10 ತಿಂಗಳಲ್ಲೇ ರು. 2009 ಕೋಟಿ ಅನುದಾನ ವೆಚ್ಚ

KannadaprabhaNewsNetwork | Published : Jun 13, 2024 12:52 AM

ಸಾರಾಂಶ

ಕೆಕೆಆರ್‌ಡಿಬಿಗೆ 2023-24ನೇ ಸಾಲಿಗೆ ರಾಜ್ಯ ಸರ್ಕಾರ ₹5 ಸಾವಿರ ಕೋಟಿ ಅನುದಾನ ಘೋಷಿಸಿ, ₹3 ಸಾವಿರ ಕೋಟಿ ಹಂಚಿಕೆ‌ ಮಾಡಿತ್ತು. ಇದರಲ್ಲಿ ಇದೂವರೆಗೆ ₹2,009 ಕೋಟಿ ಖರ್ಚು ಮಾಡಿದ್ದು, ಬರುವ ಆಗಸ್ಟ್ ಮಾಹೆ ವರೆಗೆ ಉಳಿದ ಅನುದಾನ ಸಹ ಖರ್ಚು ಮಾಡಲಾಗುವುದು: ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ಸಿಂಗ್‌

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರಕಾರದಿಂದ ಬರುವ ಅನುದಾನ ವೆಚ್ಚವಾಗೋದೇ ಇಲ್ಲವೆಂಬ ಆರೋಪಗಳು ಸದಾಕಾಲ ಕೇಳಿ ಬರುತ್ತಿದ್ದವು. ಆದರೆ, ಕಳೆದ 10 ತಿಂಗಳಲ್ಲಿ ಕೆಕೆಆರ್‌ಡಿಬಿಗೆ ದಶಕದಲ್ಲೇ ವೆಚ್ಚವಾಗದಷ್ಟು ಮೊತ್ತವನ್ನ ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡುವ ಮೂಲಕ ದಾಖಲೆ ಮಾಡಿದೆ ಎಂದು ಮಂಡಳಿಯ ಅಧ್ಯಕ್ಷ ಡಾ. ಅಜಯ್‌ಸಿಂಗ್‌ ಹೇಳಿದ್ದಾರೆ.

ಇಲ್ಲಿನ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಕೆಆರ್‌ಡಿಬಿಗೆ 2023-24ನೇ ಸಾಲಿಗೆ ರಾಜ್ಯ ಸರ್ಕಾರ ₹5 ಸಾವಿರ ಕೋಟಿ ಅನುದಾನ ಘೋಷಿಸಿ, ₹3 ಸಾವಿರ ಕೋಟಿ ಹಂಚಿಕೆ‌ ಮಾಡಿತ್ತು. ಇದರಲ್ಲಿ ಇದೂವರೆಗೆ ₹2,009 ಕೋಟಿ ಖರ್ಚು ಮಾಡಿದ್ದು, ಬರುವ ಆಗಸ್ಟ್ ಮಾಹೆ ವರೆಗೆ ಉಳಿದ ಅನುದಾನ ಸಹ ಖರ್ಚು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಅನುದಾನವೇ ವೆಚ್ಚ ವಾಗೋದಿಲ್ಲ, ಮೊದಲು ಬಿಡುಗಡೆ ಮಾಡಿದ ಅನುದಾನ ವೆಚ್ಚಮಾಡಿ ಎಂದು ಸಿಎಂ ಅವರೇ ಹಿಂದೆಲ್ಲಾ ಹೇಳಿದ್ದನ್ನು ಎಲ್ಲರು ಗಮನಿಸಿದ್ದಾರೆ. ಆದರೆ ತಾವು ಮಂಡಳಿಯ ಅಧ್ಯಕ್ಷರಾಗಿ ಬಂದ ತಕ್ಷಣವೇ ಶಿಕ್ಷಣ, ಆರೋಗ್ಯ, ಕೃಷಿ, ಕೌಶಲ್ಯ ಅಭಿವೃದ್ಧಿ ರಂಗಗಳಲ್ಲಿ ಹೆಚ್ಚಿನ ಸಾದನೆ ಮಾಡಲು ವಿಶೇಷ ಯೋಜನೆ ರೂಪಿಸಿ ಜಾರಿಗೆ ತಂದ ಬಗ್ಗೆ ಹೇಳುತ್ತ ಇವೆಲ್ಲ ಯೋಜನೆಗಳ ಅನುಷ್ಠಾನದಿಂದಲೇ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುವಂತಾಗಿವೆ ಎಂದರು.

