ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಚಾರ್ತುಯುಗದ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಗೌರಿ-ಗಣೇಶನ ಹಬ್ಬದ ಅಂಗವಾಗಿ ನಡೆದ ಗೌರಿ ಪೂಜೆಯಲ್ಲಿ ಮಹಿಳೆಯರು ಭಾಗವಹಿಸಿ ವಿಶೇಷ ಪಾರ್ಥನೆ ಸಲ್ಲಿಸಿದರು.ದೇವಾಲಯದ ಮುಖ್ಯ ಅರ್ಚಕ ವಿದ್ಯಾ ಶಂಕರ್ ನೇತೃತ್ವದಲ್ಲಿ ದೇಗುಲದ ಮುಂಭಾಗದಲ್ಲಿ ಗೌರಿ ದೇವಿ ಮೂರ್ತಿಯನ್ನು ಪ್ರತಿಸ್ಥಾಪಿಸಿ ಅಲಂಕಾರ ಮಾಡಿ ವಿಶೇಷ ಪೂಜೆ ಕೈಗೊಂಡಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಮಾಡಿ ಭಕ್ತಿ ಭಾವ ಮೆರೆದರು.
ಇದೇ ವೇಳೆ ಮಹಿಳೆಯರಿಗೆ ಹರಿಷಿನ, ಕುಂಕುಮ, ಹೂವು, ಬಳೆ ನೀಡಿ ಮಹಾ ಮಂಗಳಾರತಿ ತೀರ್ಥ ನೀಡಿದರು. ದೇವಾಲಯದ ಪರಾಂಗಣದಲ್ಲಿ ಕುಳಿತ ಮಹಿಳೆಯರು ಪರಸ್ಪರ ಹೂವು ಬಳೆ ತೊಡಿಸಿ ಹಣೆಗೆ ಹರಿಷಿನ ಕುಂಕುಮದ ತಿಲಕವಿಟ್ಟು ಬಾಗಿನ ನೀಡುವ ಮೂಲಕ ಸನಾತನ ಸಂಸ್ಕೃತಿಯನ್ನು ಮೆರೆದರು.ಹಬ್ಬದ ಅಂಗವಾಗಿ ದೇವಾಲಯದಲ್ಲಿ ಮೂರು ದಿನಗಳ ಕಾಲ ಗೌರಿ ಪೂಜೆ, ಗಣೇಶ ಪ್ರತಿಸ್ಥಾಪನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತದೆ ಎಂದು ಅರ್ಚಕ ವಿದ್ಯಾಶಂಕರ್ ತಿಳಿಸಿದರು.ಸಂಚಾರಿ ವಾಹನಗಳಲ್ಲಿ ನೀರಿನ ಟ್ಯಾಂಕರ್ ಗಳ ವ್ಯವಸ್ಥೆ
ಕನ್ನಡಪ್ರಭ ವಾರ್ತೆ ಮಂಡ್ಯಪರಿಸರ-ಸ್ನೇಹಿ ಗಣೇಶ ವಿಸರ್ಜನೆಗಾಗಿ ಆ.27ರಂದು ನಗರದಲ್ಲಿ ಸಂಚಾರಿ ವಾಹನಗಳಲ್ಲಿ ನೀರಿನ ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿದೆ.
ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಪ್ರಯುಕ್ತ ಗೌರಿ ಹಾಗೂ ಗಣೇಶನ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಕೆರೆ/ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದೆ.ಪ್ರತಿಮೆಗಳ ವಿಸರ್ಜನೆಯಿಂದ ನೈಸರ್ಗಿಕ ಜಲಮೂಲಗಳಲ್ಲಿ ಜಲ ಮಾಲಿನ್ಯ ಉಂಟಾಗುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸದರಿ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ನಗರಸಭೆ, ಪುರಸಭೆಯಿಂದ ನಿಗಧಿ ಪಡಿಸಿದ ಸ್ಥಳಗಳಲ್ಲಿಯೇ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಲು ತಿಳಿಸಲಾಗಿದೆ.
ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂಧರ್ಭದಲ್ಲಿ ಹಸಿ ಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ ಅಲಂಕಾರಿ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ನಗರಸಭೆ/ ಪುರಸಭೆಯ ಕಸ ಸಂಗ್ರಹಣಾ ವಾಹನಕ್ಕೆ ನೀಡಲು ತಿಳಿಸಲಾಗಿದೆ.ಜಿಲ್ಲೆಯ ಸುಬಾಷ್ ನಗರ, ಅಶೋಕನಗರದಲ್ಲಿ ಸಂಜೆ 6 ರಿಂದ 7.30 ರವರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಗಾಂಧಿನಗರ, ನೆಹರುನಗರದಲ್ಲಿ ಸಂಜೆ 7.30 ರಿಂದ 9ರವರೆಗೆ ಹಾಗೂ ಕಲ್ಲಹಳ್ಳಿ (ವಿ.ವಿ.ನಗರ), ಬಂದೀಗೌಡ ಬಡಾವಣೆಯಲ್ಲಿ ರಾತ್ರಿ 9 ರಿಂದ 10.30 ರವರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕಾಗಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ-9008839505/ 9742345840 / 9945767878 ಮತ್ತು 9110485475 ಅನ್ನು ಸಂಪರ್ಕಿಸಲು ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.