)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಲ ದಿನಗಳ ಹಿಂದೆ ಗೀತಾ (45) ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮೃತರ ಪರಿಚಿತ ಮುತ್ತು ಅಭಿಮನ್ಯು ಕೊಲೆ ಯತ್ನಿಸಿದ್ದ. ಘಟನೆಯಲ್ಲಿ ಶೇ.30ರಷ್ಟು ಸುಟ್ಟು ಗಾಯವಾಗಿದ್ದ ಗೀತಾ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಆರೋಪಿ ಮುತ್ತುನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಹಲವು ವರ್ಷಗಳಿಂದ ಸಾಣೆಗುರುವನಹಳ್ಳಿಯಲ್ಲಿ ತಮ್ಮ ಮಗಳ ಜತೆ ತಮಿಳುನಾಡು ಮೂಲದ ಗೀತಾ ನೆಲೆಸಿದ್ದರು. ಮನೆ ಸಮೀಪ ಕಿರಾಣಿ ಅಂಗಡಿ ನಡೆಸಿಕೊಂಡ ಜೀವನ ಸಾಗಿಸುತ್ತಿದ್ದರು. ದೊಮ್ಮಲೂರಿನ ಮುತ್ತು, ಬಸವೇಶ್ವರದ ಕಡೆ ಹೋಟೆಲ್ ಆರಂಭಿಸಲು ಸ್ಥಳಕ್ಕೆ ಹುಡುಕಾಡುವಾಗ ಗೀತಾ ಪರಿಚಯವಾಗಿತ್ತು. ಬಳಿಕ ಅವರ ಕಿರಾಣಿ ಅಂಗಡಿ ಸನಿಹದಲ್ಲೇ ಆತ ಟೀ ಅಂಗಡಿ ಇಟ್ಟಿದ್ದ. ಕ್ರಮೇಣ ಮುತ್ತು ಜತೆ ಆಕೆಯ ಮಗಳು ಪ್ರೀತಿಗೆ ಬಿದ್ದಿದ್ದಳು. ಈ ವಿಷಯ ತಿಳಿದಿದ್ದ ಗೀತಾ ಅವರು, ಮಗಳ ಪ್ರೇಮಕ್ಕೆ ಸಮ್ಮತಿಸಿ ಮದುವೆಗೆ ಒಪ್ಪಿದ್ದರು.ಆದರೆ ಇತ್ತೀಚೆಗೆ ಮುತ್ತು ಮದ್ಯ ವ್ಯಸನದ ಸಂಗತಿ ತಿಳಿದು ಅವರ ಅಭಿಪ್ರಾಯ ಬದಲಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಕೋಪಗೊಂಡಿದ್ದ ಮುತ್ತು, ಗೀತಾ ಜತೆ ಆಗಾಗ್ಗೆ ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಉಂಟಾದ ಜಗಳವು ವಿಕೋಪಕ್ಕೆ ತಿರುಗಿದೆ. ಈ ಗಲಾಟೆ ಬಳಿಕ ನಿದ್ರೆಗೆ ಜಾರಿದ್ದ ಗೀತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.