ಆಧುನಿಕ ಯುಗದಲ್ಲೂ ಹೆಣ್ಣು ಶೋಷಣೆಗೆ ಒಳಪಡುತ್ತಿದ್ದಾಳೆ: ಡಾ.ಬಂಜಗೆರೆ ಜಯಪ್ರಕಾಶ್

KannadaprabhaNewsNetwork |  
Published : May 10, 2025, 01:23 AM IST
1 | Kannada Prabha

ಸಾರಾಂಶ

ಹೆಣ್ಣಿನ ಶೋಷಣೆ ಗ್ಲಾಮರಸ್, ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ವಿಷಯವನ್ನು ಹೆಣ್ಣು ಮಕ್ಕಳು ಹೇಳಿಕೊಳ್ಳಲಾಗದೆ ಅನುಭವಿಸುತ್ತಿದ್ದಾರೆ. ಇಂತಹ ಅನೇಕ ವಿಚಾರಗಳು ಈ ಗ್ರಂಥದಲ್ಲಿ ಚಿತ್ರಿಸಲಾಗಿದೆ. ಗಂಡನಿಂದ, ತಂದೆಯಿಂದ, ಬಂಧುಗಳಿಂದ ಯಾವುದೋ ಕಾರಣಕ್ಕೆ ಇವರ ರೆಕ್ಕೆಯನ್ನು ಕತ್ತರಿಸಲಾಗಿದೆ. ಹೀಗೆ ಹೆಣ್ಣನ್ನು ಆಕೆಯ ಮನಸ್ಸನ್ನು ಹಿಂದಿನಿಂದಲೂ ನಿಯಂತ್ರಿಸುತ್ತಾ ಬರಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ಯುಗದಲ್ಲೂ ಹೆಣ್ಣು ಶೋಷಣೆಗೆ ಒಳಪಡುತ್ತಿದ್ದಾಳೆ. ಜಾಗತೀಕರಣ, ನವ ಬಂಡವಾಳಶಾಹಿ ಮಹಿಳೆಯನ್ನು ಮತ್ತೊಮ್ಮೆ ಬೋಗದ ಸರಕೆಂದು ಬಿಂಬಿಸಲಾಗುತ್ತಿದೆ ಎಂದು ಸಾಂಸ್ಕೃತಿಕ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠವು ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಪಿತೃಸತ್ತೆಯ ಬಹುರೂಪಕ- ಮಹಿಳೆಯರ ಕಥನಗಳ ಸಮಾಜೋ ಸಾಂಸ್ಕೃತಿಕ ಅಧ್ಯಯನ ಎಂಬ ಸಂಶೋಧನಾ ಗ್ರಂಥವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಮಹಿಳೆಯರು ವಿದ್ಯಾವಂತರು, ಪ್ರಜ್ಞಾವಂತರಾದ ಮೇಲೆ ತಮ್ಮ ರೂಪದ ಹಾಗೂ ದೇಹದ ಚೌಕಟ್ಟಿನ ಹಂಬಲದಿಂದ ಬಿಡುಗಡೆ ಹೊಂದಬೇಕಿತ್ತು. ಆದರೆ, ಇಂದಿನ ಸಾಮಾಜಿಕ, ಜಾಹೀರಾತು ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಹೆಣ್ಣಿನ ದೇಹ ಪ್ರದರ್ಶನಕ್ಕಿರುವ ಹಾಗೂ ಮಾರಾಟಕ್ಕಿರುವ ವಸ್ತುವನ್ನಾಗಿ ಆಗುವ ರೀತಿಯಲ್ಲಿ ತಯಾರು ಮಾಡಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಹೆಣ್ಣಿನ ಶೋಷಣೆ ಗ್ಲಾಮರಸ್, ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ವಿಷಯವನ್ನು ಹೆಣ್ಣು ಮಕ್ಕಳು ಹೇಳಿಕೊಳ್ಳಲಾಗದೆ ಅನುಭವಿಸುತ್ತಿದ್ದಾರೆ. ಇಂತಹ ಅನೇಕ ವಿಚಾರಗಳು ಈ ಗ್ರಂಥದಲ್ಲಿ ಚಿತ್ರಿಸಲಾಗಿದೆ. ಗಂಡನಿಂದ, ತಂದೆಯಿಂದ, ಬಂಧುಗಳಿಂದ ಯಾವುದೋ ಕಾರಣಕ್ಕೆ ಇವರ ರೆಕ್ಕೆಯನ್ನು ಕತ್ತರಿಸಲಾಗಿದೆ. ಹೀಗೆ ಹೆಣ್ಣನ್ನು ಆಕೆಯ ಮನಸ್ಸನ್ನು ಹಿಂದಿನಿಂದಲೂ ನಿಯಂತ್ರಿಸುತ್ತಾ ಬರಲಾಗುತ್ತಿದೆ ಎಂದರು.

