ಜೋಡಿ ರಾಟ್‌ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ

KannadaprabhaNewsNetwork |  
Published : Dec 06, 2025, 01:30 AM ISTUpdated : Dec 06, 2025, 09:29 AM IST
Davanagere

ಸಾರಾಂಶ

ಜೋಡಿ ರಾಟ್ ವೀಲರ್ ನಾಯಿಗಳ ದಾಳಿಗೆ ಸಿಲುಕಿದ ದಾರಿ ಹೋಕ ಮಹಿಳೆಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದುರಂತ ಸಾವು ಕಂಡ ಘಟನೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ವರದಿಯಾಗಿದೆ.

ದಾವಣಗೆರೆ: ಜೋಡಿ ರಾಟ್ ವೀಲರ್ ನಾಯಿಗಳ ದಾಳಿಗೆ ಸಿಲುಕಿದ ದಾರಿ ಹೋಕ ಮಹಿಳೆಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದುರಂತ ಸಾವು ಕಂಡ ಘಟನೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ವರದಿಯಾಗಿದೆ. 

ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ವಾಸಿ ಅನಿತಾ (38 ವರ್ಷ) ಮೃತ ಮಹಿಳೆ. ಗುರುವಾರ ಮಕ್ಳಳೊಂದಿಗೆ ಜಗಳ ಮಾಡಿಕೊಂಡ ಅನಿತಾ ತನ್ನ ತವರೂರಿಗೆ ನಡೆದುಕೊಂಡು ಹೊರಟಿದ್ದ ವೇಳೆ ಹೊನ್ನೂರು ಗೊಲ್ಲರಹಟ್ಟಿ ಹರ ವಲಯದಲ್ಲಿ ಯಾರೋ ಅಪರಿಚಿತರು ಬಿಟ್ಟು ಹೋಗಿದ್ದ ಎರಡು ರಾಟ್‌ ವೀಲರ್ ನಾಯಿಗಳು ಏಕಾಏಕಿ ಬೊಗಳಿಕೊಂಡು ಬಂದು ದಾಳಿ ಮಾಡಿವೆ ಎಂದು ಹೇಳಲಾಗಿದೆ. ರಾಟ್ ವೀಲರ್ ನಾಯಿಗಳನ್ನು ದಾವಣಗೆರೆಯ ಯಾರೋ ತಮ್ಮ ಮನೆಯಲ್ಲಿ ಸಾಕಿದ್ದು, ಅವುಗಳನ್ನು ತಂದು ಹೊನ್ನೂರು ಗೊಲ್ಲರಹಟ್ಟಿ ಬಳಿ ಬಿಟ್ಟು ಹೋಗಿದ್ದಾರೆ. ಅದೇ ವೇಳೆ ಕತ್ತಲ ದಾರಿಯಲ್ಲಿ ತನ್ನ ತವರಿಗೆಂದು ನಡೆದುಕೊಂಡು ಹೊರಟಿದ್ದ ಅನಿತಾ ಮೇಲೆ ಜೋರಾಗಿ ಓಡಿಕೊಂಡು ಬಂದ ರಾಟ್ ವೀಲರ್ ಜೋಡಿ ನಾಯಿಗಳು ದಾಳಿ ಮಾಡಿದ್ದರಿಂದ ಆಕೆ ಜೋರಾಗಿ ಭಯದಿಂದ ಕೂಗಿಕೊಂಡರೂ ಉಪಯೋಗವಾಗಿಲ್ಲ.

ಅನಿತಾ ದೇಹದ ಮೇಲೆ ರಾಟ್ ವೀಲರ್ ನಾಯಿಗಳು ಸುಮಾರು 50ಕ್ಕೂ ಹೆಚ್ಚು ಕಡೆ ಗಂಭೀರವಾಗಿ ಕಚ್ಚಿ ಗಾಯಗೊಳಿಸಿದ್ದರಿಂದ ತೀವ್ರ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ರಾತ್ರಿ 11.30ರ ವೇಳೆ ಆದ ಘಟನೆ ಬೆಳಿಗಿನ ಜಾವ 3.30ರ ವೇಳೆ ಹೊಲಕ್ಕೆ ನೀರು ಹಾಯಿಸಲು ಹೊರಟಿದ್ದ ರೈತನ ಗಮನಕ್ಕೆ ಬಂದಿದೆ. ವಿಷಯ ತಿಳಿದ ಗ್ರಾಮಸ್ಥರು ಕೈಯಲ್ಲಿ ದೊಣ್ಣೆ, ಬಡಿಗೆ, ಕೋಲುಗಳನ್ನು ಹಿಡಿದುಕೊಂಡು ಹೋಗಿ, ರಾಟ್ ವೀಲರ್ ನಾಯಿಗಳನ್ನು ಹಿಡಿದು, ಹಗ್ಗದಿಂದ ಕಟ್ಟಿ ಗ್ರಾಮಕ್ಕೆ ತಂದಿದ್ದಾರೆ.