ಹಲವು ಕಾರಣಗಳಿಂದ ರಾಜ್ಯದ ಕೆಲವೆಡೆ ಅಭಿವೃದ್ಧಿ ಅಷ್ಟಾಗಿ ಆಗದೇ ಇರಬಹುದು, ಆದರೆ ಕಲ್ಯಾಣ ಭಾಗದಲ್ಲಂತೂ ಮಂಡಳಿಯ ಕ್ರಿಯಾಶೀಲ ಪಾಲುದಾರಿಕೆಯಿಂದಾಗಿ ಪ್ರಗತಿ ಯೋಜನೆಗಳು ಸದಾಕಾಲ ನಡೆದಿವೆ. ಹೀಗಾಗಿ ಅಭಿವೃದ್ಧಿ ಇಲ್ಲಿ ಹಸಿರು ಚಿಗುರುತ್ತಿದೆ ಎಂದರು.

ಕಳೆದ ವರ್ಷ ನಮ್ಮ ಸರ್ಕಾರ ಈ ಭಾಗಕ್ಕೆ ₹5 ಸಾವಿರ ಕೋಟಿ ಅನುದಾನ ಘೋಷಿಸಿ ₹3 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಿದ್ದು, ಅದರಂತೆ ಪ್ರದೇಶದಲ್ಲಿ ರಸ್ತೆ, ಚರಂಡಿ ನೊರ್ಮಾಣ, ಮೂಲಸೌಕರ್ಯ ಕೆಲಸ ಭರದಿಂದ ಸಾಗಿದೆ. ಇದರೊಂದಿಗೆ ಪ್ರದೇಶದಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಸಿಎಂ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜೂ.14ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ಬಾರಿ ಸಭೆಯಲ್ಲಿ ನಾವು ಕಲ್ಯಾಣದ ಖಾಲಿ ಹುದ್ದೆ ಭರ್ತಿ ವಿಚಾರ, ಕಲಂ 371 ಜೆ ಅನುಷ್ಠಾನದಲ್ಲಿನ ಲೋಪಗಳನ್ನು ಸರಿ ಪಡಿಸೋದು ಸೇರಿದಂತೆ 5 ಸಾವಿರ ಕೋಟಿ ರು ಅನುದಾನಕ್ಕಾಗಿ ಬೇಡಿಕೆ ಇಡುತ್ತೇವೆ ಎಂದು ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ಪ್ರಸಕ್ತ 2024-25ನೇ ಸಾಲಿಗೆ ₹5,000 ಕೋಟಿ ಅನುದಾನ ನೀಡಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಮತ್ತು ಸದರಿ ಅನುದಾನ ಇದೇ ವರ್ಷದಲ್ಲಿ ಖರ್ಚು ಮಾಡುವ ಸಂಬಂಧ ಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಕ.ಕ.ಭಾಗದ ಸಚಿವರನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ ಎಂದರು.

ಸಿ.ಎಂ. ಸಭೆ ನಂತರ ಜೂ.28ಕ್ಕೆ ಮಂಡಳಿ ಸಭೆ ನಡೆಸಲು ನಿರ್ಧರಿಸಿದ್ದು, 15 ದಿನದೊಳಗೆ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಪ್ರಸಕ್ತ ಸಾಲಿನ ಕೆಲಸಗಳು ಆರಂಭಿಸಲಾಗುವುದು. ಈಗಾಗಲೇ ಕಲಬುರಗಿಗೆ ಹಾಗೂ ಯಾದಗಿರಿಗೆ ಭೇಟಿ ನೀಡಿರುವ ಜಲತಜ್ಞ ಡಾ. ರಾಜೇಂದ್ರ ಸಿಂಗ್‌ ಸಲಹೆ ಪಡೆದು ಕೆಕೆಆರ್‌ಡಿಬಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಸುಧಾರಣೆ, ನೀರಿನ ಸಂರಕ್ಷಣೆಯ ಯೋಜನೆ ರೂಪಿಸಿ ಜಾರಿಗೆ ತರುವ ಚಿಂತನೆ ಇದ್ದು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.

