ಭಾರವಾಗುತ್ತಿದೆ. ಮಳೆ ಕೈಕೊಟ್ಟ ಪರಿಣಾಮ ನೀರಿನ ಅಭಾವ ಎದುರಾಗಿ ಕಬ್ಬಿನ ಹೊಲಗಳು ಒಣಗುತ್ತಿವೆ. ಇನ್ನೊಂದೆಡೆ, ಬೆಂಕಿಗೆ ಆಹುತಿಯಾಗುತ್ತಿರುವ ಕಬ್ಬು ಬೆಳೆ ರೈತರ ಆತಂಕವನ್ನು ಇಮ್ಮಡಿಗೊಳಿಸಿದೆ. ತಿಂಗಳುಗಟ್ಟಲೆ ಶ್ರಮಿಸಿ, ಲಕ್ಷಾಂತರ ರುಪಾಯಿ ಹೂಡಿಕೆ ಮಾಡಿ ಬೆಳೆಸಿದ ಕಬ್ಬು ಕಣ್ಣೆದುರೇ ಬೆಂಕಿಗೆ ಸಿಲುಕಿ ನಾಶವಾಗುತ್ತಿರುವ ದೃಶ್ಯ ಅನ್ನದಾತರನ್ನು ಕಂಗೆಡಿಸಿದೆ.
ಕಬ್ಬು ಬೆಳೆಗಾರರಿಗೆ ನ್ಯಾಯಯುತವಾಗಿ ಬೆಲೆ ಸಿಕ್ಕಿದ್ದರೆ ಈ ವೇಳೆಗಾಗಲೇ ಕಬ್ಬು ಕಟಾವು ಆಗಿ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡಿ ರೈತರ ಕೈಗೆ ಹಣವೂ ಬಂದಿರುತ್ತಿತ್ತು. ಆದರೆ, ಈ ಸಲ ರೈತರ ಬೇಡಿಕೆ ಇನ್ನೂ ಈಡೇರದ್ದರಿಂದ ಕಾರ್ಖಾನೆ ಆರಂಭವಾಗಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ.
ಜಿಲ್ಲೆಯ ಬ್ಯಾಡಗಿ ಕ್ಷೇತ್ರ ವ್ಯಾಪ್ತಿಯಲ್ಲಿ 20 ರೈತರಿಗೆ ಸೇರಿದ 49 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ವಿವಿಧ ಕಾರಣದಿಂದ ಬೆಂಕಿ ಬಿದ್ದು ನಷ್ಟವಾಗಿದೆ. ಹಾವೇರಿ ತಾಲೂಕಿನಲ್ಲಿ 9 ಎಕರೆ, ಹಾನಗಲ್ಲ ತಾಲೂಕಿನಲ್ಲಿ 10 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.
24 ಸಾವಿರ ಎಕರೆ ಕಬ್ಬು: ಜಿಲ್ಲೆಯಲ್ಲಿ ಕಬ್ಬು ಕೃಷಿಯ ವ್ಯಾಪ್ತಿ ದೊಡ್ಡದಿದ್ದು, ಸಾವಿರಾರು ಕುಟುಂಬಗಳ ಬದುಕು ಈ ಬೆಳೆಯನ್ನೇ ಅವಲಂಬಿಸಿದೆ. 2026–27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 9,649 ರೈತರು ಒಟ್ಟು 24,122 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, 5.92 ಲಕ್ಷ ಟನ್ಗೂ ಅಧಿಕ ಇಳುವರಿಯನ್ನು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಕೃಷಿ ಪ್ರದೇಶದಲ್ಲಿ ನೀರಿನ ಕೊರತೆ ಹಾಗೂ ಬೆಂಕಿ ಅವಘಡಗಳ ಆತಂಕ ಎದುರಾದರೆ, ಅದರ ಹೊಡೆತ ರೈತರ ಆರ್ಥಿಕ ಸ್ಥಿತಿಯ ಮೇಲೂ ಬೀಳಲಿದೆ.
ಕಬ್ಬು ಒಣಗುವುದರಿಂದ ಕೇವಲ ಇಳುವರಿ ಕಡಿಮೆಯಾಗುವುದಷ್ಟೇ ಅಲ್ಲ, ಬೆಳೆ ನಿರ್ವಹಣೆಗೆ ಮಾಡಿದ ಹೂಡಿಕೆ ವಾಪಸ್ ಪಡೆಯುವುದೂ ಕಷ್ಟವಾಗುತ್ತದೆ. ಬೆಂಕಿಗೆ ಬೆಳೆ ಆಹುತಿಯಾದರೆ ರೈತರಿಗೆ ಮತ್ತಷ್ಟು ನಷ್ಟವಾಗುತ್ತದೆ. ಬೆಳೆ ವಿಮೆ, ಪರಿಹಾರ ಮತ್ತು ಅಗತ್ಯ ನೆರವು ಸಕಾಲಕ್ಕೆ ಸಿಗದಿದ್ದರೆ ಸಾಲದ ಹೊರೆ ಹೆಚ್ಚುವ ಸಾಧ್ಯತೆಯೂ ಇದೆ.
