ರಾಮನಗರ: ಪೌರಾಣಿಕ ನಾಟಕಗಳಲ್ಲಿ ಮಹಿಳಾ ಕಲಾವಿದರು ಪುರುಷ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸುತ್ತಾರೆ. ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಗೌರಮ್ಮ ಹೇಳಿದರು.
ಮಹಿಳೆಯರು ಹಿಂದಿನಿಂದಲೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಾಣಿಕ ನಾಟಕಗಳಲ್ಲಿ, ಸಾಮಾಜಿಕ ನಾಟಕಗಳಲ್ಲಿ, ರಂಗಭೂಮಿಯಲ್ಲೂ ಸಹ ಉತ್ತಮವಾಗಿ ನಟಿಸಿ ಹೆಸರುಗಳಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆಯರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕ್ಷೇತ್ರಗಳೂ ಪುರುಷರಿಗಷ್ಟೇ ಸೀಮಿತವಲ್ಲ, ಮಹಿಳೆಯರೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡಬೇಕು ಎಂದರು.ಸಾಹಿತಿ ಎಸ್. ಸುಮಂಗಲ ಸಿದ್ದರಾಜು ಮಾತನಾಡಿ, ಮಹಿಳೆಯರು ನಾಟಕಗಳಲ್ಲಿ ಅಭಿನಯಿಸುವ ಜೊತೆಗೆ ನಾಟಕಗಳನ್ನು ರಚಿಸಿದ್ದಾರೆ, ನಿರ್ದೇಶಿಸಿದ್ದಾರೆ. ಮಹಿಳೆಯರು ರಚಿಸಿರುವ ಸಾಮಾಜಿಕ ನಾಟಕಗಳ ಸಂಖ್ಯೆಯೇ ಹೆಚ್ಚಾಗಿದೆ. ಸ್ತ್ರೀಶೋಷಣೆ, ಸಾಮಾಜಿಕ ಅಸಮಾನತೆ, ವರದಕ್ಷಿಣೆಯ ಪಿಡುಗು, ಹೆಣ್ಣು ಭ್ರೂಣಹತ್ಯೆ, ಪಾತಿವ್ರತ್ಯದ ಸಮಸ್ಯೆ, ಅವಲಂಬಿತ ಜೀವನ, ನಿರುದ್ಯೋಗ ಸಮಸ್ಯೆ ಹೀಗೆ ಇಂತಹ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ಮಹಿಳೆಯರು ಅನೇಕ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಶಾಂತಲಾ ಚಾರಿಬಟಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ ನಮ್ಮ ಹಿರಿಯರು ಪೌರಾಣಿಕ ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದರು ಜೊತೆಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು ಎಂದು ತಿಳಿಸಿದರು.
ಪಾತ್ರಗಳಿಗೆ ಜೀವತುಂಬುವ ಕಲೆಗಾರಿಕೆಗಾಗಿ ಐದಾರು ತಿಂಗಳುಗಳ ಕಾಲ ಅಭ್ಯಾಸ ಮಾಡಲಾಗಿರುತ್ತದೆ. ಪೌರಾಣಿಕ ನಾಟಕಗಳಲ್ಲಿ ಬರುವ ಒಂದೊಂದು ಪಾತ್ರಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ. ಮಹಿಳೆಯರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾಶಿವಣ್ಣ, ರಂಗ ನಿರ್ದೇಶಕ ಚಿರಂಜೀವಿ ಆರ್. ಲೋಕೇಶ್ವರ್, ಭಾರತ ವಿಕಾಸ ಪರಿಷದ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ವಸಂತ್ ಕುಮಾರ್, ತಾಲ್ಲೂಕು ಅಧ್ಯಕ್ಷ ಪಿ. ಗುರುಮಾದಪ್ಪ ಉಪಸ್ಥಿತರಿದ್ದರು.
ರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಭಾರತ್ ವಿಕಾಸ ಪರಿಷದ್ ಕಣ್ವ ಶಾಖೆಯ ಮಹಿಳಾ ತಂಡದ ರಂಗ ಕಲಾವಿದರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಹಿರಿಯ ಕಲಾವಿದೆ ಗೌರಮ್ಮ ಉದ್ಘಾಟಿಸಿದರು.