ರಸ್ತೆ, ವಾಹನ ಸೌಲಭ್ಯವಿಲ್ಲದೆ ಆಸ್ಪತ್ರೆಗೆ ನ್ಯಾನೆಯೇ ಗತಿ

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ವಾಂತಿಭೇದಿಯಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯನ್ನು ರಸ್ತೆ ಹಾಗೂ ವಾಹನ ಸೌಲಭ್ಯವಿಲ್ಲದೆ ನ್ಯಾನೆ ಕಟ್ಟಿ ಆಸ್ಪತ್ರೆಗೆ ಸಾಗಿಸಿದ ಪ್ರಸಂಗ ಮಲೆ ಮಾದೇಶ್ವರ ಬೆಟ್ಟದ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ವಾಂತಿಭೇದಿಯಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯನ್ನು ರಸ್ತೆ ಹಾಗೂ ವಾಹನ ಸೌಲಭ್ಯವಿಲ್ಲದೆ ನ್ಯಾನೆ ಕಟ್ಟಿ ಆಸ್ಪತ್ರೆಗೆ ಸಾಗಿಸಿದ ಪ್ರಸಂಗ ಮಲೆ ಮಾದೇಶ್ವರ ಬೆಟ್ಟದ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತುಳಸಿಕೆರೆ ಗ್ರಾಮದ ವ್ಯಕ್ತಿ ಪುಟ್ಟ ವಾಂತಿಭೇದಿಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ, ಗ್ರಾಮದ ನಿವಾಸಿಗಳು ರಸ್ತೆ ಸರಿ ಇಲ್ಲದ ಕಾರಣ, ವಾಹನ ಸೌಲಭ್ಯವು ಸಿಗದೇ ನ್ಯಾನೆ ಕಟ್ಟಿ (ಡೋಲಿ) ಯಲ್ಲಿ ಮಲೆ ಮಾದೇಶ್ವರ ಬೆಟ್ಟದವರೆಗೆ ನಾಲ್ವರು ಹೊತ್ತುಕೊಂಡು ಸಾಗಿ ಅಲ್ಲಿಂದ ತಮಿಳುನಾಡಿನ ಕೊಳತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆಂಪೇಗೌಡ ಮಾತನಾಡಿ, ಯಾವುದೇ ಸರ್ಕಾರ ಬರಲಿ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಮಲೆ ಮಾದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರುವ ಗ್ರಾಮಗಳನ್ನು ಕಡೆಗಣಿಸಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಲ್ಲಿನ ಅರಣ್ಯದಂಚಿನಲ್ಲಿ ಬರುವ ಕುಗ್ರಾಮದ ಜನತೆ ಹಳ್ಳದ ನೀರು, ಕೊಳ್ಳಿ ಬೆಳಕಿನಲ್ಲಿ ವಾಸ ಮಾಡುವ ಪರಿಸ್ಥಿತಿ ಇರುವ ಬಗ್ಗೆ ತಿಳಿದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಎಚ್ಚರಿಕೆ:

ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು ಜೊತೆಗೆ ಸರ್ಕಾರವೇ ತಿರುಗಿ ನೋಡುವಂತ ಘಟನೆಯು ಇಂಡಿಗನತ್ತ ಗ್ರಾಮದಲ್ಲಿ ನಡೆದು, ಮೂಲಭೂತ ಸೌಲಭ್ಯಗಳಿಗಾಗಿ ಘರ್ಷಣೆ ಉಂಟಾಗಿ ಸಾಕಷ್ಟು ಜನರ ಮೇಲೆ ಪ್ರಕರಣ ದಾಖಲಾಗಿ, ಒಂದು ವರ್ಷ ಕಳೆದಿದೆ. ಚುನಾವಣೆ ಮುಗಿದ ಮೇಲೆ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಸರ್ಕಾರ ಹಾಗೂ ಜಿಲ್ಲಾಢಳಿತ ಇತ್ತ ಗಮನಹರಿಸಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಆರೋಗ್ಯ ಹದಗೆಟ್ಟರೆ ರಸ್ತೆ ಸರಿ ಇಲ್ಲದ ಕಾರಣ ವಾಹನ ಸೌಲಭ್ಯವು ಇಲ್ಲದೆ ಡೋಲಿಯಲ್ಲಿ ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಇಲ್ಲಿನ ಜನ ಕಾಡುಪ್ರಾಣಿಗಳಂತೆ ಬದುಕು ಭವಣೆಯೊಂದಿಗೆ ಜೀವನ ಸಾಗಿಸುವಂತಾಗಿದೆ. ಹೀಗಾಗಿ ಸಂಬಂಧಪಟ್ಟ ಜನಪ್ರತಿನಿಧಿ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಪಡಿಸಿ ಗ್ರಾಮಗಳಿಗೆ ನೀಡಿರುವ ಭರವಸೆಯಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ:

ತುಳಸಿಕೆರೆ ಗ್ರಾಮದಲ್ಲಿ ವ್ಯಕ್ತಿಯೋರ್ವ ವಾಂತಿಭೇದಿ ಅನಾರೋಗ್ಯಕ್ಕೀಡಾಗಿ ಡೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವುದರಿಂದ ರಸ್ತೆ ಸರಿ ಇಲ್ಲದ ಕಾರಣ ಗ್ರಾಮಸ್ಥರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆಯು ಸಹ ಜರಗಿತು. ಇದೇ ವೇಳೆಯಲ್ಲಿ ಗ್ರಾಮದ ಮುಖಂಡರು ಇದ್ದರು.

Share this article