ಚಿತ್ರದುರ್ಗ: ಮೋದಿ 5300 ಕೋಟಿ ರು. ಕೊಡ್ತೀನಿ ಅಂದು ಮೋಸ ಮಾಡಿದ್ರಪ್ಪೋ...! ಮೋದಿ ಕೊಡ್ತಾರೆ ಅಂತ ಸಿದ್ದರಾಮಣ್ಣ ಕಣ್ ಮುಚ್ಚಿ ಕುಳಿತರೆ ಏನು ಮಾಡೋಣ್ರಪ್ಪೋ...! ದೇಶದಾಗೆ ನೀವಿಬ್ಬರೇ ಬದುಕಿ ಉಳಿದವರು ಸತ್ತು ಹೋಗಬೇಕೇನ್ರಪ್ಪೋ...?
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಂಭಾಗ ಹೊಳಲ್ಕೆರೆ ತಾಲೂಕಿನ ಈಚಗಟ್ಟ ಗ್ರಾಮದ ರೈತ ಮಹಿಳೆಯರು ಪ್ರಾಸಬದ್ಧವಾಗಿ ಅಬ್ಬರಿಸಿಕೊಂಡು ಕಣ್ಣೀರು ಹಾಕಿದ ಬಗೆಯಿದು. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತ ಸಂಘದವತಿಯಿಂದ ಜಿಲ್ಲಾ ಪಂಚಾಯಿತಿ ಮುಂಭಾಗ ಹಮ್ಮಿಕೊಂಡಿರುವ ಧರಣಿ 19ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ವಿನೂತನ ಅಳುವ ಚಳವಳಿ ನಡೆಸಿದರು.800 ಅಡಿ ಕೊರೆದರೂ ನೀರು ಸಿಗುತ್ತಿಲ್ಲ, ಕುಡಿಯೋಕೂ ನೀರಿಲ್ಲ, ತೋಟಗಳನ್ನೆಲ್ಲ ಕಡಿಯುತ್ತಿದ್ದೇವೆ. ವಿಷ ಕುಡಿದು ಸಾಯುವ ಪರಿಸ್ಥಿತಿ ಬಂದಿದೆ ಎಂದು ಬಿಕ್ಕಿ ಬಿಕ್ಕಿ ಅತ್ತರು. ಇದ್ರೂ ಒಂದೇ ಸತ್ರೂ ಒಂದೇ ಅನ್ನೋ ಥರ ಆಗೈತೆ ನಮ್ಮ ಬದುಕು. ನಮ್ಮನ್ನು ಸಾಯಿಸಬೇಡ್ರಪ್ಪೋ, ನೀರು ಕೊಟ್ಟು ಬದುಕಿಸಿ ಎಂದು ಗೋಗರೆದರು. ನೀವು ನೀರು ಕೊಡಿ ಸಾಕು, ನಾವು ಬೆಳೆ ಬೆಳೆದು ನಿಮಗೆ ಅನ್ನ ಕೊಡ್ತೇವೆ ಎಂದು ವಿನಂತಿಸಿದರು.
ನಮಗೆ ಸರ್ಕಾರದ ಯಾವ ಗ್ಯಾರೆಂಟಿಗಳೂ ಬೇಡ, ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಲೋಕಸಭೆ ಚುನಾವಣೆ ಬಂದೈತಿ, ಮೂರು ತಿಂಗಳೊಳಗೆ ನೀರು ಕೊಡದಿದ್ದರೆ ವೋಟೂ ಹಾಕಲ್ಲ, ನಿಮ್ಮನ್ನು ಊರೊಳಗೆ ಬಿಟ್ಟುಕೊಳ್ಳೋದಿಲ್ಲವೆಂದು ಕಾಂಗ್ರೆಸ್, ಬಿಜೆಪಿ ಮೇಲೆ ಆಕ್ರೋಶದ ಮಳೆಗರೆದರು. ಮೊಳಕಾಲ್ಮುರು ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಇದೇ ವೇಳೆ ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.ಈ ವೇಳೆ ಮಾತನಾಡಿದ ಶ್ರೀಗಳು ಭದ್ರಾ ಮೇಲ್ದಂಡೆ ಜಾರಿ ವಿಚಾರದಲ್ಲಿ ರೈತರ ಸತಾಯಿಸಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ಜಗತ್ತಿಗೆ ಅನ್ನಕೊಡುವ ರೈತನಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಕಳೆದ 19 ದಿನಗಳಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಗಮನ ಹರಿಸದಿರುವುದು ನೋವಿನ ಸಂಗತಿ. ಮಠದಲ್ಲಿ ಅನ್ನ ದಾಸೋಹ ನಡೆಯಲಿಕ್ಕೆ ರೈತರು ಭತ್ತ ಬೆಳೆದುಕೊಡುತ್ತಾರೆ. ಅದಕ್ಕಾಗಿ ಮಠಾಧೀಶರುಗಳು ಇಂತಹ ಹೋರಾಟಗಳಿಗೆ ಬೆಂಬಲ ಸೂಚಿಸಬೇಕೆಂದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಈ ಜಿಲ್ಲೆಯ ಪ್ರತಿ ರೈತನ ಜಮೀನಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಚುನಾವಣೆ ಸಂದರ್ಭದಲ್ಲಿ ಹಳ್ಳಿಗಳಿಗೆ ರಾಜಕಾರಣಿಗಳು ಹೇಗೆ ಕಾಲಿಡ್ತೀರಿ ನೋಡೋಣ ಎಂದು ಎಚ್ಚರಿಸಿದರು. ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ, ರವಿಕುಮಾರ್, ರೈತ ಮಹಿಳೆಯರಾದ ನಿಂಗಮ್ಮ, ಶಿವಮ್ಮ, ಪ್ರೇಮಕ್ಕ, ಮೀನಾಕ್ಷಿ, ಶೈಲ, ಅನ್ನಪೂರ್ಣ, ಗಾಯತ್ರಿ, ರತ್ನಮ್ಮ, ಪಾರ್ವತಮ್ಮ, ಅಂಜಿನಮ್ಮ, ಭಾರತಮ್ಮ, ಮಂಜಮ್ಮ, ನೇತ್ರ, ಗಂಗಮ್ಮ, ಗೌರಮ್ಮ, ಶಂಕರಮ್ಮ, ಸಾಕಮ್ಮ, ಕಮಲಮ್ಮ ಅಳುವ ಚಳವಳಿಯಲ್ಲಿ ಪಾಲ್ಗೊಂಡಿದ್ದರು.