;Resize=(412,232))
ಬೆಂಗಳೂರು : ತನ್ನನ್ನು ಪ್ರೀತಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್ ಬೆನ್ನು ಬಿದ್ದಿದ್ದ ಮಹಿಳೆಯೊಬ್ಬಳು ಈಗ ಸೆಂಟ್ರಲ್ ಜೈಲು ಸೇರಿದ್ದಾಳೆ.
ಕೆ.ಆರ್. ಪುರ ನಿವಾಸಿ ಸಂಜನಾ ಅಲಿಯಾಸ್ ವನಜಾ ಬಂಧಿತಳಾಗಿದ್ದು, ಕೆಲ ದಿನಗಳಿಂದ ರಾಮಮೂರ್ತಿ ನಗರ ಠಾಣೆ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ನಿರಂತರ ಪ್ರೇಮ ಪತ್ರ ಬರೆದು ಆರೋಪಿ ಒತ್ತಾಯಿಸುತ್ತಿದ್ದಳು. ಈ ಕಾಟ ಸಹಿಸಲಾರದೆ ಆಕೆಯನ್ನು ಶುಕ್ರವಾರ ಬಂಧಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ರಾಮಮೂರ್ತಿ ನಗರ ಪೊಲೀಸರು ಕಳುಹಿಸಿದ್ದಾರೆ.
ತನ್ನ ಪ್ರೇಮ ಪಾಶಕ್ಕೆ ವ್ಯಾಪಾರಿಗಳು ಹಾಗೂ ಪೊಲೀಸರು ಸೇರಿ ಹಣವಂತರನ್ನು ಬೀಳಿಸಿಕೊಂಡು ಬಳಿಕ ಸುಲಿಗೆ ಮಾಡುವುದು ಸಂಜನಾ ಕೃತ್ಯವಾಗಿತ್ತು. ಇದೇ ರೀತಿ ಕೆ.ಆರ್. ಪುರದ ಉದ್ಯಮಿ ಹಾಗೂ ವೈಟ್‌ಫೀಲ್ಡ್‌ನಲ್ಲಿ ಪೊಲೀಸ್ ಕಾನ್ ಸ್ಟೇಬಲ್‌ವೊಬ್ಬರಿಗೆ ಸಹ ಪ್ರೀತಿಸುವ ಸೋಗಿನಲ್ಲಿ ಆಕೆ ವಂಚಿಸಿದ್ದಳು. ಈಕೆಯ ವಿರುದ್ಧ ಕೆ.ಆರ್. ಪುರ, ರಾಮಮೂರ್ತಿ ನಗರ ಹಾಗೂ ವೈಟ್‌ಫೀಲ್ಡ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತೆಯೇ ಈಗ ರಾಮಮೂರ್ತಿ ನಗರ ಠಾಣೆ ಪಿಐ ಸತೀಶ್ ಅವರನ್ನು ಸಂಜನಾ ಗುರಿಯಾಗಿಸಿಕೊಂಡಿದ್ದಳು. ಕಳೆದ ಅಕ್ಟೋಬರ್ ತಿಂಗಳಿಂದ ಮೂರು ಬಾರಿ ಇನ್ಸ್‌ಪೆಕ್ಟರ್ ಅವರಿಗೆ ಆಕೆ ಪ್ರೇಮ ಪತ್ರ ಬರೆದಿದ್ದಳು. ನನ್ನನ್ನು ಪ್ರೀತಿಸದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಜನಾ ಬೆದರಿಕೆ ಹಾಕಿದ್ದಳು. ಅಲ್ಲದೆ ಎರಡು ಬಾರಿ ಪೊಲೀಸ್ ಠಾಣೆಗೆ ತೆರಳಿ ಸಹ ಪ್ರೀತಿಸುವಂತೆ ಪಿಐಗೆ ಸಂಜನಾ ಆಗ್ರಹಿಸಿದ್ದಳು. ಆಗ ಆಕೆಗೆ ಬೈದು ಇನ್ಸ್‌ಪೆಕ್ಟರ್ ಕಳುಹಿಸಿದ್ದರು. ಇದಾದ ನಂತರ ಮತ್ತೆ ಡಿ.12 ರಂದು ಠಾಣೆಗೆ ತೆರಳಿ ಸತೀಶ್ ಅವರ ಬಳಿ ಪ್ರೇಮ ನಿವೇದಿಸಿ ಆರೋಪಿ ಹೈಡ್ರಾಮಾ ಮಾಡಿದ್ದಳು. ಈ ಕಾಟ ಸಹಿಸಲಾರದೆ ಆಕೆಯ ವಿರುದ್ಧ ಇನ್ಸ್‌ಪೆಕ್ಟರ್ ದೂರು ನೀಡಿದ್ದಾರೆ. ಅಂತೆಯೇ ಸರ್ಕಾರಿ ಅಧಿಕಾರಿ ಕೆಲಸಕ್ಕೆ ಅಡ್ಡಪಡಿಸಿದ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಿ ಸಂಜನಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.