ಬೋರ್ ವೆಲ್ ನ ಬಾಡಿಗ ಹಣ ಪಾವತಿ ವಿಳಂಬ ಖಂಡಿಸಿ ರೈತ ಮಹಿಳೆ ಸಾಕಮ್ಮ ಧರಣಿ

KannadaprabhaNewsNetwork |  
Published : Sep 19, 2026, 01:45 AM IST
18ಕೆಎಂಎನ್ ಡಿ13 | Kannada Prabha

ಸಾರಾಂಶ

ಬಾಡಿಗೆ ಹಣ ಪಾವತಿಸುವಂತೆ ರೈತ ಮಹಿಳೆ ಕಳೆದ 7 ವರ್ಷಗಳಿಂದ ಕಚೇರಿಗೆ ಅಲೆದಾಡುತ್ತಾ ಹತ್ತಾರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಇದುವರೆಗೂ ಬಾಡಿಗೆ ಹಣ ಪಾವತಿಸಿಲ್ಲ. ಇದರಿಂದ ರೊಚ್ಚಿಗೆದ್ದ ರೈತ ಮಹಿಳೆ ಸಾಕಮ್ಮ ರೈತ ಮುಖಂಡ ಪುಟ್ಟೇಗೌಡರನ್ನು ಸಂಪಕಿಸಿ ತಾಪಂ ಕಚೇರಿ ಎದುರು ಧರಣಿ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರದ ನಿರ್ದೇಶನದ ಮೇರೆಗೆ ಸಾರ್ವಜನಿಕರಿಗೆ ಅಗತ್ಯ ಕುಡಿಯುವ ನೀರು ಪೂರೈಕೆಗೆ ಬಾಡಿಗೆಗೆ ಪಡೆದಿದ್ದ ಖಾಸಗಿ ಬೋರ್ ವೆಲ್ ನ ಬಾಡಿಗೆ ಹಣ ಪಾವತಿಸುವಂತೆ ರೈತ ಮಹಿಳೆ ಸಾಕಮ್ಮ ಪಟ್ಟಣದ ತಾಪಂ ಕಚೇರಿ ಬಾಗಿಲಲ್ಲಿ ಧರಣಿ ನಡೆಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ತಾಪಂ ಕಚೇರಿಗೆ ಆಗಮಿಸಿದ ರೈತ ಮಹಿಳೆ ಬಾಡಿಗೆ ಹಣ ಪಾವತಿಗೆ ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2018- 19ರಲ್ಲಿ ತಾಲೂಕಿನಲ್ಲಿ ತೀವ್ರ ಬರಗಾಲವಿದ್ದಾಗ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಅಗತ್ಯವಿರುವ ಕಡೆ ಸಾರ್ವಜನಿಕರ ಕುಡಿಯುವ ನೀರು ಪೂರೈಕೆಗಾಗಿ ರೈತರ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಆದೇಶಿಸಿತ್ತು.

ಆದೇಶದಂತೆ ತಾಲೂಕಿನ ಚೌಡೇನಹಳ್ಳಿ ಗ್ರಾಪಂ ವ್ಯಾಪ್ತಿಯ ಜಕ್ಕನಹಳ್ಳಿ ರೈತ ಮಹಿಳೆ ಸಾಕಮ್ಮ ಅವರ ಸರ್ವೇ 22ರ ಕೊಳವೆ ಬಾವಿಯನ್ನು ನೀರು ಪೂರೈಕೆಗೆ ರಚಿಸಿದ್ದ ಟಾಸ್ಕ್ ಫೋರ್ಸ್ ತಂಡ ಮಾಸಿಕ ₹18 ಸಾವಿರ ಬಾಡಿಗೆ ಕರಾರಿನ ಮೇರೆಗೆ 09 ತಿಂಗಳ ಕಾಲ ತನ್ನ ಸುಪರ್ಧಿಗೆ ತೆಗೆದುಕೊಂಡಿತ್ತು. ಕರಾರಿನಂತೆ 09 ತಿಂಗಳ ಬಾಡಿಗೆ ಹಣ ₹1,62,000 ಹಣವನ್ನು ಅಧಿಕಾರಿಗಳು ಇದುವರೆಗೂ ಪಾವತಿಸಿಲ್ಲ ಎಂದು ದೂರಿದರು.

ಬಾಡಿಗೆ ಹಣ ಪಾವತಿಸುವಂತೆ ರೈತ ಮಹಿಳೆ ಕಳೆದ 7 ವರ್ಷಗಳಿಂದ ಕಚೇರಿಗೆ ಅಲೆದಾಡುತ್ತಾ ಹತ್ತಾರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಇದುವರೆಗೂ ಬಾಡಿಗೆ ಹಣ ಪಾವತಿಸಿಲ್ಲ. ಇದರಿಂದ ರೊಚ್ಚಿಗೆದ್ದ ರೈತ ಮಹಿಳೆ ಸಾಕಮ್ಮ ರೈತ ಮುಖಂಡ ಪುಟ್ಟೇಗೌಡರನ್ನು ಸಂಪಕಿಸಿ ತಾಪಂ ಕಚೇರಿ ಎದುರು ಧರಣಿ ಆರಂಭಿಸಿದರು.

ಈ ವೇಳೆ ಮಾತನಾಡಿದ ಪುಟ್ಟೇಗೌಡ, ತಾನು ಬೆಳೆ ಬೆಳೆಯುವುದನ್ನು ಕೈ ಬಿಟ್ಟು ಸಾರ್ವಜನಿಕರ ಹಿತಕ್ಕಾಗಿ ತನ್ನ ಬದುಕನ್ನೆ ತ್ಯಾಗ ಮಾಡಿದ ರೈತ ಮಹಿಳೆ ಸಾಕಮ್ಮ ಕಳೆದ ಆರೇಳು ವರ್ಷಗಳಿಂದ ತಾನು ಬಾಡಿಗೆಗೆ ನೀಡಿದ್ದ ಪಂಪ್ ಸೆಟ್ ಬಾಡಿಗೆಗಾಗಿ ಕಚೇರಿ ಬಾಗಿಲು ಬಡಿದು ಸುಸ್ತಾಗಿದ್ದಾಳೆ ಎಂದು ಕಿಡಿಕಾರಿದರು. ಲಂಚ ನೀಡದ ಕಾರಣಕ್ಕಾಗಿಯೇ ಚೌಡೇನಹಳ್ಳಿ ಗ್ರಾಪಂ ಪಿಡಿಓ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ರೈತ ಮಹಿಳೆಯನ್ನು ಅನಗತ್ಯವಾಗಿ ಸುತ್ತಾಡಿಸುತ್ತಿದ್ದಾರೆ. ಹಣ ಪಾವತಿಯಾಗದ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕರ್ತವ್ಯ ಲೋಪ ಮಾಡಿದ ನೌಕರರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಪಂ ಇಒ ಕೆ.ಸುಷ್ಮಾ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಬಾಡಿಗೆ ಹಣ ಪಾವತಿ ಸಂಬಂಧ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಚೌಡೇನಹಳ್ಳಿ ಕೃಷ್ಣೇಗೌಡ, ರತ್ನೇಶ್, ಹೆಗ್ಗಡಹಳ್ಳಿ ಚೇತನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಾಪ ಅಧ್ಯಕ್ಷ ಚುನಾವಣೆಗೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ
ದೇಶದ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