ಕಾನೂನಿನ ಬಗ್ಗೆ ಹೆಚ್ಚಿನ ತಿಳಿವಳಿಲಿಕೆ ಇರಲಿ

KannadaprabhaNewsNetwork | Published : Feb 24, 2025 12:31 AM

ಸಾರಾಂಶ

ಜ್ಞಾನ ಮತ್ತು ಅದರ ಮೂಲಕ ಪಡೆಯುವ ಅರಿವಿಗೆ ಸರಿಸಮನಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ.

---

ಕನ್ನಡಪ್ರಭ ವಾರ್ತೆ ಮೈಸೂರು

ಕಾನೂನು ಅರಿವು ಎಂಬುದು ಎಲ್ಲರಿಗೂ ಮುಖ್ಯ. ಅದರಲ್ಲೂ ಮಹಿಳೆಯರು ಕಾನೂನಿನ ಬಗ್ಗೆ ಸಮಗ್ರ ಜ್ಞಾನ ಹೊಂದಿರುವುದು ಇಂದು ಅತ್ಯಂತ ಅವಶ್ಯಕ ಎಂದು ಹಿರಿಯ ನ್ಯಾಯವಾದಿ ಕೆ.ಆರ್. ಶಿವಶಂಕರ್ ಹೇಳಿದರು.

ನಗರದ ಟಿ.ಕೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ವಿಪ್ರ ಪ್ರೊಫೆಷನಲ್ ಫೋರಂನ ಮಹಿಳಾ ವಿಭಾಗ ಮತ್ತು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮಹಿಳೆ ಮತ್ತು ಕಾನೂನು ವಿಚಾರ ಸಂಕಿರಣದ ಶಿಖರೋಪನ್ಯಾಸ ನೀಡಿ ಅವರು ಮಾತನಾಡಿದರು.

ಜ್ಞಾನ ಮತ್ತು ಅದರ ಮೂಲಕ ಪಡೆಯುವ ಅರಿವಿಗೆ ಸರಿಸಮನಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ. ಆಧುನಿಕ ಕಾಲ ಘಟ್ಟದಲ್ಲಿ ಎದುರಾಗುವಂತಹ ಹಲವು ರೀತಿಯ ಸಮಸ್ಯೆ, ಶೋಷಣೆ ದೌರ್ಜನ್ಯ ಮತ್ತು ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮಹಿಳೆಯರು ಕಾನೂನು ಸುವ್ಯವಸ್ಥೆ ಬಗ್ಗೆ ಜ್ಞಾನ ಹೊಂದಿರಬೇಕು ಎಂದು ಅವರು ಸಲಹೆ ನೀಡಿದರು.

ಯಾವುದೇ ಸಮಸ್ಯೆ ಬಂದ ನಂತರ ಅದಕ್ಕೆ ಉತ್ತರ ಹುಡುಕುವುದು ಸೂಕ್ತವಲ್ಲ. ಇರುವ ವ್ಯವಸ್ಥೆಯಲ್ಲಿ ನಾವು ಸುಂದರವಾದ ಬದುಕನ್ನು ರೂಪಿಸಿಕೊಳ್ಳಲು ಬೇಕಾದಂತಹ ಪೂರ್ವಸಿದ್ಧತೆ ಮಾಡಿಕೊಂಡಿರಬೇಕು. ಈ ನಿಟ್ಟಿನಲ್ಲಿ ಕಾನೂನು ವಿಷಯ ಬಗ್ಗೆ ಪ್ರಾಥಮಿಕ ಮಾಹಿತಿಯನ್ನಾದರೂ ನಾವು ಹೊಂದಿರಬೇಕು ಎಂದು ಶಿವಶಂಕರ್ ತಿಳಿಸಿದರು.

ಕಾನೂನು ಅರಿವು ಮತ್ತು ನೆರವನ್ನು ಪಡೆಯುವ ನಿಟ್ಟಿನಲ್ಲಿ ವನಿತೆಯರು ಮುಂದಾಗಬೇಕು. ವಿಪ್ರ ಪ್ರೊಫೆಷನಲ್ ಫೋರಂನ ಮಹಿಳಾ ವಿಭಾಗವು ಈ ನಿಟ್ಟಿನಲ್ಲಿ ಹಲವಾರು ಕ್ರಿಯಾತ್ಮಕ ಚಟುವಟಿಕೆ ಗಳನ್ನು ಈಗಾಗಲೇ ನಡೆಸಿದೆ. ಇದರಿಂದ ಸಮುದಾಯ ಮತ್ತು ಸಮಾಜಕ್ಕೆ ಹೊಸ ಬೆಳಕು ಮೂಡಲಿ ಎಂದು ಶಿವಶಂಕರ್ ಆಶಿಸಿದರು.

