ಬ್ಯಾಡಗಿ: ಸತಿ ಸಹಗಮನ ಪದ್ಧತಿಯಿಂದ ಹಿಡಿದು ಇಂದಿನ ಡಿಜಿಟಲ್ ವಂಚನೆಯಲ್ಲಿಯೂ ಸಹ ಮಹಿಳೆಯನ್ನೇ ಗುರಿಯಾಗುತ್ತಿರುವುದು ನೋವಿನ ಸಂಗತಿ, ಮಹಿಳಾ ಸುರಕ್ಷತೆ ಎಂಬುದು ಕೇವಲ ಯೋಜನೆ ರೂಪಿಸುವುದರಿಂದ ಸಾಧ್ಯವಿಲ್ಲ. ಮಹಿಳಾ ನೌಕರರ ಮೇಲಿನ ಶೋಷಣೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸುವಂತೆ ಪ್ರಾಧ್ಯಾಪಕಿ ಹಾಗೂ ಸಾಹಿತಿ ಪುಷ್ಪ ಶೆಲವಡಿಮಠ ಮನವಿ ಮಾಡಿದರು.
ಯಾವ ಕಾಲಘಟ್ಟದಲ್ಲಿಯೂ ಮಹಿಳೆ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಸಾವಿರ ವರ್ಷಗಳಿಂದಲೂ ಸಾಕಷ್ಟು ಉದಾಹರಣೆ ಸಿಗುತ್ತಿವೆ, ಮಹಿಳಾ ಸರ್ಕಾರಿ ಉದ್ಯೋಗಿಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ದೈಹಿಕ ಮತ್ತು ಆಡಳಿತಾತ್ಮಕ ಕ್ರಮಗಳ ಬಹು-ಹಂತದ ಚೌಕಟ್ಟನ್ನು ಸ್ಥಾಪಿಸಬೇಕಾಗಿದೆ ಎಂದರು.
ರಾತ್ರಿ ವೇಳೆ ಕರ್ತವ್ಯ ಲಿಖಿತ ಒಪ್ಪಿಗೆ ಕಡ್ಡಾಯ: ಆಡಳಿತಾತ್ಮಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸರ್ಕಾರಿ ನೌಕರರ ಸುರಕ್ಷತೆ ಅತ್ಯಂತ ಕಠಿಣದ ಕೆಲಸವಾಗಿದೆ, ರಾತ್ರಿ ವೇಳೆ ತಮ್ಮ ವೈಯಕ್ತಿಕ ಬದುಕನ್ನು ದೂರವಿಟ್ಟು ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಹೀಗಾಗಿ ಅವರಿಂದ ಲಿಖಿತ ಅನುಮತಿ ಕಡ್ಡಾಯ ಮಾಡಬೇಕು, ಅಷ್ಟಕ್ಕೂ ಅಂತಹ ಸಂದರ್ಭಗಳು ಎದುರಾದಾಗ ಕೊಟ್ಟ ದೂರನ್ನು ಫೋಸ್ಕೊ ಮಾದರಿಯಲ್ಲಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಭೌತಿಕವಾಗಿ ನಿರ್ವಹಿಸುವ ಕೆಲಸದ ಸ್ಥಳಗಳನ್ನು ಸುರಕ್ಷಿತಗೊಳಿಸಲು ಸರ್ಕಾರಗಳು ಮುಂದಾಗಬೇಕು ಎಂದರು.ದೋಷಪೂರಿತ ವರ್ಗಾವಣೆ ನಿಯಮ: ನೌಕರರ ವರ್ಗಾವಣೆ ನಿಯಮ ದೋಷಪೂರಿತವಾಗಿದೆ. ಅದರಲ್ಲೂ ಸರ್ಕಾರಿ ಶಾಲೆಗಳ ಶಿಕ್ಷಕಿಯರ ಗೋಳಂತೂ ಹೇಳ ತೀರದು, ಪತಿ-ಪತ್ನಿ ನಿಯಮದಡಿ ವರ್ಗಾವಣೆಗೆ ಅವಕಾಶ ನೀಡಿದೆಯಾದರೂ, ಇದರಲ್ಲಿಯೂ ಸಾಕಷ್ಟು ದೋಷಗಳಿವೆ. ಅಂತರ ಜಿಲ್ಲಾ ವರ್ಗಾವಣೆಯಲ್ಲಿ ಶೇ. 5ರಷ್ಟು ಮೀರದಂತೆ ನಿಯಮವಿದೆ, ಒಂದು ವೇಳೆ ನೌಕರಳ ಪತಿ ರೈತ ಅಥವಾ ಖಾಸಗಿ ಉದ್ಯೋಗಿಯಾಗಿದ್ದರೇ ವರ್ಗಾವಣೆಗೆ ಪರಿಗಣಿಸುತ್ತಿಲ್ಲ ಇದೂ ಸಹ ಅವೈಜ್ಞಾನಿಕ, ಮದುವೆ ಎಂಬುದು ನೌಕರಳ ಇಚ್ಛೆಯಾಗಿದ್ದರೂ ಸಹ ಸದರಿ ನಿಯಮದಿಂದ ತವರುಮನೆ ಸುತ್ತಮುತ್ತಲಿನಲ್ಲಿರುವ ಸರ್ಕಾರಿ ನೌಕರನನ್ನೇ ಹುಡುಕಿ ಮದುವೆಯಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.