ಬ್ಯಾಡಗಿ: ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸರ್ಕಾರದ ಜೊತೆ ಸಾರ್ವಜನಿಕರ ಸಹಭಾಗಿತ್ವ ಇಲ್ಲದಿದ್ದರೇ ನಿರೀಕ್ಷಿತ ಗುರಿ ತಲುಪಲು ಸಾಧ್ಯವಿಲ್ಲ ಎಂದು ಪ್ರಖರ ವಾಗ್ಮಿ ಶಶಿಧರ ಹೊಸಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆಯತ್ತ ಮುನ್ನಡೆಯುವಂತೆ ಕಿವಿಮಾತು ಹೇಳಿ, ಶಾಲೆಯ ಶೈಕ್ಷಣಿಕ ಸಾಧನೆ ಮತ್ತು ಸಮಾಜದ ಸಹಕಾರ ಶ್ಲಾಘಿಸಿದರಲ್ಲದೇ ವಿದ್ಯಾರ್ಥಿಗಳಲ್ಲಿ ಶಿಸ್ತು, ಗುರಿ ಸಾಧನೆ, ನಿರಂತರ ಪರಿಶ್ರಮ, ಮೌಲ್ಯಯುತ ಶಿಕ್ಷಣದ ಮಹತ್ವ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ಇತ್ತೀಚೆಗೆ ನಿಧನರಾದ ದಾನಿ ಮುತ್ತಕ್ಕ ನೀಲಕಂಠಪ್ಪ ಕುಮ್ಮೂರು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೀಲಕಂಠಪ್ಪ ಕುಮ್ಮೂರು ಪ್ರತಿಷ್ಠಾನ ಬೆಂಗಳೂರು ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಅಪೂರ್ವ ಕಾರ್ಯ ನಡೆಯುತ್ತಿದ್ದು, ಪ್ರಸಕ್ತ ವರ್ಷವೂ ರು.50 ಸಾವಿರ ನಗದು ಬಹುಮಾನ ನೀಡಲಾಯಿತು.ಇದೇ ಸಂದರ್ಭದಲ್ಲಿ ಚನ್ನಬಸಪ್ಪ ದಾಸರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ರು.5 ಸಾವಿರ ನಗದು ಬಹುಮಾನ ನೀಡಿದರು. ಶಶಿಧರ ಹೊಸಳ್ಳಿ ದತ್ತಿ ನಿಧಿಗೆ ರು.20 ಸಾವಿರ ದೇಣಿಗೆ ರೂಪದಲ್ಲಿ ನೀಡಿದರು. ವರ್ತಕ ಮಹಾಂತೇಶ ಸುಂಕದ (ಬ್ಯಾಡಗಿ) ಬಡ ಪ್ರತಿಭಾವಂತ ವಿದ್ಯಾರ್ಥಿಗೆ ರು.10 ಸಾವಿರ ನಗದು, ನಾಗಪ್ಪ ಬಣಕಾರ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ ರು.5 ಸಾವಿರ ನಗದು ಹಾಗೂ ಬಾಲಕರ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮಾರುತಿ ಪಾಸಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಬಳಿಕ ನಡೆದ ತಾಯಂದಿರ ಸಬೆಯಲ್ಲಿ ಮಕ್ಕಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಿಸ್ತು, ಆರೋಗ್ಯ, ಶಾಲೆಯ ಅಭಿವೃದ್ಧಿ ಹಾಗೂ ಪೋಷಕರ ಜವಾಬ್ದಾರಿಗಳ ಕುರಿತು ಚರ್ಚೆ ನಡೆಯಿತು.