ಮಹಿಳೆಯರೇ, ಕಿರು ಉದ್ಯಮಗಳ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿ: ಕೆ.ಎಂ.ಉದಯ್

KannadaprabhaNewsNetwork |  
Published : Oct 07, 2026, 02:00 AM IST
6ಕೆಎಂಎನ್ ಡಿ13 | Kannada Prabha

ಸಾರಾಂಶ

ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ನೀರಿನ ಕೊರತೆ, ಬೆಲೆ ಕುಸಿತ ಸೇರಿದಂತೆ ಹಲವು ಸಂಕಷ್ಟಗಳ ನಡುವೆಯೂ ಮಹಿಳೆಯರು ಕುಟುಂಬಗಳನ್ನು ಧೈರ್ಯದಿಂದ ಮುನ್ನಡೆಸುತ್ತಿದ್ದಾರೆ. ಮನೆ ಕೆಲಸಗಳಿಗೆ ಸೀಮಿತರಾಗಿದ್ದ ಮಹಿಳೆಯರು ಇಂದು ಹೈನುಗಾರಿಕೆ, ಸ್ವಸಹಾಯ ಸಂಘಗಳು ಹಾಗೂ ಸ್ವಾವಲಂಬನಾ ಚಟುವಟಿಕೆಗಳ ಮೂಲಕ ಕುಟುಂಬದ ಆರ್ಥಿಕತೆಗೆ ಬಲ ತುಂಬುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತರಾಗದೆ ಸ್ವಸಹಾಯ ಸಂಘಗಳು, ಹೈನುಗಾರಿಕೆ, ಹೊಲಿಗೆ, ಕರಕುಶಲ ಹಾಗೂ ವಿವಿಧ ಕಿರು ಉದ್ಯಮಗಳ ಮೂಲಕ ಆರ್ಥಿಕ ಸ್ವಾವಲಂಬಿಗಳಾಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಸಮೀಪದ ಕೆ.ಶೆಟ್ಟಹಳ್ಳಿಯಲ್ಲಿ ತಾಲೂಕು ಪಂಚಾಯ್ತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಿರ್ಮಿಸಿರುವ ಸಂಜೀವಿನಿ ಮಹಿಳಾ ಭವನ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಶಿಸ್ತು, ತಾಳ್ಮೆ ಹಾಗೂ ಕ್ರಿಯಾಶೀಲತೆ ಕುಟುಂಬದ ಅಭಿವೃದ್ಧಿಯೊಂದಿಗೆ ಸಮಾಜದ ಪ್ರಗತಿಗೂ ಪ್ರಮುಖ ಕೊಡುಗೆ ನೀಡುತ್ತಿದೆ ಎಂದರು.

ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ನೀರಿನ ಕೊರತೆ, ಬೆಲೆ ಕುಸಿತ ಸೇರಿದಂತೆ ಹಲವು ಸಂಕಷ್ಟಗಳ ನಡುವೆಯೂ ಮಹಿಳೆಯರು ಕುಟುಂಬಗಳನ್ನು ಧೈರ್ಯದಿಂದ ಮುನ್ನಡೆಸುತ್ತಿದ್ದಾರೆ. ಮನೆ ಕೆಲಸಗಳಿಗೆ ಸೀಮಿತರಾಗಿದ್ದ ಮಹಿಳೆಯರು ಇಂದು ಹೈನುಗಾರಿಕೆ, ಸ್ವಸಹಾಯ ಸಂಘಗಳು ಹಾಗೂ ಸ್ವಾವಲಂಬನಾ ಚಟುವಟಿಕೆಗಳ ಮೂಲಕ ಕುಟುಂಬದ ಆರ್ಥಿಕತೆಗೆ ಬಲ ತುಂಬುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯರ ಪ್ರಯತ್ನವು ಗ್ರಾಮೀಣ ಆರ್ಥಿಕತೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲಾತಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಗ್ರಾಮಗಳ ಮೂಲ ಸೌಕರ್ಯ ಅಭಿವೃದ್ಧಿ, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸೇರಿದಂತೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರು ತಮ್ಮ ಅಮೂಲ್ಯ ಸಲಹೆ ಮತ್ತು ಸಹಕಾರ ನೀಡಬೇಕು ಎಂದರು.

ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ಮಹಿಳಾ ಒಕ್ಕೂಟವು ತಾಲೂಕಿನಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಒಕ್ಕೂಟವಾಗಿದೆ. ಕಳೆದ ಐದು ವರ್ಷಗಳಲ್ಲಿ 50 ಲಕ್ಷಕ್ಕೂ ಅಧಿಕ ವಹಿವಾಟು ನಡೆಸಿದ್ದು, ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸಿ ಶಿಸ್ತಿನಿಂದ ಮರುಪಾವತಿ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಹಿವಾಟನ್ನು 1 ಕೋಟಿಗೆ ವಿಸ್ತರಿಸುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒ ಎಚ್.ಎಂ.ಶಂಭುಲಿಂಗಯ್ಯ, ಕಾರ್ಯದರ್ಶಿ ಅರ್ಚನಾ, ಒಕ್ಕೂಟದ ಅಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷೆ ಮಹದೇವಮ್ಮ, ಖಜಾಂಚಿ ಶೋಭಾ, ಕಾರ್ಯದರ್ಶಿ ಪದ್ಮಮ್ಮ, ಯಮುನಾ ಸೇರಿದಂತೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಥಿಲಾವಸ್ಥೆಯಲ್ಲಿ ನೆಮ್ಮಾರು ಅಂಚೆ ಕಚೇರಿ!
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಆರೋಗ್ಯ ಕಾಪಾಡಿ: ಡಾ. ಸಿದ್ದರಾಮಯ್ಯ ಸಲಹೆ