)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುರುಗೇಶ್ ಪಾಳ್ಯದ ನಿವಾಸಿ ಚೈತ್ರಾ ಬಂಧಿತಳಾಗಿದ್ದು, ಆರೋಪಿಯಿಂದ 12.5 ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ 7.5 ಗ್ರಾಂ ಚಿನ್ನಾಭರಣ ಸೇರಿದಂತೆ 35 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಚಲ್ಲಘಟ್ಟದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಖಾಸಗಿ ಕಂಪನಿ ಉದ್ಯೋಗಿ ಫ್ಲ್ಯಾಟ್‌ನಲ್ಲಿ ಚಿನ್ನ-ಬೆಳ್ಳಿ ಕಳ್ಳತನ ಬಗ್ಗೆ ಪ್ರಕರಣ ದಾಖಲಾಯಿತು. ಈ ದೂರಿನಲ್ಲಿ ತಮ್ಮ ಮನೆ ಕೆಲಸದಾಳುವಿನ ಮೇಲೆ ಅವರು ಶಂಕೆ ವ್ಯಕ್ತಪಡಿಸಿದ್ದರು. ಅಂತೆಯೇ ತನಿಖೆಗಿಳಿದ ಪೊಲೀಸರು, ಅನುಮಾನದ ಮೇರೆಗೆ ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಚೈತ್ರಾ, ಕಳೆದ ಎರಡು ವರ್ಷಗಳಿಂದ ದೂರುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಗ ದುರಾಸೆಗೆ ಬಿದ್ದು ಮನೆ ಮಾಲಿಕರಿಗೆ ಗೊತ್ತಾಗದಂತೆ ಸ್ವಲ್ಪ ಸ್ವಲ್ಪವೇ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಆಕೆ ಕಳವು ಮಾಡುತ್ತಿದ್ದಳು. ಇತ್ತೀಚೆಗೆ ಮನೆಯಲ್ಲಿ ಆಭರಣ ನಾಪತ್ತೆ ಬಗ್ಗೆ ಆತಂಕಗೊಂಡು ಅವರು ವಿಚಾರಿಸಿದಾಗ ಮನೆಕೆಲಸದಾಳು ಕೈಚಳಕ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.