ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕರ ಹೆಸರು ಹೇಳಿ ಮತ್ತೊಂದು ಆಭರಣ ಅಂಗಡಿಯಲ್ಲಿ ಚಿನ್ನ ಪಡೆದು ವಂಚಿಸುತ್ತಿದ್ದ ಚಾಲಾಕಿ ಕೆಲಸಗಾರನೊಬ್ಬನನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕರ ಹೆಸರು ಹೇಳಿ ಮತ್ತೊಂದು ಆಭರಣ ಅಂಗಡಿಯಲ್ಲಿ ಚಿನ್ನ ಪಡೆದು ವಂಚಿಸುತ್ತಿದ್ದ ಚಾಲಾಕಿ ಕೆಲಸಗಾರನೊಬ್ಬನನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಜಿಲ್ಲೆ ಬಿವಾರೇ ಜಿಲ್ಲೆಯ ಧರ್ಮವೀರ್ ಸಿಂಗ್ ಅಲಿಯಾಸ್ ಪಿಂಟು ಬಂಧಿತನಾಗಿದ್ದು, ಆರೋಪಿಯಿಂದ 33.5 ಲಕ್ಷ ರು. ಮೌಲ್ಯದ 239 ಗ್ರಾಂ ಬಂಗಾರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಓಪಿಎಚ್ ಜುಮ್ಮಾ ಮಸೀದಿ ಸಮೀಪದ ಚಿನ್ನಾಭರಣ ಮಳಿಗೆ ಮಾಲೀಕ ಸೋಲಿಂಕಿ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಭಾರತಿನಗರ ಸಮೀಪದ ಆಭರಣದ ಅಂಗಡಿ ಮಾಲೀಕ ಕರಣ್ ಬಳಿ ಧರ್ಮವೀರ್ ಕೆಲಸ ಮಾಡುತ್ತಿದ್ದ. ಆಗ ಚಿನ್ನಾಭರಣ ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಿದ ಆತ, ಕರಣ್ ಅವರ ಸ್ನೇಹಿತ ಸೋಲಿಂಕಿ ಅವರಿಗೆ ಪರಿಚಯಸ್ಥನಾಗಿದ್ದ. ಈ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡ ಆತ, ತನ್ನ ಮಾಲೀಕರು ನಿಮ್ಮಿಂದ 239 ಗ್ರಾಂ ತೂಕದ ಏಳು ಚಿನ್ನದ ಸರ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ ಎಂದು ಸುಳ್ಳು ಹೇಳಿದ್ದ. ಈ ಮಾತು ನಂಬಿ ಕೆಲಸಗಾರನಿಗೆ ಅವರು ಚಿನ್ನವನ್ನು ಕೊಟ್ಟಿದ್ದಾರೆ. ಆನಂತರ ಕರಣ್‌ಗೆ ಕರೆ ಮಾಡಿದಾಗ ತಾನು ಆಭರಣ ತರುವಂತೆ ಹೇಳಿಲ್ಲ ಎಂದಿದ್ದಾರೆ. ಕೂಡಲೇ ಭಾರತಿನಗರ ಠಾಣೆಗೆ ವಂಚನೆ ಬಗ್ಗೆ ಚಿನ್ನಾಭರಣ ವ್ಯಾಪಾರಿ ಸೋಲಿಂಕಿ ದೂರು ಕೊಟ್ಟಿದ್ದರು. ಈ ಆಭರಣ ಸಮೇತ ತನ್ನೂರಿಗೆ ಪರಾರಿಯಾಗಲು ಯತ್ನಿಸಿದ್ದಾಗ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಧರ್ಮವೀರ್ ಸಿಕ್ಕಿಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.