ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ನಗರದಲ್ಲಿ ಕಳೆದ ಜ.೭ರಂದು ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿದರು.ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ಮಹಿಳೆಯರಿಗೆ ಪವಿತ್ರ ಸ್ಥಾನ ನೀಡುವ ಈ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆ ಎಂಬುದನ್ನೂ ನೋಡದೆ ಸಾರ್ವಜನಿಕವಾಗಿ ದೌರ್ಜನ್ಯ ಎಸಗಲು ಪೊಲೀಸರಿಗೆ ಕುಮ್ಮಕ್ಕು ನೀಡಿರುವುದು ನಾಚಿಕೆಗೇಡಿನ ಸಂಗತಿ. ಪೊಲೀಸ್ ಇಲಾಖೆಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದು ಇಂದಿನ ಈ ಘಟನೆಗೆ ಸಾಕ್ಷಿಯಾಗಿದೆ ಎಂದು ದೂರಿದರು.
ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಮೇಲೆ ಪೊಲೀಸರು ದರ್ಪ ಪ್ರದರ್ಶಿಸಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರು ಹಾಗೂ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದರು.ಜೀವಂತ ಜನಪ್ರತಿನಿಧಿಗೆ ಶ್ರದ್ದಾಂಜಲಿ ಪೋಸ್ಟ್ ಹಾಕಿರುವ ಬಿಲ್ಲವ ಸಂದೇಶ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುಳ್ಯದ ಶಾಸಕಿ ಭಾಗೀರತಿ ಮುರುಳ್ಯ ಅವರನ್ನು ತೇಜೋವಧೆ ಮಾಡುವ ಪೋಸ್ಟ್‌ನ್ನು ಹಾಕಿರುತ್ತಾನೆ. ಈ ರೀತಿಯ ಶ್ರದ್ದಾಂಜಲಿ ಪೋಸ್ಟ್ ಹಾಕಿರುವುದನ್ನು ನೋಡಿದರೆ ಈತನ ಮನಸ್ಥಿತಿ ಏನೆಂಬುದು ಅರ್ಥವಾಗುತ್ತದೆ. ದಲಿತ ಶಾಸಕಿಗೆ ಅಪಮಾನ ಮಾಡಿರುವುದು ತೀವ್ರ ಖಂಡನೀಯ. ಈತನ ಮೇಲೆ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಮಹಿಳೆಯರಿಗೆ ಸುರಕ್ಷತೆಯೇ ಮುಖ್ಯ. ಸಮಾಜದಲ್ಲಿ ಪೊಲೀಸ್ ವ್ಯವಸ್ಥೆ ಇರುವುದು ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಹೊರತು ಗೂಂಡಾಗಿರಿ ಮಾಡಲು ಅಲ್ಲ. ಶಾಂತಿ ಸುವ್ಯವಸ್ಥೆ ಹಾಳು ಮಾಡಿರುವ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಮಹಿಳೆಯರನ್ನು ಅಸಭ್ಯವಾಗಿ ನಡೆಸಿಕೊಂಡ ರೀತಿ ನಾಚಿಕೆಗೇಡು. ಈ ಘಟನೆ ಕುರಿತು ಗೃಹ ಸಚಿವರು ಕೂಲಂಕುಷವಾಗಿ ತನಿಖೆ ನಡೆಸಿ ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳಾ, ಮುಖಂಡರಾದ ನರಸಿಂಹಾಚಾರ್, ಚಂದ್ರು, ಆನಂದ, ಶಿವಕುಮಾರ್ ಆರಾಧ್ಯ, ನಿತ್ಯಾನಂದ, ಸಿ.ಟಿ. ಮಂಜುನಾಥ್, ವಿವೇಕ್, ರಾ.ಸಿ. ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ಭೀಮೇಶ್, ಶಂಕರ, ಶಿವಕುಮಾರ್ ಕೆಂಪಯ್ಯ ಇತರರಿದ್ದರು.