ರಸ್ತೆ ದುರಸ್ತಿ ಮಾಡುವಂತೆ ಕನಕಪುರದಲ್ಲಿ ಮಹಿಳೆಯರ ಆಗ್ರಹ

KannadaprabhaNewsNetwork |  
Published : Oct 27, 2025, 12:00 AM IST
ಕೆ ಕೆ ಪಿ ಸುದ್ದಿ 02:ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯ ರಿಂದ ಪ್ರತಿಭಟನೆ.  | Kannada Prabha

ಸಾರಾಂಶ

ಲಾರಿ, ಟಿಪ್ಪರ್ ವಾಹನಗಳ ಸಂಚಾರದಿಂದ ರಸ್ತೆ ಮತ್ತು ಅದರಲ್ಲಿನ ಮ್ಯಾನ್ ಹೋಲ್‌ಗಳು ಹಾಳಾಗುತ್ತಿವೆ ಎಂದು ಆರೋಪಿಸಿ ಮಹಿಳೆಯರು ರಸ್ತೆಗೆ ಅಡ್ಡಲಾಗಿ ಕಲ್ಲಿಟ್ಟು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಲಾರಿ, ಟಿಪ್ಪರ್ ವಾಹನಗಳ ಸಂಚಾರದಿಂದ ರಸ್ತೆ ಮತ್ತು ಅದರಲ್ಲಿನ ಮ್ಯಾನ್ ಹೋಲ್‌ಗಳು ಹಾಳಾಗುತ್ತಿವೆ ಎಂದು ಆರೋಪಿಸಿ ಮಹಿಳೆಯರು ರಸ್ತೆಗೆ ಅಡ್ಡಲಾಗಿ ಕಲ್ಲಿಟ್ಟು ಪ್ರತಿಭಟನೆ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ಹಿಂಭಾಗದ ಭುವನೇಶ್ವರಿ ನಗರದ 6ನೇ ತಿರುವು ರಸ್ತೆಯಲ್ಲಿ ಕಲ್ಲುಗಳೆನಿಟ್ಟು ಅಡ್ಡ ಲಾಗಿ ನಿಂತು, ಲಾರಿ, ಟಿಪ್ಪರ್ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಮಹಿಳೆಯರು ಭುವನೇಶ್ವರಿ ನಗರದ ಪಕ್ಕದಲ್ಲಿ ಇರುವಂತಹ ಖಾಸಗಿ ಲೇಔಟ್‌ನಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ಸಾಮಗ್ರಿಗಳನ್ನು ಭಾರಿ ಗಾತ್ರದ ಟಿಪ್ಪರ್ ಮತ್ತು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿರುವ ಕಾರಣದಿಂದ ರಸ್ತೆ ಹಾಳಾಗುತ್ತಿವೆ ಎಂದು ಪಾರ್ವತಮ್ಮ, ಚೈತ್ರ, ಲಕ್ಷ್ಮಮ್ಮ, ಸರಸ್ವತಿ, ಮಂಜುಳಾ, ರಮ್ಯ,ಸೌಭಾಗ್ಯಮ್ಮ ಸೇರಿದಂತೆ ಹಲವರು ಆರೋಪಿಸಿದರು.

ನಿಯಮಬಾಹಿರವಾಗಿ ಟಿಪ್ಪರ್‌ಗಳು ಕಲ್ಲು, ಮರಳು, ಇಟ್ಟಿಗೆಯನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ಚರಂಡಿಗಳು, ಒಳಚರಂಡಿ ಮ್ಯಾನ್ ಹೋಲ್ ಗಳು ನಾಶವಾಗಿವೆ,ಅದನ್ನು ಸರಿಪಡಿಸುವಂತೆ ನಗರಸಭೆಯವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ರಿಪೇರಿ ಮಾಡಿಸುತ್ತಿಲ್ಲ, ರಸ್ತೆಯಲ್ಲಿ ಚರಂಡಿ ಮತ್ತು ಮ್ಯಾನ್ ಹೋಲ್‌ಗಳು ಹಾಳಾಗಿರುವುದರಿಂದ ಮನೆಯ ತ್ಯಾಜ್ಯದ ನೀರು, ಒಳಚರಂಡಿಯ ನೀರು ರಸ್ತೆಯಲ್ಲಿ ಹರಿದು ಗಬ್ಬು ವಾಸನೆ ಹೊಡೆಯುತ್ತಿದ್ದು ಇಲ್ಲಿ ಜನ ವಾಸ ಮಾಡುವುದು ತುಂಬಾ ಕಷ್ಟವಾಗುತ್ತಿದೆ, ಆದರೂ ನಮ್ಮ ಸಮಸ್ಯೆಯನ್ನು ಯಾರು ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಬಡಾವಣೆ ಜನ ಈ ರಸ್ತೆಯಲ್ಲಿ ಹೋಗುವುದನ್ನು ನಾವು ಬೇಡ ಎನ್ನುವುದಿಲ್ಲ, ಆದರೆ ಲಘು ವಾಹನಗಳು ಓಡಾಡುವ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿ, ಟಿಪ್ಪರ್ ಓಡಾಡುತ್ತಿರುವುದರಿಂದ ನಮ್ಮ ರಸ್ತೆಗಳು ಹಾಳಾಗುತ್ತಿವೆ, ನಗರ ಸಭೆಯವರು ಹಾಳಾಗಿರುವ ರಸ್ತೆಯನ್ನು ಸರಿ ಪಡಿಸಬೇಕು ಇಲ್ಲವೇ ಭಾರಿ ಗಾತ್ರದ ಓವರ್ ಲೋಡ್ ತುಂಬಿಕೊಂಡು ಹೋಗುವ ಲಾರಿ, ಟಿಪ್ಪರ್ ಗಳ ಓಡಾಟ ನಿಲ್ಲಿಸಬೇಕು, ನಮ್ಮ ಸಮಸ್ಯೆ ಪರಿಹರಿಸುವ ತನಕ ನಾವು ಈ ರಸ್ತೆಯಲ್ಲಿ ಲಾರಿ ಟಿಪ್ಪರ್‌ಗಳನ್ನು ಓಡಾಡಲು ಬಿಡುವುದಿಲ್ಲ ಎಂದು ಒಂದು ಗಂಟೆಗೂ ಹೆಚ್ಚಿನ ಕಾಲ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಹಿಳೆ ಯರ ಅಹವಾಲು ಸ್ವೀಕರಿಸಿ ಹಾಳಾಗಿರುವ ಚರಂಡಿಯನ್ನು ನಗರಸಭೆಯಿಂದ ರಿಪೇರಿ ಮಾಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!