ಹಗರಿಬೊಮ್ಮನಹಳ್ಳಿ: ಜಗತ್ತಿನಲ್ಲಿ ಭಾರತ ಬಿಟ್ಟರೆ ಬೇರಾವ ದೇಶದಲ್ಲಿಯೂ ಮಹಿಳೆಯರನ್ನು ಗೌರವಿಸುವ ಹಾಗೂ ಪೂಜಿಸುವ ಸಂಸ್ಕೃತಿ ಕಾಣುವುದಿಲ್ಲ. ಹೆಣ್ಣಿಗೆ ಪವಿತ್ರವಾದ ಮಾತೃ ಸ್ಥಾನ ನೀಡಲಾಗಿದೆ. ಪುರುಷರು, ಹೆಣ್ಣು ಮಕ್ಕಳನ್ನು ಕಣ್ಣಿರು ಸುರಿಸದಂತೆ ನೋಡಿಕೊಳ್ಳುವ ಮೂಲಕ ಗೌರವ ಸಲ್ಲಿಸಿ ಎಂದು ಶಾಸಕ ನೇಮಿರಾಜ್ ನಾಯ್ಕ ಕಿವಿಮಾತು ಹೇಳಿದರು.
ಹೆಣ್ಣು ಸಂಸ್ಕಾರದ ಪ್ರತೀಕವಾಗಿದ್ದಾಳೆ. ಎಲ್ಲವನ್ನೂ ಪೊರೆಯುವ ಅಗಾಧ ಶಕ್ತಿ ಹೆಣ್ಣ ಮಕ್ಕಳಲ್ಲಿ ಮಾತ್ರ ಇದೆ. ನಮ್ಮ ನಾಡನ್ನು ಸಂಸ್ಕಾರಯುತ ನಾಡನ್ನಾಗಿ ರೂಪಿಸಿದ ಅನೇಕ ಮಹಿಳೆಯರನ್ನು ನಾವು ಚರಿತ್ರಯುದ್ದಕ್ಕೂ ಕಾಣಬಹುದಾಗಿದೆ ಎಂದು ಪ್ರತಿಪಾದಿಸಿದರು.
ಇಂದು ನಡೆದಿರುವ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡಿರುವ ಪ್ರತಿ ಮಹಿಳೆಯೂ ದೇವಿ ಶಕ್ತಿಯ ಸ್ವರೂಪ ಎಂದು ಬಣ್ಣಿಸಿದ ಅವರು, ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಇರುತ್ತಾರೋ ಆ ಮನೆಯು ಶಾಂತಿಯ ಧಾಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಮಾಜದ ಸಮುದಾಯ ಭವನಕ್ಕಾಗಿ ₹೨೫ಲಕ್ಷ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆಗೊಳಿಸಿ ಈ ವರ್ಷಾಂತ್ಯದಲ್ಲಿ ಸಹಸ್ರಾರ್ಜುನ ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜದ ಅಧ್ಯಕ್ಷ ದೀಪಕ್ ಕಠಾರೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಾಲಶಂಕರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯುವ ಘಟಕದ ರಾಕೇಶ್ ಭಾವಿಕಟ್ಟಿ, ಧನರಾಜ್ ಮೇಘರಾಜ್ ಮತ್ತು ಪ್ರಮೋದ್ ಆರ್.ಮೇಘರಾಜ್ ನಿರ್ವಹಿಸಿದರು.