ಗದಗ: ಮಹಿಳಾ ಸಬಲೀಕರಣ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಹಾಗೂ ಜವಾಬ್ದಾರಿಯುತ ನಾಗರಿಕಪ್ರಜ್ಞೆ ಇಂದಿನ ಸಮಾಜದ ಪ್ರಮುಖ ಅಗತ್ಯಗಳಾಗಿದ್ದು, ಇವುಗಳ ಸಮನ್ವಯದಿಂದಲೇ ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾಗೂ ಚಿಂತಕ ಗೋಪಿ ಜಿ. ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಶಕ್ತಿ, ತ್ಯಾಗ, ಸೇವೆ ಮತ್ತು ಸೃಜನಶೀಲತೆಯ ಪ್ರತೀಕವಾಗಿ ಕಾಣಲಾಗುತ್ತದೆ. ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ, ರಕ್ಷಣಾ ಕ್ಷೇತ್ರ ಸೇರಿದಂತೆ ಎಲ್ಲ ವಲಯಗಳಲ್ಲೂ ಮಹಿಳೆಯರು ಸಾಧನೆಯ ಹೊಸ ಅಧ್ಯಾಯಗಳನ್ನು ಬರೆಯುತ್ತಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ ಎಂದರು.
ಮಹಿಳೆಯರ ವಿರುದ್ಧದ ಹಿಂಸೆ, ಲಿಂಗ ತಾರತಮ್ಯ, ವರದಕ್ಷಿಣೆ, ಬಾಲ್ಯವಿವಾಹ ಹಾಗೂ ಆರ್ಥಿಕ ಅಸಮಾನತೆಗಳಂತಹ ಸಮಸ್ಯೆಗಳು ಇನ್ನೂ ಮುಂದುವರಿದಿರುವುದು ಕಳವಳಕಾರಿ ಸಂಗತಿಯಾಗಿದೆ. ಮಹಿಳಾ ಸಬಲೀಕರಣ ಕೇವಲ ಕಾನೂನುಗಳ ಮೂಲಕ ಸಾಧ್ಯವಲ್ಲ, ಸಮಾಜದ ಮನೋಭಾವದಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿದಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ ಎಂದರು.ನಾಗರಿಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಅವರು, ಮನೆ ಹೇಗೆ ನಮ್ಮದೇ ಎಂಬ ಭಾವನೆಯಿಂದ ಕಾಪಾಡಿಕೊಳ್ಳುತ್ತೇವೆಯೋ, ಅದೇ ರೀತಿ ಸಮಾಜ ಮತ್ತು ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸಂಚಾರ ನಿಯಮಗಳ ಪಾಲನೆ, ಸ್ವಚ್ಛತೆ, ಸಾರ್ವಜನಿಕ ಆಸ್ತಿಗಳ ರಕ್ಷಣೆ ಹಾಗೂ ಸಾಮಾಜಿಕ ಕರ್ತವ್ಯಗಳ ನಿರ್ವಹಣೆ ಉತ್ತಮ ನಾಗರಿಕತೆಯ ಲಕ್ಷಣಗಳಾಗಿವೆ ಎಂದರು.