ಬೆಂಕಿ ಅವಘಡ: ಕಬ್ಬಿನ ಒಣಗಿದ ಎಲೆಗಳು ಬೆಂಕಿ ವೇಗವಾಗಿ ಹರಡಲು ಕಾರಣವಾಗಬಹುದು. ವಿದ್ಯುತ್ ತಂತಿಗಳ ದೋಷ, ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಕಾರಣಗಳಿಂದ ಬೆಂಕಿ ಹೊತ್ತಿಕೊಂಡರೆ, ಕ್ಷಣಾರ್ಧದಲ್ಲಿ ಹೊಲದ ತುಂಬ ಹರಡುವ ಅಪಾಯವಿದೆ. ಹೀಗಾಗಿ ಹೊಲಗಳ ಸಮೀಪದ ವಿದ್ಯುತ್ ಮಾರ್ಗಗಳ ಪರಿಶೀಲನೆ, ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಹಾಗೂ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವ ವ್ಯವಸ್ಥೆ ಅಗತ್ಯವಾಗಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕಬ್ಬು ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಬೆಂಕಿಯಿಂದ ಹಾನಿಗೊಳಗಾದ ಹೊಲಗಳ ಸಮೀಕ್ಷೆ ನಡೆಸಿ, ನಷ್ಟದ ಪ್ರಮಾಣವನ್ನು ದಾಖಲಿಸಿ, ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕು. ನೀರಿನ ಕೊರತೆಯಿಂದ ಒಣಗುತ್ತಿರುವ ಬೆಳೆಗಳಿಗೆ ಲಭ್ಯವಿರುವ ನೀರಾವರಿ ಮೂಲಗಳ ಮೂಲಕ ನೆರವು ನೀಡುವ ಸಾಧ್ಯತೆಯನ್ನೂ ಪರಿಶೀಲಿಸಬೇಕು.
ಕಬ್ಬು ಬೆಳೆಸಲು ಮಾಡಿದ ಸಾಲ, ಗೊಬ್ಬರದ ಖರ್ಚು, ಕೂಲಿ ವೆಚ್ಚ ಮತ್ತು ನೀರಾವರಿಗಾಗಿ ಮಾಡಿದ ಹೂಡಿಕೆ ಇವೆಲ್ಲವನ್ನೂ ಕಟಾವಿನ ಬಳಿಕ ಬರುವ ಆದಾಯದಿಂದ ಸರಿದೂಗಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಆದರೆ ಬೆಳೆ ಒಣಗಿದರೆ ಅಥವಾ ಬೆಂಕಿಗೆ ಆಹುತಿಯಾದರೆ ಅವರ ಲೆಕ್ಕಾಚಾರವೇ ತಲೆಕೆಳಗಾಗುತ್ತದೆ. ಕಬ್ಬಿನ ಹೊಲಗಳು ಹಸಿರಾಗಿರಬೇಕಾದ ಸಮಯದಲ್ಲಿ ಒಣಗುವ ಸ್ಥಿತಿ ನಿರ್ಮಾಣವಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ಈಗ ಅಗತ್ಯ. ಒಣಗುತ್ತಿರುವ ಬೆಳೆಗೆ ನೀರಿನ ನೆರವು, ಬೆಂಕಿ ಅವಘಡ ತಡೆಗೆ ಮುನ್ನೆಚ್ಚರಿಕೆ, ಹಾನಿಗೊಳಗಾದ ಹೊಲಗಳ ಸಮೀಕ್ಷೆ ಹಾಗೂ ಅರ್ಹರಿಗೆ ಪರಿಹಾರ ಈ ಕ್ರಮಗಳು ವಿಳಂಬವಿಲ್ಲದೆ ಜಾರಿಯಾಗಬೇಕಿವೆ. ಇಲ್ಲವಾದರೆ, ಕಬ್ಬಿನ ಹೊಲದಲ್ಲಿ ರೈತ ಬೆಳೆಸಿದ ಕನಸು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗುವ ಆತಂಕ ಮುಂದುವರಿಯಲಿದೆ.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೆರೆಕಟ್ಟೆಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಕೊಳವೆಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದಿದ್ದು, ತೀವ್ರ ಬಿಸಿಲಿನ ಪರಿಣಾಮ ಕಟಾವಿಗೆ ಬರುವ ಹಂತದಲ್ಲಿರುವ ಕಬ್ಬು ಬೆಳೆ ಒಣಗುತ್ತಿದೆ. ಅಗ್ನಿ ಅವಘಡಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ. ಆದ್ದರಿಂದ ಕಾರ್ಖಾನೆಗಳು ಆರಂಭವಾಗದಿದ್ದರೆ ರೈತರು ಬೆಳೆದ ಕಬ್ಬನ್ನು ಉಳಿಸಿಕೊಳ್ಳುವುದು ಮತ್ತಷ್ಟು ಕಷ್ಟವಾಗಲಿದೆ. ಅದಕ್ಕಾಗಿ ರೈತ ಮುಖಂಡರು ಕಾರ್ಖಾನೆ ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.