ಕನ್ನಡಪ್ರಭ ವಾರ್ತೆ ನಾಗಮಂಗಲ
ಇದು ಯಾವುದೇ ಸಸ್ಪೆನ್ಸ್- ಥ್ರಿಲ್ಲರ್ ಸಿನಿಮಾದ ಕಥೆಯಲ್ಲ. ಬದಲಿಗೆ ಜಿಲ್ಲೆಯ ಪಾಂಡವಪುರದಲ್ಲಿ ಖಾಕಿ ಪಡೆಯ ತನಿಖೆ ಹಾದಿ ತಪ್ಪಿದ್ದರಿಂದ ಸಂಭವಿಸಿದ ನೈಜ ಘಟನೆ. ಘಟನೆಯ ಹಿನ್ನೆಲೆ ನೋಡುವುದಾದರೆ ೨೦೧೯ರಲ್ಲಿ ಪಾಂಡವಪುರ ಪಟ್ಟಣದಿಂದ ಮಂಜು ಎಂಬ ಮಹಿಳೆ ದಿಢೀರ್ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ತಂದೆ ನಾಗರಾಜು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಆದರೆ, ಈ ನಾಪತ್ತೆ ಪ್ರಕರಣಕ್ಕೆ ಪೊಲೀಸರು ಬರೋಬ್ಬರಿ ಎರಡು ವರ್ಷಗಳ ಕಾಲ ಯಾವುದೇ ಮುಕ್ತಿ ಕಾಣಿಸಲಿಲ್ಲ. ಕೊನೆಗೆ ೨೦೨೧ರಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯ ನಿರಪರಾಧಿ ರಾಜೇಶ್.
ಕೊಲೆಯಾಗಿದ್ದಾಳೆ ಎನ್ನಲಾಗಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಹಿರೋಡೆ ಬೀದಿ ವಾಸಿ ನಾಗರಾಜು ಪುತ್ರಿ ಮಂಜು (೩೫) ಎಂಬುವರೇ ಆರು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿರುವ ಮಹಿಳೆಯಾಗಿದ್ದು, ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ ಸುಳ್ಳು ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸಿರುವ ನಿರಪರಾಧಿ ವ್ಯಕ್ತಿಯಾಗಿದ್ದಾರೆ.ಏನಿದು ಪ್ರಕರಣ:
೨೦೧೯ರ ಜೂನ್ ೨೪ರಂದು ರಾತ್ರಿ ನಾಗರಾಜು ಅವರು ಸೆಕ್ಯುರಿಟಿ ಕೆಲಸಕ್ಕೆ ತೆರಳಿದ್ದ ವೇಳೆ ಮಂಜು ನಾಪತ್ತೆಯಾಗಿದ್ದರು. ಮರುದಿನದಿಂದ ಒಂದು ವಾರಕಾಲ ಎಲ್ಲೆಡೆ ಹುಡುಕಾಟ ನಡೆಸಿದರೂ ಕೂಡ ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆಂದು ತಂದೆ ದೂರು ದಾಖಲಿಸಿದ್ದರು.
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಎಂ.ಆರ್.ರಾಜೇಶ್ (ಕಾಳ) ಎಂಬಾತ ಮಂಜು ಜೊತೆ ಆತ್ಮೀಯವಾಗಿದ್ದನು. ಆತನಿಗೆ ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿದ್ದನ್ನು ವಿರೋಧಿಸಿದ್ದರಿಂದ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಗೆ ತಳ್ಳಿ ನನ್ನ ಮಗಳನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ ಮಂಜು ತಂದೆ ನಾಗರಾಜು ಎರಡು ವರ್ಷದ ನಂತರ ೨೦೨೧ರಲ್ಲಿ ಮತ್ತೆ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಗಿತ್ತು.
ಪತ್ತೆಯಾಗಿರುವ ಮಹಿಳೆ ಹೇಳಿದ್ದಿಷ್ಟು:
ಮಹಿಳೆ ಕೊಲೆಯಾಗಿಲ್ಲ, ಆಕೆಯ ಮೃತದೇಹವೂ ಸಿಕ್ಕಿಲ್ಲ, ಜೀವಂತವಾಗಿ ತನ್ನ ಎರಡನೇ ಗಂಡನೊಂದಿಗೆ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ವಿಷಯ ನಿರಪರಾಧಿ ರಾಜೇಶನ ತಂದೆಗೆ ತಿಳಿಯುತ್ತಿದ್ದಂತೆ ಮಗ ರಾಜೇಶ ಹಾಗೂ ವಕೀಲರೊಂದಿಗೆ ಮಾಯಿಗೋನಹಳ್ಳಿಗೆ ಬಂದು ೬ ವರ್ಷದ ನಂತರ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ.