ನಂತರ ಪ್ರಶ್ನೋತ್ತರ ಅವಧಿಯಲ್ಲಿ ಶಿವಶಂಕರ್ ಹಲವು ಪ್ರಶ್ನೆಗಳಿಗೆ, ಜಿಜ್ಞಾಸೆ ಗಳಿಗೆ ಉತ್ತರ ನೀಡಿದರು.

ವಿಪ್ರ ಪ್ರೊಫೆಷನಲ್ ಫೋರಂ ಅಧ್ಯಕ್ಷ ಹಾಗೂ ಉದ್ಯಮಿ ಯೋಗಾತ್ಮಾ ಶ್ರೀಹರಿ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ವಕೀಲ ಚಂದ್ರಶೇಖರ್, ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ಸಿಇಒ ಮಂಜುನಾಥ್ ಶ್ರೀವತ್ಸ, ಉದ್ಯಮಿ ಅಂಜಲಿ ಇದ್ದರು.

ಹಲವು ಮಹಿಳಾ ಸಂಘ, ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು. ಮಹಿಳಾ ಉದ್ಯಮಿಗಳ ಗೃಹ ಉತ್ಪನ್ನ ಪ್ರದರ್ಶನ ಮತ್ತು ಮಾರಾಟಕ್ಕೂ ಈ ಸಂದರ್ಭ ವ್ಯವಸ್ಥೆ ಕಲ್ಪಿಸಲಾಗಿತ್ತು.--ಬಾಕ್ಸ್‌---- ಸಾಧನೆಗೆ ಅವಕಾಶ-- ಶತ ಶತಮಾನಗಳಿಂದ ಮಹಿಳೆಗೆ ನಮ್ಮ ಸಮಾಜ ಹಾಕಿದಂತಹ ಚೌಕಟ್ಟುಗಳು ಈಗ ಇಲ್ಲ. ಆಕೆ ಯಾವ ಸಾಧನೆಯನ್ನಾದರೂ ಮಾಡುವಂತಹ ವಾತಾವರಣ ಈಗ ಇದೆ. ಆಕೆ ಉನ್ನತ ಮಟ್ಟದ ಶಿಕ್ಷಣ ಪಡೆದು, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಸಮಾಜದ ಕೆಲವು ದುಷ್ಟ ಶಕ್ತಿಗಳು, ವಿಕೃತ ಮನಗಳು ಮಹಿಳೆಯನ್ನು ಬಹು ವಿಧ ರೂಪದಲ್ಲಿ ಶೋಷಣೆ ಮಾಡುವ, ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗುವ ಪ್ರಸಂಗಗಳನ್ನು ನಾವು ನೋಡುತ್ತಲೇ ಇದ್ದೇವೆ. ಇವುಗಳಿಂದ ಮುಕ್ತವಾಗಿ ಸುಂದರ, ಸದೃಢ, ಸುಸಂಸ್ಕೃತ ಸಮಾಜವನ್ನು ನಾವು ಕಾಣಬೇಕು. ಮಹಿಳೆಯರು ಸುಖ ಮತ್ತು ಸಮೃದ್ಧಿಯಿಂದ ಜೀವನ ನಿರ್ವಹಿಸಬೇಕು. ಯಾವ ಮನೆ, ಸಮುದಾಯ, ಸಮಾಜ ಮತ್ತು ನಾಡಿನಲ್ಲಿ ಮಾತೆಯರು ಆನಂದಕರ ವಾತಾವರಣದಲ್ಲಿ ಬದುಕುತ್ತಿರುತ್ತಾರೋ ಅಂತಹ ಮನೆಯ ಪ್ರತಿಯೊಬ್ಬರೂ ಸಮಾಜಕ್ಕೆ ಬೆಳಕಾಗುತ್ತಾರೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಾಂಪ್ರದಾಯಿಕ ಚೌಕಟ್ಟುಗಳ ನಡುವೆಯೂ ಅರ್ಥಪೂರ್ಣ ಜೀವನವನ್ನು ಕಟ್ಟಿ ಕೊಡಬೇಕಾದದ್ದು ನಮ್ಮ ಸಮಾಜದ ಕರ್ತವ್ಯ. ಈ ದಿಸೆಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಹೊಣೆಗಾರಿಕೆಯೂ ದೊಡ್ಡದಾಗಿದೆ ಎಂದು ನ್ಯಾ. ಶಿವಶಂಕರ್‌ ಹೇಳಿದರು.

Share this article