ಕನ್ನಡಪ್ರಭ ವಾರ್ತೆ ಬೀದರ್
ಟೆಸ್ಟ್ ಟ್ಯೂಬ್ ಬೇಬಿ (ಐವಿಎಫ್) ಪಡೆಯುವ ಹಂಬಲದಲ್ಲಿ ದಂಪತಿಯ ಆಸೆಗೆ ತಣ್ಣೀರೆರಚಿದ್ದಲ್ಲದೆ ವೈದ್ಯರ ಎಡವಟ್ಟಿನಿಂದ ದೃಷ್ಟಿ ದೋಷ ಎದುರಾಗಿ ನ್ಯಾಯಕ್ಕಾಗಿ ಅಲೆಯುವಂತಾಗಿದೆ ಎಂದು ಇಲ್ಲಿನ ಖಾಸಗಿ ಆಸ್ಪತ್ರೆಯ ವಿರುದ್ಧ ಮೂವರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.ಬೀದರ್‌ನ ಗುಂಪಾ ಪ್ರದೇಶದಲ್ಲಿರುವ ವಿಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿರುದ್ಧ ಆರೋಪಿಸಿ ಪತ್ರಿಕಾ ಭನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಗ್ರಾಮದ ವಂದನಾ ನಾಗರಾಜ ಎಂಬ ಮಹಿಳೆಯು, ವೈದ್ಯರ ನಿರ್ಲಕ್ಷ್ಯದಿಂದ ದೃಷ್ಟಿ ದೋಷ ಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಟೆಸ್ಟ್ ಟ್ಯೂಬ್ ಬೇಬಿಗಾಗಿ ಒಂದು ವರ್ಷದಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ದೃಷ್ಟಿ ದೋಷ ಎದುರಾಗಿ ಎಲ್ಲವೂ ಎರಡೆರಡು ಕಾಣುವಂತಾಗಿದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ತುಂಬಾ ನಿಶಕ್ತಳಾಗಿರುವೆ. ಐವಿಎಫ್ ವಿಫಲವಾಗಿದ್ದು ನಮ್ಮ ಹಣ ಹಿಂದುರಿಗಿಸಿ ಎಂದು ಕೋರಿದಾಗ ಆಸ್ಪತ್ರೆಯವರು ಬೆದರಿಕೆಯೊಡ್ಡುತ್ತಿದ್ದಾರೆ. ಹೀಗಾಗಿ ತಪ್ಪಿತಸ್ಥ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಗೂ ಆಸ್ಪತ್ರೆ ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಟ್ಟಿದ್ದಾಗಿ ತಿಳಿಸಿದರು.ಜಹೀರಾಬಾದ್‌ನ ಕವಿತಾ ಕಿಶನ್ ರಾಠೋಡ ಹಾಗೂ ಸೀಮಾ ಬೇಗಮ್ ಸಹ ತಮಗೂ ಇದೇ ರೀತಿಯಲ್ಲಿ ಅನ್ಯಾಯವಾಗಿದೆ ಎಂದು ದೂರಿದರು. ವಂದನಾ ಪತಿ ನಾಗರಾಜ, ಸೀಮಾ ಬೇಗಮ್ ಪತಿ ಸಯ್ಯದ್ ಅಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದು ಬ್ಲ್ಯಾಕ್‌ಮೇಲ್ ತಂತ್ರ: ಡಾ.ವಿಜಯಾಈ ಕುರಿತಂತೆ ವಿಜಯಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ವಿಜಯಾ ಅವರು ಕನ್ನಡಪ್ರಭಕ್ಕೆ ಮಾತನಾಡಿ, ವಂದನಾ ಅವರು ಟೆಸ್ಟ್ ಟ್ಯೂಬ್ ಬೇಬಿ ಕೋರಿ ಆಸ್ಪತ್ರೆಗೆ ಆಗಮಿಸಿದಾಗ, ಅವರ ತಪಾಸಣೆ ನಡೆಸಿ ಗರ್ಭಕೋಶದಲ್ಲಿನ ಸಮಸ್ಯೆಯಿಂದ ಐವಿಎಫ್ ಯಶಸ್ವಿಯಾಗುವುದು ವಿರಳ ಎಂದು ಅವರಿಗೆ ತಿಳಿಸಿ ಒಪ್ಪಿಗೆ ಪತ್ರ ಪಡೆದೆ ಚಿಕಿತ್ಸೆ ಆರಂಭಿಸಿದ್ದೇವೆ ಎಂದಿದ್ದಾರೆ.
ಇನ್ನು ಅವರು ಹೇಳುವಂತೆ ಲಕ್ಷಾಂತರ ರುಪಾಯಿ ಬಿಲ್ ಮಾಡಿಲ್ಲ. ಚಿಕಿತ್ಸೆಗೆ ಅಗತ್ಯವಿರುವ 25 ಸಾವಿರ ರುಪಾಯಿ ಬಿಲ್ ಮಾತ್ರ ಪಡೆಯಲಾಗಿದೆ. ಮಹಿಳೆಗೆ ದೃಷ್ಟಿದೋಷ ಇಲ್ಲದಿರುವುದು ತಜ್ಞ ವೈದ್ಯರಿಂದ ಸ್ಪಷ್ಟವಾಗಿದೆ. ಜನರ ಸಹಾನುಭೂತಿ ಪಡೆಯಲು ಕಪಟವಾಡುತ್ತಿದ್ದಾರೆ. ಒಟ್ಟಾರೆ ಆಸ್ಪತ್ರೆ ಕುರಿತು ಅವರು ಆರೋಪಿಸಿರುವುದೆಲ್ಲ ಸುಳ್ಳು. ಅವರಿಂದ ನಮ್ಮ ಮೇಲೆ ಬ್ಲ್ಯಾಕ್ ಮೇಲ್ ತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.