ಪೊಲೀಸರ ಹಾದಿ ತಪ್ಪಿದ ತನಿಖೆ ಹಾಗೂ ಯಡವಟ್ಟಿನಿಂದ ನಿರಪರಾಧಿಯಾಗಿರುವ ನಾನು ೨ ವರ್ಷ ೫ ತಿಂಗಳು ಜೈಲುಶಿಕ್ಷೆ ಅನುಭವಿಸುವಂತಾಯಿತು. ನಾನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಳ್ಳುವಂತೆ ಪೊಲೀಸರು ಬೂಟುಕಾಲಿನಿಂದ ಒದ್ದು, ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದರು. ಒಪ್ಪಿಕೊಳ್ಳದಿದ್ದರೆ ಮನೆಯವರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದರು. ಪೊಲೀಸರ ಚಿತ್ರಹಿಂಸೆ ತಡೆಯಲಾಗದೆ ಕೊಲೆ ಆರೋಪವನ್ನು ಒಪ್ಪಿಕೊಂಡಿದ್ದೆ. ಆದರೆ ಈಗ ಕೊಲೆಯಾಗಿದ್ದರು ಎನ್ನಲಾಗಿದ್ದ ಮಹಿಳೆ ಪತ್ತೆಯಾಗಿರುವುದರಿಂದ ನನಗೆ ಸೂಕ್ತ ನ್ಯಾಯ ಸಿಗಬೇಕು. ತನಿಖೆ ನಡೆಸಿದ ಪೊಲೀಸರು ಹಾಗೂ ಸುಳ್ಳು ದೂರು ನೀಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಿರಪರಾಧಿ ರಾಜೇಶ್ ಬಿಂಡಿಗನವಿಲೆ ಠಾಣೆಯ ಪೊಲೀಸರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.
ರಾಜೇಶನ ದೂರಿನ ಮೇರೆಗೆ ಮಹಿಳೆಯನ್ನು ವಿಚಾರಣೆ ನಡೆಸಿದ ಬಿಂಡಿಗನವಿಲೆ ಠಾಣೆಯ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ಮಾಯಿಗೋನಹಳ್ಳಿಯಲ್ಲಿ ಪತ್ತೆಯಾದ ಮಂಜು ಎಂಬ ಮಹಿಳೆಯನ್ನು ನಾಗಮಂಗಲ ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
--------ಮಂಜು ಎಂಬ ಮಹಿಳೆಯು ಪಾಂಡವಪುರ ಬಸ್‌ನಿಲ್ದಾಣದಲ್ಲಿ ಯಾರಿಗೋ ತುರ್ತಾಗಿ ಕರೆ ಮಾಡಬೇಕೆಂದು ನನ್ನ ಮೊಬೈಲ್ ಪಡೆದು ಕರೆ ಮಾಡಿದ್ದರು. ಅದರ ಆಧಾರವಾಗಿ ನನ್ನನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದರಿಂದ ಅದನ್ನು ತಡೆಯಲಾಗದೆ ನಾನು ಮಾಡದ ಕೊಲೆಯನ್ನು ಮಾಡಿದ್ದೇನೆಂದು ಒಪ್ಪಿಕೊಂಡಿದ್ದೆ. ಪೊಲೀಸರು ಹೇಳಿದ ಜಾಗಕ್ಕೆ ಹೋಗಿ ಅವರು ಹೇಳಿಕೊಟ್ಟಂತೆ ನಾನು ಮಹಜರಿನಲ್ಲಿ ಪಾಲ್ಗೊಂಡಿದ್ದೆ.
--ರಾಜೇಶ್, ಶಿಕ್ಷೆ ಅನುಭವಿಸಿರುವ ನಿರಪರಾಧಿ.-----------
ಕೊಲೆಯಾಗಿದ್ದರು ಎನ್ನಲಾದ ಮಹಿಳೆ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ. ಆಕೆಯ ಹೇಳಿಕೆ ಪಡೆದು ಸಾಂತ್ವನ ಕೇಂದ್ರಕ್ಕೆ ಬಿಡಲಾಗಿದೆ. ತನಿಖೆ ಸಮಯದಲ್ಲಿ ಆಗಿರುವ ಲೋಪಗಳ ಬಗ್ಗೆ ತನಿಖೆ ಆಗಬೇಕಿದೆ. ಆ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್ ನಿವೃತ್ತಿ ಹೊಂದಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆಗೆ ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.-ಡಾ.ವಿ.ಜೆ.ಶೋಭಾರಾಣಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಡ್ಯ.