- ಎಚ್.ಕೆ.ರಾಮಚಂದ್ರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಶಾಸಕ ಬಸವಂತಪ್ಪ ಅಭಿಮತ
ಕಾರ್ಮಿಕ, ಕಾರ್ಮಿಕ ನಾಯಕನಾಗಿ ಬೆಳೆದ ಪಂಪಾಪತಿ ಮಾರ್ಗದರ್ಶನದಲ್ಲಿ ಎಚ್.ಕೆ. ರಾಮಚಂದ್ರಪ್ಪ ಸಹ ಕಾರ್ಮಿಕರ ಪರ ನಿರಂತರ ಹೋರಾಟ ನಡೆಸಿ, ದುಡಿಯುವ ವರ್ಗಕ್ಕೆ ನ್ಯಾಯ ಕೊಡಿಸುವಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ನಗರದ ಸರ್ಕಾರಿ ಐಟಿಐ ಕಾಲೇಜು ಆವರಣದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ದಿವಂಗತ ಕಾಮ್ರೆಡ್ ಎಚ್.ಕೆ.ರಾಮಚಂದ್ರಪ್ಪ ಅಸಂಘಟಿತ ಕಾರ್ಮಿಕರ ಫೆಡರೇಷನ್‌ನಿಂದ ಹಮ್ಮಿಕೊಂಡಿದ್ದ ಎಚ್.ಕೆ. ರಾಮಚಂದ್ರಪ್ಪ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ಎಚ್.ಕೆ. ರಾಮಚಂದ್ರಪ್ಪ ಕಾರ್ಮಿಕರಿಗೆ ಸೂರು, ನಿವೇಶನ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.ಬಡವರು, ದುಡಿಯುವ ವರ್ಗ, ಕೂಲಿ ಕಾರ್ಮಿಕರ ಪರ ಎಚ್.ಕೆ. ರಾಮಚಂದ್ರಪ್ಪ ಹೋರಾಡಿದರು. ಈಚಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳು ಕೇವಲ ವ್ಯಕ್ತಿಗತ ಲಾಭಕ್ಕೆ ಸೀಮಿತ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂಘಟನೆಗಳು ಸದಾ ಜನರ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಎಚ್.ಕೆ.ಆರ್. ಅನುಪಸ್ಥಿತಿ ಹೋರಾಟಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಮಚಂದ್ರಪ್ಪ ನಂತರ ಅನೇಕ ಅನುಯಾಯಿಗಳು ವ್ಯಕ್ತಿ ಕೇಂದ್ರಿತ ಚಳವಳಿ ಮುಂದುವರಿಸುತ್ತಿದ್ದಾರೆ. ಇಂತಹ ಚಳವಳಿಗಳು ಕಾಲಾಂತರದಲ್ಲಿ ತಮ್ಮಷ್ಟಕ್ಕೆ ತಾವೇ ನಿಷ್ಕ್ರಿಯವಾಗುತ್ತವೆ. ದಾವಣಗೆರೆಯಲ್ಲಿ ಇಂದಿಗೂ ಕಾರ್ಮಿಕ ವರ್ಗದ ಪ್ರಾಬಲ್ಯವಿದೆ. ಇಲ್ಲಿ ಎಲ್ಲ ಬಗೆಯ ಕಾರ್ಮಿಕರು ಸಂಘಟಿತರಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಹಿರಿಯ ಕಾರ್ಮಿಕ ಮುಖಂಡ ಎನ್.ಎಚ್. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘಟನೆ ಮುಖಂಡ ಹೆಗ್ಗೆರೆ ರಂಗಪ್ಪ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ವಕೀಲ ಎಸ್.ಪರಮೇಶ, ಹೊನ್ನಪ್ಪ ಮರಿಯಮ್ಮನವರ್, ಆವರಗೆರೆ ವಾಸು, ವಿಶಾಲಾಕ್ಷಿ ಮೃತ್ಯುಂಜಯ, ಎಂ.ಬಿ.ಶಾರದಮ್ಮ, ಎನ್.ಸರ್ವಮ್ಮ, ಗಾಯತ್ರಿ, ಅನಿತಾ ಇತರರು ಇದ್ದರು.
(ಕೋಟ್) ಕೊರೋನಾ ವೇಳೆ ಕೇಂದ್ರದ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಎಚ್.ಕೆ. ರಾಮಚಂದ್ರಪ್ಪ ಸೇರಿದಂತೆ ಅನೇಕರನ್ನು ನಾವು ಕಳೆದುಕೊಳ್ಳುವಂತಾಯಿತು. ದೇಶದ ಪ್ರಧಾನಿ ವೈಜ್ಞಾನಿಕ ಚಿಂತನೆಗಳನ್ನು ಬದಿಗೊತ್ತಿ, ತಟ್ಟೆ ಬಾರಿಸುವಂತೆ, ದೀಪ ಬೆಳಗುವುದೂ ಸೇರಿದಂತೆ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸಿದರು. ಇದೆಲ್ಲದರ ಪರಿಣಾಮ ದೇಶದಲ್ಲಿ ಲಕ್ಷಾಂತರ ಜನರು ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುವಂತಾಯಿತು.
- - -
ದಾವಣಗೆರೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ದಿ।। ಎಚ್.ಕೆ.ರಾಮಚಂದ್ರಪ್ಪ ಸ್ಮರಣೆ ಸಮಾರಂಭ ನಡೆಯಿತು.