- ಉಪ್ರದಲ್ಲಿ ಬಿಜೆಪಿ ಶಾಸಕರೊಬ್ಬರು ಅತ್ಯಾಚಾರ ಎಸಗಿ ಜೈಲು ಸೇರಿದ್ದಾರೆ- ಈ ಬಗ್ಗೆ ಏಕೆ ಮಾತಾಡ್ತಾ ಇಲ್ಲ: ಸಿದ್ದರಾಮಯ್ಯ ಪ್ರಶ್ನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ, ಉತ್ತರ ಪ್ರದೇಶದಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿರುವ ತಮ್ಮ ಪಕ್ಷದ ಶಾಸಕನ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಪ್ರಕರಣ ಕುರಿತು ರಾಜ್ಯ ಸರ್ಕಾರ ಎಲ್ಲ ರೀತಿಯ ಕಾನೂನು ಕ್ರಮ ತೆಗೆದುಕೊಂಡಿದೆ. ಗೃಹ ಸಚಿವರು ಸಂತ್ರಸ್ತೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ಸಹ ನೀಡಿ ಬಂದಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬಂಧನ ಸಹ ಮಾಡಲಾಗಿದೆ. ಇದೇ ವಿಷಯ ಇಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಬೆಳಗಾವಿ ಪ್ರಕರಣವನ್ನು ನಾವೇನು ಸಮರ್ಥನೆ ಮಾಡಿಕೊಂಡಿಲ್ಲ. ಯಾರೇ ತಪ್ಪು ಮಾಡಿದರೂ ಅವರಿಗೆ ತೀವ್ರ ಶಿಕ್ಷೆಯಾಗಲೇಬೇಕು ಎಂದು ಹೇಳಿದ್ದೇವೆ. ಆದಾಗ್ಯೂ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ರಾಜಕೀಯವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಬಿಜೆಪಿ ಎಂಎಲ್‌ಎ ಒಂಬತ್ತು ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಲ್ಲವೇ? ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಸಂಸತ್ ಮೇಲೆ ದಾಳಿ ನಡೆದಿರುವುದು ಕೇಂದ್ರ ಸರ್ಕಾರದ ಭದ್ರತಾ ಲೋಪ ಆಗಿದೆ. ಇದನ್ನು ಹೇಳಿದರೆ, ಅದು ಹೇಗೆ ರಾಜಕೀಯ ಆಗುತ್ತದೆ? ಎಂಬುದನ್ನು ಕೇಂದ್ರ ಸಚಿವರೇ ಉತ್ತರಿಸಬೇಕು ಎಂದು ಹೇಳಿದರು.ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ನಾಮಕರಣ ಮಾಡಬೇಕು ಎಂಬುದು ಶಾಸಕ ಅಬ್ಬಯ್ಯ ಪ್ರಸಾದ್ ಅಭಿಪ್ರಾಯ. ಅದನ್ನು ಸರ್ಕಾರ ತೀರ್ಮಾನ ಮಾಡಿಲ್ಲ. ಆದರೆ, ಅವರು ಅಭಿಪ್ರಾಯ ಹೇಳಿದ್ದಾರಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿನ ಜನ ಲೋಕಸಭಾ ಚುನಾವಣೆಯಲ್ಲಿ ಯತೀಂದ್ರ ನಿಲ್ಲಲೇಬೇಕು ಎಂದರೆ, ಅವರ ಸ್ಪರ್ಧೆ ಮಾಡುತ್ತಾರೆ. ಆದರೆ, ಯತೀಂದ್ರ ನಿಂತುಕೊಳ್ಳುವುದಿಲ್ಲ. ಇದರ ಬಗ್ಗೆ ಲೆಹರ್‌ಸಿಂಗ್ ಆರೋಪ ಮಾಡುವುದರಲ್ಲೇನಿದೆ ಎಂದರು.ಲಿಂಗಾಯತ ಶಾಸಕರ ಪತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಇನ್ನೂ ಬಂದಿಲ್ಲ. ವರದಿಯಲ್ಲಿ ಏನಿದೆ ಅಂತ ಯಾರಿಗಾದರೂ ಗೊತ್ತಾ..? ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ ಅವರು ಊಹೆ ಮಾಡಿ ಹೇಳತ್ತಿದ್ದಾರೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.