ಸಮಾನ ಅವಕಾಶದಿಂದ ಮಹಿಳಾ ಸಬಲೀಕರಣ: ಪ್ರೊ.ವಿಜಯಾ ಕೋರಿಶೆಟ್ಟಿ

KannadaprabhaNewsNetwork |  
Published : Mar 08, 2026, 03:00 AM IST
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ವಿವಿಯಲ್ಲಿ ಮ್ಯಾರಥಾನ್ | Kannada Prabha

ಸಾರಾಂಶ

ವಿಜಯಪುರಮಹಿಳೆ ಮತ್ತು ಪುರುಷರು ಸಮಾನರು, ಮಹಿಳೆಯರಿಗೆ ಸಮಾನ ಹಕ್ಕುಗಳು, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳೆ ಮತ್ತು ಪುರುಷರು ಸಮಾನರು, ಮಹಿಳೆಯರಿಗೆ ಸಮಾನ ಹಕ್ಕುಗಳು, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ-2026 ಪ್ರಯುಕ್ತ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಮಹಿಳೆಯರು ಪೈಲಟ್‌ಗಳಿಂದ ಹಿಡಿದು ಕ್ರೀಡಾ ಕ್ಷೇತ್ರದವರೆಗೆ ವಿವಿಧ ವಲಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಸಾಧನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳೆ ಅಬಲೆ ಅಲ್ಲ, ಅವಳು ಸಬಲೆ. ಮಹಿಳೆ ಮನಸು ಮಾಡಿದರೆ ಯಾವುದೇ ಕಾರ್ಯವನ್ನೂ ಸಾಧಿಸುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ, ಆ ಸಾಧನೆಗೆ ಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ಮನೆಯಲ್ಲಿಯೇ ಆರಂಭವಾಗಬೇಕು. ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಮಹಿಳೆಯರು ಶಕ್ತಿಶಾಲಿಗಳಾಗಿ ಸಮಾಜದಲ್ಲಿ ಮುನ್ನಡೆಯಲು ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮಹಿಳೆಯರು ತಮ್ಮ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದರು.

ವಿವಿ ಸಿಂಡಿಕೇಟ್ ಸದಸ್ಯ ಡಾ.ಶಿವಯೋಗೆಪ್ಪ ಮಾಡ್ಯಾಳ ಮಾತನಾಡಿ, ಸಮಾಜದಲ್ಲಿ ಸಮಾನತೆ ಹಾಗೂ ಮಹಿಳೆಯರ ದೈಹಿಕ ಆರೋಗ್ಯವನ್ನು ಉತ್ತೇಜಿಸಲು ಮ್ಯಾರಥಾನ್‌ನಂತಹ ಕಾರ್ಯಕ್ರಮಗಳು ಅಗತ್ಯ. ಕ್ರೀಡಾ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ದೈಹಿಕ ಶಕ್ತಿ ಮತ್ತು ಮಾನಸಿಕ ದೃಢತೆ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಮೌಲ್ಯಮಾಪನ ಕುಲಸಚಿವ ಬಿ.ಎಲ್.ಲಕ್ಕಣ್ಣನವರ ಮಾತನಾಡಿ, ಮಹಿಳಾ ಸಬಲೀಕರಣದಲ್ಲಿ ಪುರುಷರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಸಬಲೀಕರಣ ಎಂಬುದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದ ವಿಷಯವಲ್ಲ, ಅದು ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಮ್ಯಾರಥಾನ್‌ನಲ್ಲಿ ಮಹಿಳಾ ವಿವಿ ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ವಿವಿ ಸಿಂಡಿಕೇಟ್ ಸದಸ್ಯರಾದ ಬಸವರಾಜ ಸೈದಾಪೂರ, ನಾಗೇಂದ್ರ ಬಿರಾದಾರ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಮೀರ್‌.ಎಮ್.ಎಚ್, ತೊರವಿ ಕೆನರಾ ಬ್ಯಾಂಕ್ ಶಾಖೆ ಮ್ಯಾನೇಜರ್‌ ಬುಕ್ಯಾ ವೀರು, ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ.ಲಕ್ಷ್ಮೀದೇವಿ.ವೈ, ಪ್ರೊ.ಜಿ.ಜಿ.ರಜಪೂತ, ಪ್ರೊ.ಪಿ.ಜಿ.ತಡಸದ, ಪ್ರೊ.ನಾಮದೇವ ಗೌಡ, ಪ್ರೊ.ಶಾಂತಾದೇವಿ.ಟಿ, ಪ್ರೊ.ಸಕ್ಪಾಲ್ ಹೂವಣ್ಣ, ಪ್ರೊ.ಶ್ರೀನಿವಾಸ, ಡಾ.ಜ್ಯೋತಿ ಅವಟಿ, ಪ್ರೊ.ಜ್ಯೋತಿ ಉಪಾಧ್ಯೆ, ಪ್ರೊ.ರಾಜಕುಮಾರ ಮಾಲಿಪಾಟೀಲ, ಡಾ.ಕಿರಣ.ಜಿ.ಎನ್, ಪ್ರೊ.ಹನುಮಂತಯ್ಯ ಪೂಜಾರಿ, ಪ್ರೊ.ಯು.ಕೆ.ಕುಲಕರ್ಣಿ, ಡಾ.ಚಂದ್ರಶೇಖರ ಮಠಪತಿ, ಪ್ರೊ.ರಾಜು ಎಸ್, ಬಾಗಲಕೋಟೆ, ಜೋಯ್ ಹೋಸಕೇರಿ, ವಿವಿಧ ನಿಕಾಯಗಳ ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸಮಾಜ ಎಂಬ ರಥಕ್ಕೆ ಮಹಿಳೆ ಮತ್ತು ಪುರುಷರು ಎರಡು ಗಾಲಿಗಳಂತಿದ್ದಾರೆ. ಒಂದು ಗಾಲಿ ಕುಂಠಿತವಾದರೂ ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯವಾಗುವುದಿಲ್ಲ. ಆದ್ದರಿಂದ, ಹೆಣ್ಣುಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಅತ್ಯಗತ್ಯ. ಮಹಿಳೆಯರು ಕೇವಲ ಸೌಂದರ್ಯದ ಸಂಕೇತವಲ್ಲ, ಅವರು ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕವೂ ಆಗಿದ್ದಾರೆ. ಅವರಿಗೆ ಸಮರ್ಪಕ ಅವಕಾಶಗಳು ದೊರೆತರೆ ಅವರು ಆಕಾಶವನ್ನೂ ಮುಟ್ಟುವಷ್ಟು ಸಾಧನೆ ಮಾಡಬಲ್ಲರು.

ಪ್ರೊ.ವಿಜಯಾ ಕೋರಿಶೆಟ್ಟಿ, ಮಹಿಳಾ ವಿವಿಯ ಕುಲಪತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ
ಕವಿಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ: ಎ.ಎಂ. ಕಂಬಾರ