ನೀಟ್‌ ಮರು ಪರೀಕ್ಷೆ ನಡೆಸಲಿ: ನೀಟ್ ಪರೀಕ್ಷೆ ಅವ್ಯವಹಾರ ಕುರಿತಂತೆ ಪ್ರತಿಕ್ರಿಯಿಸಿದ ಡಾ.ಅಜಯ್ ಸಿಂಗ್ ಅವರು ಲೋಕಸಭಾ ಚುನಾವಣಾ ಫಲಿತಾಂಶ ದಿನವೆ ಪರೀಕ್ಷೆ ರಿಸಲ್ಟ್ ಘೋಷಣೆ ಮಾಡಿದ್ದು, ಹಲವು ಅವಮಾನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಡೆ ಅವ್ಯವಹಾರ ಕೇಳಿ ಬರುತ್ತಿದ್ದು, ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ‌ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ‌ . ಎನ್‌ಟಿಎಂ ನೀಟ್‌ ಪರೀಕ್ಷೆಯನ್ನೇ ಪುನಃ ನಡೆಸಲಿ, ಶಂಕೆಗಳನ್ನು ದೂರ ಮಾಡಲಿ, ಮಕ್ಕಳಿಗೆ ನ್ಯಾಯ ಕೊಡಲಿ. ಈ ಬಗ್ಗೆ ಕಾಂಗ್ರೆಸ್‌ ಪಕ್ಷದಿಂದ ಹೋರಾಟ ರೂಪಿಸಲಾಗುತ್ತದೆ ಎಂದರು.

371ಜೆ ಮೀಸಲಾತಿ ವಿರೋಧಿಗಳಿಗೆ ಅಜಯ್‌ ಸಿಂಗ್‌ ಚಾಟಿ: ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ದಶಕಗಳ ಹೋರಾಟ ಫಲವಾಗಿ 371(ಜೆ) ಮೀಸಲಾತಿ ದೊರಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಖಂಡಿಸುತ್ತೇನೆ ಎಂದ ಅವರು, ಈ ಭಾಗಕ್ಕೆ ಸಂವಿಧಾನ ಬದ್ಧ ಸಿಗಬೇಕಾದ ಸವಲತ್ತು ದೊರಕಿಸಲು ಮತ್ತು ಮೀಸಲಾತಿ ರಕ್ಷಣೆ‌ಗೆ ತಾವು ಬದ್ಧರಾಗಿದ್ದೇವೆ. ಯಾವುದೇ ಹಂತದ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದರು. ಕಲಂ 371 ಜೆ ನಮ್ಮಹಕ್ಕು. ಇಧನ್ನು ವಿರೋಧಿಸಿ ಹೋರಾಟ ಮಾಡುವವರು ಬೇಕೆಂದಲ್ಲಿ ಇಲ್ಲಿ ಬಂದು ನೋಡಲಿ, ನಮ್ಮ ಹಿಂದುಳಿದಿರುವಿಕೆ ಅದೆಷ್ಟಿದೆ ಎಂಬುದನ್ನು? ಇಂತಹ ಹೋರಾಟಗಳನ್ನು ಯಾರೇ ಮಾಡಲಿ ಅದು ತಪ್ಪು. ಯಾವುದೇ ತ್ಯಾಗ ಮಾಡಿಯಾದರೂ ನಾವು ಇಂತಹ ಹೋರಾಟಗಳನ್ನು ವಿರೋಧಿಸಲು ಸಿದ್ಧವೆಂದು ಡಾ. ಅಜಯ್‌ ಸಿಂಗ್‌ ಹೇಳಿದರು.

Share this article