ಕನ್ನಡಪ್ರಭ ವಾರ್ತೆ ಮಂಡ್ಯ
ದೇವೇಗೌಡರು ಜಮೀರ್ ಪರವಾಗಿ ಅವರ ಕ್ಷೇತ್ರದಲ್ಲಿ ಹೋರಾಟ ಮಾಡಿದ್ದರು. ಅವರಿಲ್ಲದಿದ್ದರೆ ಜಮೀರ್ ಶಾಸಕ, ಮಂತ್ರಿಯಾಗುತ್ತಿರಲಿಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ದೇವೇಗೌಡರ ಬಗ್ಗೆ ಮಾತನಾಡಬೇಕೆಂಬ ಚಪಲಕ್ಕೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕಾರಣಿಗಳು ಧರ್ಮ ಮೀರಿ ರಾಜಕಾರಣಿಯಾಗಬೇಕು. ಸಮುದಾಯದವರ ಓಲೈಕೆಗಾಗಿ ಎಂದಿಗೂ ಮಾತನಾಡಬಾರದು.ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುವುದಾಗಿ ಹೇಳಿರುವುದು ನೋವಿನ ವಿಚಾರ. ಜಮೀರ್ ಅವರಿಗೆ ಭಗವಂತ ಒಳ್ಳೆಯ ಅವಕಾಶ ಕೊಟ್ಟಿದ್ದಾನೆ. ಅದನ್ನು ಜನರ ಸೇವೆ ಮಾಡುವುದಕ್ಕೆ ಉಪಯೋಗಿಸಿಕೊಳ್ಳಿ. ಕೇವಲ ಓಟಿಗಾಗಿ ಇನ್ನೊಂದು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕಿವಿಮಾತು ಹೇಳಿದರು.
ದೇವೇಗೌಡರ ಕುರಿತು ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮ್ಮಣ್ಣ ತೊಡೆತಟ್ಟಿದ್ದನ್ನೂ ನೋಡಿದ್ದೇವೆ, ಕಾಲು ಹಿಡಿದುಕೊಂಡಿದನ್ನೂ ಕಂಡಿದ್ದೇವೆ. ಇವರು ತೊಡೆ ತಟ್ಟಿದ್ದಾಗ ಆ ಸ್ಕೂಲ್‌ಗೆ ಹೆಡ್ ಮಾಸ್ಟರ್ ನಾನೇ ಆಗಿದ್ದೆ. ಅಧಿಕಾರ ಶಾಶ್ವತವಲ್ಲ. ಸುರೇಶ್ ಅವರ ಮಾತಿನ ಧಾಟಿಯೂ ಬದಲಾವಣೆ ಆಗಬೇಕು ಎಂದು ಸಲಹೆ ನೀಡಿದರು.ಎರಡೂ ಬಾರಿ ನಿಂತು ಸೋತಿರುವ ನಿಖಿಲ್‌ಗೆ ಮೂರನೇ ಸೋಲು ಆಗಬಾರದು. ಚನ್ನಪಟ್ಟಣದಲ್ಲಿ ಗೆದ್ದವರು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಹೋಗಿದ್ದಾರೆ. ಕ್ಷೇತ್ರದ ಮತದಾರರ ಮೇಲೆ ನಂಬಿಕೆ ಇದ್ದು, ಅವರು ನಿಖಿಲ್ ಕೈ ಹಿಡಿದೇ ಹಿಡಿಯುತ್ತಾರೆ. ಚನ್ನಪಟ್ಟಣದ ಮತದಾರರು ಸ್ವಾಭಿಮಾನಿ ಮತದಾರರು. ನಿಖಿಲ್ ಗೆಲ್ಲಿಸಿ ಕ್ಷೇತ್ರದ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಕುರುಬರಲ್ಲಿ ಯಾರನ್ನು ಬೆಳೆಸಿದ್ದಾರೆ.ಯಾರು ಯಾರನ್ನೂ ಬೆಳೆಸುವುದಿಲ್ಲ. ನಾವು ಬೆಳೆದರೆ ಮಾತ್ರ ನಾಯಕರಾಗಲು ಸಾಧ್ಯ. ಬಸ್ ಡ್ರೈವರ್ ಆಗಿದ್ದ ಜಮೀರ್ ಅವರನ್ನು ರಾಜಕೀಯವಾಗಿ ಬೆಳಸಿದರು. ಈಗ ನೋಡಿದರೆ ಈ ರೀತಿ ಮಾತನಾಡ್ತಾರೆ. ನಮ್ಮ ಪರೀಕ್ಷೆ ನಾವೇ ಬರೆಯಬೇಕು ಎಂದು ಹೇಳಿದರು.ಗೋಷ್ಠಿಯಲ್ಲಿ ಡಾ.ಸಿದ್ದರಾಮಯ್ಯ, ಅರವಿಂದಕುಮಾರ್, ಮಧುಸೂಧನ್, ನಾಗೇಶ್ ಇದ್ದರು.