ಹಗ್ಗದಿಂದ ನಾಯಿಗಳನ್ನು ಕೋಲಿಗೆ ಕಟ್ಟಿ ಎಳೆದು ತಂದ ಗ್ರಾಮಸ್ಥರು

ಹಗ್ಗದಿಂದ ನಾಯಿಗಳನ್ನು ಕೋಲಿಗೆ ಕಟ್ಟಿ ಎಳೆದು ತಂದ ಗ್ರಾಮಸ್ಥರು ಅವುಗಳನ್ನು ಒಂದು ಕಡೆ ಕಟ್ಟಿ ಹಾಕಿದ್ದರು. ನಂತರ ಶ್ವಾನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅನಿತಾಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹಿರಿಯೂರು-ಶಿರಾ ಮಧ್ಯೆ ಸಾವನ್ನಪ್ಪಿದ್ದಾರೆ. ಶಿರಾ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಮಕ್ಕಳೊಂದಿಗೆ ಜಗಳ ಮಾಡಿಕೊಂಡು ತವರಿಗೆ ಹೊರಟಿದ್ದ ಅನಿತಾ ಇಹಲೋಕ ಯಾತ್ರೆಯನ್ನೇ ಮುಗಿಸಿದ್ದಕ್ಕೆ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ದಾವಣಗೆರೆಯ ಯಾರೋ ಪ್ರತಿಷ್ಠಿತರು ತಮ್ಮ ಮನೆಯಲ್ಲಿ ಸಾಕಿದ್ದ ರಾಟ್ ವೀಲರ್ ಜೋಡಿ ನಾಯಿಗಳ ಇಂತಹ ಹುಚ್ಚಾಟವನ್ನು ಕಂಡೇ ಅದರ ಉಸಾಬರಿಯೇ ಬೇಡವೆಂದು ಹೊನ್ನೂರು ಗೊಲ್ಲರಹಟ್ಟಿ ಬಳಿ ಬಿಟ್ಟು ಹೋಗಿರುವ ಸಾಧ್ಯತೆ ಹೆಚ್ಚಳವಾಗಿದೆ. ಅಮಾಯಕ ಅನಿತಾಳ ಸಾವಿಗೆ ಕಾರಣವಾದ ನಾಯಿಗಳನ್ನು ಬಿಟ್ಟು ಹೋದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ.

ಗಾಯಾಳು ಅನಿತಾ ಪತ್ತೆಯಾಗಿದ್ದು ನಸುಕಿನಲ್ಲಿ! 

ಕಳೆದ ರಾತ್ರಿ 11.30ರಿಂದ 12 ಗಂಟೆ ವೇಳೆ ಹೊನ್ನೂರು ಗೊಲ್ಲರಹಟ್ಟಿಯ ಮನೆಯೊಂದರ ಬಳಿ ಎರಡು ನಾಯಿಗಳು ಜೋರಾಗಿ ನಿರಂತರವಾಗಿ ಬೊಗಳಿವೆ. ಎಲ್ಲೋ ಏನೋ ಅಪಾಯವಾಗುತ್ತಿದೆಯೆಂಬ ಸುಳಿವನ್ನು ಸಾಕು ನಾಯಿಗಳು ನೀಡಿದ್ದವೋ ಏನೋ. ಆದರೆ, ಗ್ರಾಮಸ್ಥರು ಯಾರೋ ಅಪರಿಚಿತರು, ಕಳ್ಳರೋ ಬಂದಿರಬೇಕೆಂದು ಸುಮ್ಮನಾಗಿದ್ದರು.  

ಆದರೆ, ದೂರದಲ್ಲಿ ಎರಡು ರಾಟ್ ವೀಲರ್ ನಾಯಿಗಳ ದಾಳಿಗೊಳಗಾಗಿದ್ದ ಅನಿತಾ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಸ್ಥಳದ ಬಳಿ ರಾತ್ರಿ 3.30ರ ಗಂಟೆ ವೇಳೆ ಹೊಲಕ್ಕೆ ನೀರು ಹಾಯಿಸಲು ಹೊರಟಿದ್ದ ಯುವಕನೊಬ್ಬನ ಕಣ್ಣಿಗೆ ಮೊಬೈಲ್‌ ಬೆಳಕು ಕಂಡು ಬಂದಿದೆ. ಅದರ ಜಾಡು ಹಿಡಿದು ಹೊರಟಾಗ ಅನಿತಾ ಕಣ್ಣಿಗೆ ಬಿದ್ದಿದ್ದಾರೆ. 

ತಕ್ಷಣವೇ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದರೂ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಆ ನಂತರ 112ಗೆ ಕರೆ ಮಾಡಿ, ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ಪೊಲೀಸರು ಕಲ್ಲಿನಿಂದ ಹೊಡೆದು, ನಾಯಿಗಳನ್ನು ಹೆದರಿಸಿ, ಓಡಿಸಿದ ನಂತರವಷ್ಟೇ ಅನಿತಾಗೆ ಬೆಂಗಳೂರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!