ಕನ್ನಡಪ್ರಭ ವಾರ್ತೆ ಮಂಡ್ಯಸಮ ಸಮಾಜ ನಿರ್ಮಾಣವಾಗಬೇಕಾದರೆ ಹೆಣ್ಣು ಎಲ್ಲ ರೀತಿಯಲ್ಲೂ ಸದೃಢಳಾಗಬೇಕು. ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಅವಶ್ಯವಿದೆ ಎಂದು ಮೈಸೂರಿನ ಚಿಂತಕಿ ಸವಿತಾ ಪಾ.ಮಲ್ಲೇಶ್ ಹೇಳಿದರು.
ದೇಶ ಸ್ವಾತಂತ್ರ್ಯಗೊಂಡ ದಿನದಿಂದಲೂ ಹೆಣ್ಣನ್ನು ಬಲಗೊಳಿಸುವುದಕ್ಕೆ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಈ ಯೋಜನೆಗಳ ಬಗ್ಗೆ ನಮಗೆ ಮೊದಲು ಅರಿವಿರಬೇಕು. ಕುಟುಂಬದಲ್ಲಿ ಹೆಣ್ಣಿಗೆ ಯಾವ ರೀತಿಯ ಸಮಾನತೆ ಇದೆ. ಹೆಣ್ಣಿಗೆ ಸಂಕೋಲೆ ಹಾಕಿದವರು ಯಾರು ಎನ್ನುವುದನ್ನು ಅರಿಯಬೇಕು. ಕೌಟುಂಬಿಕ ಕೆಲಸಗಳಿಗೆ ಮಾತ್ರವೇ ಮಹಿಳೆಯರನ್ನು ತಯಾರಿ ಮಾಡುತ್ತಿರುವ ಧೋರಣೆಯನ್ನು ಬದಲಾಯಿಸುವ ಮನಸ್ಸು ನಮ್ಮದಾಗಬೇಕು. ಮನಸ್ಸು ಪರಿವರ್ತನೆಯಾಗದಿದ್ದರೆ ನಮ್ಮ ಮಾತು ವ್ಯರ್ಥ ಎಂದು ನುಡಿದರು.
ಹೆಣ್ಣನ್ನು ದೇವತೆ ಎಂದು ಹೊಗಳುವುದು ಬೇಡ. ಧಾರಾವಾಹಿಗಳು ಕೂಡ ಹೆಣ್ಣಿನ ಬದುಕನ್ನು ಪುರುಷನಿಗೆ ಅಡಿಯಾಳಾಗಿರುವುದನ್ನೇ ಬಿಂಬಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಹೆಣ್ಣು ಮಕ್ಕಳು ಯುದ್ಧಭೂಮಿಯಿಂದ ಹಿಡಿದು ವಿಮಾನ ನಡೆಸುವವರೆಗೂ ಸಾಧನೆ ಮೆರೆದಿದ್ದಾರೆ. ಆದರೂ ಇಂದಿಗೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ವಿಷಾದಿಸಿದರು.ಉದ್ಯೋಗ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ. ಹೆಣ್ಣಿನ ಜಾತಿಯನ್ನು ಕೀಳರಿಮೆಯಿಂದ ಕಾಣುವುದು, ಹೆಣ್ಣು ಮಕ್ಕಳನ್ನು ಸಿನಿಮಾದಲ್ಲಿ ಬಿಂಬಿಸುವ ರೀತಿ ನೋವುಂಟು ಮಾಡುತ್ತದೆ. ಮಣಿಪುರದ ಘಟನೆ ಅತ್ಯಂತ ಸಂಕಟವನ್ನು ತರಿಸುತ್ತದೆ. ದ್ವೇಷ ಸಾಧಿಸಲು ಹೆಣ್ಣಿನ ಮೇಲೆ ಅತ್ಯಾಚಾರವೆಸಗುವುದು ದುರಂತ. ಇವತ್ತು ಮಠಗಳೇ ಹೆಣ್ಣಿನ ಶೋಷಣೆ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಧರ್ಮದ ಬೇರುಗಳಲ್ಲಿ ಹೆಣ್ಣಿನ ಶೋಷಣೆಯ ಮೂಲ ನೆಲೆಗಳಿವೆ ಎಂದು ಬೇಸರದಿಂದ ನುಡಿದರು.
ಹೆಣ್ಣಿಗೆ ಸಾಮಾಜಿಕ ಸ್ವಾತಂತ್ರ್ಯದ ಅಗತ್ಯವಿದೆ. ಆರ್ಥಿಕ, ಕೌಟುಂಬಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಯಾವಾಗ ಹೆಣ್ಣು ಸಬಲಳಾಗುತ್ತಾಳೋ ಆಗ ಅವಳು ಪೂರ್ಣ ಸ್ವಾತಂತ್ರ್ಯಳಾಗುತ್ತಾಳೆ ಎಂದು ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರೊ.ಬಿ.ಜಯಪ್ರಕಾಶಗೌಡ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ, ಪ್ರೊ.ಅನಿತಾ ಸಂವಾದದಲ್ಲಿ ಉಪಸ್ಥಿತರಿದ್ದರು. ಪ್ರೊ.ಶ್ರೀದೇವಿ , ಪ್ರೊ,ಶ್ರೀಲತಾ, ನಂದಿನಿ ಜಯರಾಮ್, ಮಂಜುಳಾ ಜಯಪ್ರಕಾಶ್, ಪ್ರೊ.ಎಸ್.ಬಿ.ಶಂಕರೇಗೌಡ, ಸುಜಾತ ಕೃಷ್ಣ ಇತರರಿದ್ದರು.