ಸಮಾಜದ ಮೌಲ್ಯ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪಸರಿಸುವ ಶಕ್ತಿಯೇ ಮಹಿಳೆ: ಡಾ.ಬಿ.ಜಿ.ಕಲಾವತಿ

KannadaprabhaNewsNetwork |  
Published : Mar 08, 2026, 02:30 AM IST
ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮಹಿಳಾ ಸಪ್ತಾಹ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಾದ ಗೀತಾ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಮನುಷ್ಯ ಸಮಾಜದ ಅಭಿವೃದ್ಧಿ ಮತ್ತು ನಾಗರಿಕತೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಬಳ್ಳಾರಿ: ಮಹಿಳೆಯರ ಶಕ್ತಿ, ತ್ಯಾಗ, ಜ್ಞಾನದಿಂದ ಈ ಸಮಾಜ ಸುಂದರ ಮತ್ತು ಸಮೃದ್ಧಗೊಂಡಿದೆ ಎಂದು ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ, ಲೇಖಕಿ ಡಾ.ಬಿ.ಜಿ. ಕಲಾವತಿ ಅಭಿಪ್ರಾಯಪಟ್ಟರು.

ಇಲ್ಲಿನ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಮಹಿಳಾ ಸಪ್ತಾಹ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮನುಷ್ಯ ಸಮಾಜದ ಅಭಿವೃದ್ಧಿ ಮತ್ತು ನಾಗರಿಕತೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾನವ ಸಂಸ್ಕೃತಿಯ ಆರಂಭದಿಂದಲೇ ಮಹಿಳೆಯರು ಕುಟುಂಬ, ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದಾರೆ. ಮಹಿಳೆ ಕೇವಲ ಒಂದು ಕುಟುಂಬದ ಭಾಗವಾಗಿಯೇ ಅಲ್ಲ, ಸಮಾಜದ ಮೌಲ್ಯಗಳು, ಸಂಸ್ಕೃತಿ ಮತ್ತು ನೈತಿಕತೆಯನ್ನು ಮುಂದಿನ ತಲೆಮಾರಿಗೆ ಪಸರಿಸುವ ಪ್ರಮುಖ ಶಕ್ತಿಯಾಗಿದ್ದಾಳೆ. ಮೊದಲನೆಯದಾಗಿ, ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವನ್ನು ಗಮನಿಸಿದರೆ ಅವರ ಪ್ರಾಮುಖ್ಯತೆ ಸ್ಪಷ್ಟವಾಗುತ್ತದೆ. ಕುಟುಂಬವೇ ಸಮಾಜದ ಮೂಲ ಘಟಕವಾಗಿದ್ದು, ಆ ಘಟಕವನ್ನು ಸಮತೋಲನದಲ್ಲಿಡುವ ಪ್ರಮುಖ ಶಕ್ತಿ ಮಹಿಳೆಯೇ ಆಗಿದ್ದಾಳೆ. ತಾಯಿಯಾಗಿ ಮಹಿಳೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುತ್ತಾಳೆ. ತಾಯಿಯ ಮಮತೆ, ಕಾಳಜಿ ಮತ್ತು ಮಾರ್ಗದರ್ಶನದಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ದೃಷ್ಟಿಯಿಂದ ಮಹಿಳೆ ಕೇವಲ ಮಕ್ಕಳನ್ನು ಜನ್ಮನೀಡುವವಳಷ್ಟೇ ಅಲ್ಲ, ಅವರ ಜೀವನದ ಮೊದಲ ಗುರುವಾಗಿದ್ದಾಳೆ ಎಂದರಲ್ಲದೆ, ದುಡಿವ ಮಹಿಳೆಯರ ಸಾಧನೆಗಳನ್ನು ಗುರುತಿಸುವಂತಾಗಬೇಕು. ಮಹಿಳೆಯರು ಪ್ರಶ್ನಿಸುವ ಮನೋಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಟ್ಟೂರುಸ್ವಾಮಿ ಬಿಎಡ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಹಾಗೂ ವೈಚಾರಿಕ ಚಿಂತಕಿ ಸುಶೀಲಾ ಸಿರೂರು ಅವರು ಸಮಾಜದಲ್ಲಿ ಮಹಿಳಾ ಸ್ಥಾನಮಾನಗಳು, ಸಮಾನತೆಯ ವಿಚಾರದಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲುಗಳು ಹಾಗೂ ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆಗಬೇಕಾದ ಪೂರಕ ಕ್ರಮಗಳ ಕುರಿತು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರಜ್ಞಾ ಕೆ.ವಿ. ಅವರು ಮಾತನಾಡಿ, ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಾಮಾಜಿಕ ನಿರ್ಬಂಧನೆಗಳು ಮತ್ತು ಅಸಮಾನತೆಗಳನ್ನು ಎದುರಿಸುತ್ತಿರುವ ಮಹಿಳೆಯರ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡುವ ಉದ್ದೇಶದ ಜೊತೆಗೆ ಅನೇಕ ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಮಹಿಳೆಯರ ಬಗ್ಗೆ ತಿಳಿಸಿಕೊಡುವ ಆಶಯದಿಂದ ಮಹಿಳಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪೌರ ಕಾರ್ಮಿಕರಾದ ಗೀತಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿಗಳಾದ ಪಲ್ಲವಿ, ಮಾನ್ಯ, ಸುಚಿತ್ರಾ ಹಾಗೂ ಭಾವನಾ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇರಾನ್‌ ಮೇಲಿನ ದಾಳಿ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ
ಜನಪದ ಸಾಹಿತ್ಯ ಜೀವನ ಮೌಲ್ಯ, ಶ್ರಮ ಸಂಸ್ಕೃತಿಯ ಪ್ರತೀಕ: ರಾಮು ಮೂಲಗಿ