ಮಹಿಳೆಯರ ಹಕ್ಕಿನ ಬಗ್ಗೆ ಮಾತಾಡುವ ಜಗತ್ತಿನ ಮುಂದುವರಿದ ರಾಷ್ಟ್ರ, ಆಧುನಿಕ ರಾಷ್ಟ್ರ ಹಾಗೂ ವಿದ್ಯಾವಂತ ರಾಷ್ಟ್ರ ಎಂದು ಕರೆಯಲ್ಪಡುವ ಅಮೆರಿಕಾ ರಾಷ್ಟ್ರವೂ ಒಂದು ಮಹಿಳಾ ಅಧ್ಯಕ್ಷೆಯನ್ನು ಕಂಡಿಲ್ಲ. ಅಲ್ಲಿನ ಮಹಿಳೆಯರು ತಮ್ಮ ಸೌಂದರ್ಯಕ್ಕಾಗಿ ಅಪಾರವಾದ ಹಣವನ್ನು ವ್ಯೇಯ ಮಾಡುತ್ತಿದ್ದಾರೆ. ಅವರು ಖರ್ಚು ಮಾಡುವ ಹಣ ಆಫ್ರಿಕಾದ ದೇಶಗಳ ಬಜೆಟ್‌ ಗೆ ಹತ್ತಿರವಾಗಿದೆ. ಹೀಗೆ ಮಹಿಳೆಯರು ಬ್ಯೂಟಿ ಪಾರ್ಲರಿಗೆ ಹೋಗುವುದು, ರೀಲ್ಸ್ ಮಾಡುವುದರಲ್ಲೇ ಕಳೆದು ಹೋಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದ ಪ್ರಥಮ ಮಹಿಳಾವಾದಿ, ಚಿಂತಕಿ, ಲೇಖಕಿ ಎಂದು ಹೆಸರಾಗಿರುವ ಅಕ್ಕ ಮಹಾದೇವಿ ಅವರು ಪುರುಷ ಪ್ರಧಾನ ವ್ಯವಸ್ಥೆಗೆ ಪ್ರತಿರೋಧವನ್ನು ಒಡ್ಡುತ್ತಾ ಮಹಿಳೆಯರ ಸಮಾನತೆಗಾಗಿ, ಬಿಡುಗಡೆಗಾಗಿ ಹಾಗೂ ಅವರ ಅಸ್ಮಿತೆಗಾಗಿ ನಡೆಸುತ್ತಿದ್ದ ಹೋರಾಟ ಇಂದಿಗೂ ಚಾಲ್ತಿಯಲ್ಲಿದೆ. ನಮ್ಮ ಊಹೆಗೂ ಕಷ್ಟ ಅನಿಸುವಂತಹ ಕಠಿಣ ದಾರಿಯಲ್ಲಿ ಅಕ್ಕ ಮಹಾದೇವಿ ನಡೆದವರು. ಇಂದಿಗೂ ಅಕ್ಕ ಮಹಾದೇವಿ ನಮಗೆ ಮಾದರಿ ಎಂದರು.

ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪಿತೃಪ್ರದಾನ ವ್ಯವಸ್ಥೆಯು ಮಹಿಳಾ ಅಸ್ಮಿತೆ ಧಮನವು ಯಾವ ಯಾವ ರೂಪದಲ್ಲಿ ನಡೆದಿದೆ ಎನ್ನುವುದನ್ನು ಈ ಕೃತಿ ಮಂಡಿಸುತ್ತದೆ. ಭಾರತದ ಸ್ವಾತಂತ್ರ್ಯ ಪಡೆಯಲು ಯಾವ ರೀತಿ ಸಂಘರ್ಷ ಮಾಡಿತ್ತೋ ಹಾಗೂ ನಂತರದ ಕಾಲಘಟ್ಟದಲ್ಲಿ ದಲಿತರ ಸಮಾನತೆ ಹಾಗೂ ಸ್ವಾತಂತ್ರ್ಯ ಹೇಗೆ ಆದ್ಯತೆಯ ಪ್ರಶ್ನೆಯಾಗಿತ್ತೋ ಹಾಗೆಯೇ ಇಂದಿನ ಆದ್ಯತೆ ಮಹಿಳಾ ಸಮಾನತೆಯಾಗಿದೆ ಎಂದು ಅವರು ಹೇಳಿದರು.

ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಅಧ್ಯಕ್ಷ ಮ.ಗು. ಸದಾನಂದಯ್ಯ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎನ್. ದೇವಮ್ಮಣಿ, ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕಿ ಪ್ರೊ. ಕವಿತಾ ರೈ ಮೊದಲಾದವರು ಇದ್ದರು.

ಗಂಡು- ಹೆಣ್ಣಾಗಿ ಹುಟ್ಟುವುದು ಪ್ರಕೃತಿಯ ಭಾಗ. ಅದು ಪ್ರಕೃತಿಯ ದೃಷ್ಟಿಯಲ್ಲಿ ಮೇಲೂ ಅಲ್ಲ ಕೀಳೂ ಅಲ್ಲ. ಅದು ನಿಸರ್ಗದ ಒಂದು ವಿದ್ಯಾಮಾನ. ಹೆಣ್ಣು- ಗಂಡು ಇದ್ದರೆ ಮಾತ್ರ ನಿಸರ್ಗ ಮುಂದುವರೆಯುತ್ತದೆ. ಆದರೆ, ಭಿನ್ನ ಲಿಂಗ ಇರುವ ಕಾರಣಕ್ಕೆ ದಮನಕ್ಕೆ ಒಳಗಾಗುವುದು ನಿರಂತರವಾಗಿ 2ನೇ ದರ್ಜೆ ಪ್ರಜೆಯಾಗಿ, 3ನೇ ದರ್ಜೆಯ ಪ್ರಜೆಯಾಗಿ ಬಾಳುತ್ತ ಬಂದಿರುವ ಆ ವಿದ್ಯಾಮಾನ ಸಾಮಾಜಿಕವಾದ್ದದ್ದೇ ಹೊರತು, ನೈಸರ್ಗಿಕವಾದುದ್ದಲ್ಲ.

- ಡಾ. ಬಂಜಗೆರೆ ಜಯಪ್ರಕಾಶ್, ಸಾಂಸ್ಕೃತಿಕ ಚಿಂತಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