ಕನ್ನಡಪ್ರಭ ವಾರ್ತೆ ಮಡಿಕೇರಿ
ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದ ಚೆಲ್ಲದೋರೆ ಎಂಬುವವರ ಪತ್ನಿ ಶಾಂತಿ (27) ಮೃತರು. ಅವರು ಮಂಗಳವಾರ ತನ್ನ ಗಂಡ ಹಾಗೂ 2 ತಿಂಗಳು 10 ದಿನದ ಮಗುವಿನೊಂದಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಉದರದರ್ಶಕ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿದ್ದರು. .
ಆಪರೇಷನ್ ಆರಂಭವಾಗುವ ವೇಳೆ ಅವರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ವೈದ್ಯಾಧಿಕಾರಿಗಳು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲು ಮುಂದಾಗಿದ್ದಾರೆ. ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ಕುಶಾಲನಗರದ ಆಸ್ಪತ್ರೆಯಲ್ಲಿ ಶಿಬಿರಕ್ಕೆ ತೆರಳಿದ್ದ ಬಾಣಂತಿ ಯುವತಿಗೆ ಶಸ್ತ್ರ ಚಿಕಿತ್ಸೆಗೆ ಮುನ್ನ ನೀಡಲಾದ ಇಂಜಕ್ಷನ್ ರಿಯಕ್ಷನ್ ಆಗಿರುವ ಶಂಕೆ ವ್ಯಕ್ತ ಪಡಿಸಿರುವ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ.ಮರಣೋತ್ತರ ಪರೀಕ್ಷೆ ವೇಳೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಶವಾಗಾರದ ಮುಂದೆ ಮುಗಿಲುಮುಟ್ಟಿತ್ತು.ಮಧ್ಯರಾತ್ರಿಯೇ ಪ್ರತಿಭಟಿಸಿದ ಸಂಬಂಧಿಕರು, ಬಾಣಂತಿಯ ಸಾವಿಗೆ ನ್ಯಾಯ ದೊರಕುವ ತನಕ ಸ್ಥಳದಿಂದ ತೆರಳಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸತೀಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಚಿಕಿತ್ಸೆ ಸಂದರ್ಭ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದು ಇನ್ನೂ ದೃಢವಾಗಿಲ್ಲ.ಮಧ್ಯಾಹ್ನ 12 ಗಂಟೆವರೆಗೂ ಶಾಂತಿ ಆರೋಗ್ಯವಾಗಿದ್ದಳು ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋದ ಬಳಿಕ ಈ ಘಟನೆ ನಡೆದಿದೆ. ಆಪರೇಷನ್ ಮಾಡಿಲ್ಲ ಎಂದು ನರ್ಸ್ ಹೇಳಿರುವ ಬಗ್ಗೆ ಆಶಾ ಕಾರ್ಯಕರ್ತೆ ಮಾಹಿತಿ ನೀಡಿದರು.