ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸುತ್ತೂರು ಶಾಖಾ ಮಠದ ಆವರಣದಲ್ಲಿ ಗುರುವಾರ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ- 15 ‘ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ’ ವಿಷಯ ಕುರಿತು ಅವರು ಮಾತನಾಡಿದರು. ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳ ಕಾಲ ದೂರವಿಡಲಾಗಿದೆ. ಮೇಲು- ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕಭಾವ ಭಾರತೀಯರಲ್ಲಿ ಮೂಡಬೇಕು. ದೇಶದ ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಏಳಿಗೆಯಿಂದ ದೇಶ ಅಭಿವೃದ್ಧಿಯಾಗಿದೆ ಎಂದು ಹೇಳಲಾಗದು. ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಇಡೀ ದೇಹ ಆರೋಗ್ಯವಾಗಿದೆ ಎಂದು ಹೇಗೆ ಹೇಳಲು ಆಗುವುದಿಲ್ಲವೋ ಹಾಗೆಯೇ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೂ ಆಗದಿದ್ದರೆ ಅದು ನಿಜವಾದ ಅಭಿವೃದ್ಧಿಯಲ್ಲ. ಹೀಗಾಗಿ ಕಟ್ಟಕಡೆಯ ವ್ಯಕ್ತಿಯೂ ಸಾಮರಸ್ಯ, ಸೌಹಾರ್ದತೆಯಿಂದ, ನಾವೆಲ್ಲರೂ ಒಂದು ಎಂದು ಸಂತೋಷದಿಂದ ಇದ್ದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಆಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಸಮಾಜದಲ್ಲಿ ಸಾಮರಸ್ಯ ಮೂಡಿಸಲು ವಿವಿಧ ಜಾತಿ, ಧರ್ಮ ಮತ್ತು ಭಾಷೆಯ ಜನರ ಮನೆಗಳಿಗೆ ಭೇಟಿ ನೀಡಿ ಸ್ನೇಹ ಬೆಳೆಸಬೇಕು. ದುರ್ಬಲ ವರ್ಗದವರ ಉದ್ಧಾರಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಕಟುವಾದ ನುಡಿಗಳನ್ನು ಬಿಟ್ಟು, ಸತ್ಯ ಮತ್ತು ಪ್ರೀತಿಯಿಂದ ಸಂವಹನ ನಡೆಸುವ ಮೂಲಕ ಮನಸ್ಸಿನ ವಿಕಾರಗಳನ್ನು ದೂರ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದರು.ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆ ಕಟ್ಟಿದ್ದಾರೆ. ನಮ್ಮ ಸಮಾಜವು ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿಯೆಂದು ತಿಳಿದಿದೆ. ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚತ್ಯ ಪರಿಕಲ್ಪನೆ ಎಂದು ಭಾಗವತ್ ತಿಳಿಸಿದರು.
ಸರ್ವೇ ಭವಂತು ಸುಖಿನಃ ಎಂಬ ತತ್ವದಡಿ, ಕೇವಲ ಬದುಕುವುದಕ್ಕಲ್ಲ, ಬದಲಾಗಿ ಇತರರಿಗಾಗಿ ಬದುಕುವ ಗುಣವೇ ಭಾರತೀಯ ಸಮಾಜದ ಶಕ್ತಿ. ಸಮಾಜ ಎಂದರೆ ಕೇವಲ ಜನರ ಗುಂಪಲ್ಲ, ಅದೊಂದು ಭಾವನಾತ್ಮಕ ಐಕ್ಯತೆ. ಭಾರತೀಯ ಮತ್ತು ಪಾಶ್ಚಿಮಾತ್ಯ ಸಮಾಜದ ನಡುವಿನ ವ್ಯತ್ಯಾಸವೇ ಇದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಮಾಜ ಎಂಬುದು ಒಂದು ಸಾಮಾಜಿಕ ಒಪ್ಪಂದ. ಅಲ್ಲಿ ವ್ಯಕ್ತಿಗಳ ನಡುವೆ ಪರಸ್ಪರ ಲಾಭ ಇದ್ದರೆ ಮಾತ್ರ ಸಂಬಂಧವಿರುತ್ತದೆ. ಆದರೆ, ಭಾರತೀಯ ದೃಷ್ಟಿಕೋನದಲ್ಲಿ ಸಮಾಜ ಎಂದರೆ ಸಾಯುಜ್ಯ. ಇದು ಸಾವಿರಾರು ವರ್ಷಗಳಿಂದ ಒಟ್ಟಾಗಿ ಬಾಳಿದ ಜನರ ನಡುವೆ ಉಂಟಾದ ಸ್ವಾಭಾವಿಕ ಆತ್ಮೀಯತೆ ಎಂದು ಅವರು ವ್ಯಾಖ್ಯಾನಿಸಿದರು.