ಕನ್ನಡಪ್ರಭ ವಾರ್ತೆ ಬೀದರ್
ನನ್ನ ವಿರುದ್ಧ ನಿಂತು ಸೋತು ಸುಣ್ಣವಾಗಿರುವ ಸಚಿವ ಈಶ್ವರ ಖಂಡ್ರೆ ಇದೀಗ ಪುತ್ರನನನ್ನು ಕಣಕ್ಕಿಳಿಸಿದ್ದರೂ ನಾಮ್‌ಕೆ ವಾಸ್ತೆ ಎಂಬಂತಿದೆ ಎಂದು ಲೋಕಸಭೆ ಬಿಜೆಪಿ ಘೋಷಿತ ಅಭ್ಯರ್ಥಿ ಸಂಸದ ಭಗವಂತ ಖೂಬಾ ಲೇವಡಿ ಮಾಡಿದರು.ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರ ಖಂಡ್ರೆ ನನ್ನ ವಿರುದ್ಧ ಮತ್ತೊಮ್ಮೆ ಸ್ಪರ್ಧಿಸುವ ಧೈರ್ಯ ಮಾಡಲಿಲ್ಲ. ಅವರಲ್ಲಿ 60 ವರ್ಷದ ಪಾಪದ ಭಂಡಾರ ತುಂಬಿದೆ. ನಮ್ಮಿಬ್ಬರ ಮಧ್ಯದ ಈ ಚುನಾವಣೆ ಉತ್ತಮ ಆಡಳಿತಗಾರ ಹಾಗೂ ಭ್ರಷ್ಟ ಆಡಳಿತಗಾರನ ಮಧ್ಯದ ಚುನಾವಣೆಯಾಗಲಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ 9 ತಿಂಗಳು ಉಸ್ತುವಾರಿ ಸಚಿವರಾಗಿ ಭ್ರಷ್ಟ ಆಡಳಿತ ನಡೆಸಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಗ್ರೂಪ್- ಡಿ ನೌಕರರನ್ನು ತೆಗೆದು ಹಾಕುವ ಮೂಲಕ ದ್ವೇಷದ ರಾಜಕಾರಣ ಮಾಡಿದರು. ಕೆಕೆಆರ್‌ಡಿಬಿ ಹಣ ಹಂಚಿಕೆಯನ್ನೂ ತಮಗೆ ಹೆಚ್ಚು ಕಮಿಷನ್ ಬರುವ ಕ್ಷೇತ್ರಕ್ಕೆ ನೀಡಿದರು. ಇದೀಗ ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣದ ಹೊಳೆ ಹರಿಸಲು ಹೊರಟಿದ್ದಾರೆ ಎಂದು ಭಗವಂತ ಖೂಬಾ ಆರೋಪಿಸಿದರು.ಕಳೆದ 8 ತಿಂಗಳಿಂದ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿ, ಹಳ್ಳಿಯಲ್ಲೂ 15 ಕೋಟಿ ರು.ಗಳಷ್ಟು ಹಣ ವಿನಿಯೋಗಿಸಿ ಕಟೌಟ್‌ಗಳನ್ನು ಹಾಕಿಸಿ ಪುತ್ರನನ್ನು ರಾಜಕೀಯಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿಯಂತೆ ಮೋದಿಯ ಎದುರು ನನ್ನ ಅಭಿವೃದ್ಧಿ ಕಾರ್ಯಗಳ ಮುಂದೆ ಖಂಡ್ರೆ ಪುತ್ರ ಕೊಚ್ಚಿಕೊಂಡು ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾಪ್ರದಾನ ಕಾರ್ಯದರ್ಶಿ ಎಂದು ತಮಗೆ ವೀರಶೈವ ಮತದಾರರೆಲ್ಲ ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿ ಕಳೆದ ಬಾರಿ ಚುನಾವಣೆ ಎದುರಿಸಿದ್ದ ಈಶ್ವರ ಖಂಡ್ರೆ ಸೋತು ಸುಣ್ಣವಾಗಿದ್ದರು. ಈ ಬಾರಿ ನಮ್ಮ ಕೆಲ ಶಾಸಕರು ಕಾಂಗ್ರೆಸ್‌ಗೆ ಸಹಕಾರ ಮಾಡ್ತಾರೆ ಎಂಬ ಭ್ರಮೆಯಲ್ಲಿರುವ ಖಂಡ್ರೆ ವಿರುದ್ಧ 3 ಲಕ್ಷ ಮತಗಳ ಅಂತರದ ಜಯ ದಾಖಲಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.ಚುನಾವಣೆಯಲ್ಲಿ ಕ್ಷೇತ್ರದ ಎಲ್ಲ ಬಿಜೆಪಿ ಶಾಸಕರು, ಮಾಜಿ ಶಾಸಕರು, ಸಚಿವರು ನನ್ನ ಜೊತೆ ಇದ್ದಾರೆ. ನಮ್ಮೊಳಗಿದ್ದ ಭಿನ್ನಮತಗಳೆಲ್ಲ ಪರಿಹಾರವಾಗಿವೆ. ನನಗೆ ಮತ ಹಾಕುವದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರದಾನಿಯಾಗಿಸಲು ಮತ ಹಾಕಿದಂತೆ ಎಂದು ಭಗವಂತ ಖೂಬಾ ತಿಳಿಸಿದರು.
ಜಿಲ್ಲಾಡಳಿತ ನಿಷ್ಪಕ್ಷಪಾತವಾಗಿರಲಿ, ಇಲ್ಲವಾದಲ್ಲಿ ಕಾರ್ಯಕರ್ತರು ಸಹಿಸೋಲ್ಲ: ಜಿಲ್ಲಾಡಳಿತ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಕರ್ತವ್ಯ ನಿರ್ವಹಿಸಬಾರದು. ನಿಷ್ಟಕ್ಷಪಾತ, ಪಾರದರ್ಶಕ ಚುನಾವಣೆ ನಡೆಸಬೇಕು ಇಲ್ಲವಾದಲ್ಲಿ ನಮ್ಮ ಕಾರ್ಯಕರ್ತರು ಸಹಿಸೋಲ್ಲ ಎಂದು ಬಿಜೆಪಿಯ ಘೋಷಿತ ಅಭ್ಯರ್ಥಿ ಭಗವಂತ ಖೂಬಾ ಎಚ್ಚರಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್, ಡಾ. ಅವಿನಾಶ ಜಾಧವ್, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಸುಭಾಷ ಗುತ್ತೆದಾರ, ಎಂಜಿ ಮೂಳೆ ಸೇರಿದಂತೆ ಮತ್ತಿತರರು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ನಾವು ಭಗವಂತ ಖೂಬಾ ಅವರನ್ನು ಗೆಲ್ಲಿಸುತ್ತೇವೆ ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ, ಅಮರನಾಥ ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಇದ್ದರು.